Advertisement

ಸಾಯುವ ಮುನ್ನವೇ ಸ್ಮಶಾನ ಸಿದ್ಧ!

05:59 PM May 04, 2021 | Team Udayavani |

ವರದಿ:­ಶ್ರೀಶೈಲ ಕೆ. ಬಿರಾದಾರ

Advertisement

ಬಾಗಲಕೋಟೆ: ಕೊರೊನಾ 2ನೇ ಅಲೆ ಹಲವರ ಬದುಕಿಗೆ ನಿತ್ಯ ಬರೆ ಇಡುತ್ತಿದೆ. ಜಿಲ್ಲಾ ಕೇಂದ್ರವಾದ ಬಾಗಲಕೋಟೆಯೇ ಸೇಫಾಗಿಲ್ಲ ಎಂಬ ಮಾತು ಕೇಳಿ ಬರುತ್ತಿದ್ದು, ಜಿಲ್ಲೆಯ ಎಲ್ಲ ತಾಲೂಕು ಹೋಲಿಸಿದರೆ ಬಾಗಲಕೋಟೆ ತಾಲೂಕಿನಲ್ಲಿ ನಿತ್ಯವೂ ಸೋಂಕಿತರ ಸಂಖ್ಯೆ ದ್ವಿಶತಕ ದಾಟುತ್ತಿದೆ.

ಹೌದು, ಕೊರೊನಾ ಕಠಿಣ ಕಪ್ಯೂì ಜಾರಿಗೊಳಿಸಿದರೆ ಜನರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಇಲ್ಲದ ಕಾರಣ ಹೇಳಿ ರಸ್ತೆಯಲ್ಲಿ ತಿರುಗಾಟ ನಿಲ್ಲಿಸಿಲ್ಲ. ಅಗತ್ಯ ಇದ್ದವರೂ ಅಂತಹ ವ್ಯಕ್ತಿಗಳಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ. ಇದೆಲ್ಲದರ ಮಧ್ಯೆ ನವನಗರದಲ್ಲಿ ಸೋಂಕಿತರು ದಿನೇ ದಿನೇ ಹೆಚ್ಚುತ್ತಿದ್ದಾರೆ. ಸಾವು-ನೋವುಗಳೂ ಹೆಚ್ಚುತ್ತಿವೆ.

ರ್ಯಾಪಿಡ್‌ ಮತ್ತು ಆರ್‌ಟಿಪಿಆರ್‌ ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದು, ಅವರು ಮೃತಪಟ್ಟರೆ ಮಾತ್ರ ಕೊರೊನಾದಿಂದ ಸಾವು ಎಂದು ಪರಿಗಣಿಸಲಾಗುತ್ತಿದೆ. ತೀವ್ರ ಉಸಿರಾಟ ಸಮಸ್ಯೆ, ಕೆಮ್ಮು, ನೆಗಡಿ, ಜ್ವರ ಅಥವಾ ಸಿಟಿ ಸ್ಕಾÂ ನ್‌ನಲ್ಲಿ ಪಾಸಿಟಿವ್‌ ಬಂದು ಮೃತಪಟ್ಟರೆ ಅವರ ಲೆಕ್ಕವನ್ನು ಕೊರೊನಾ ಸಾವು ಗುಂಪಿಗೆ ಸೇರುತ್ತಿಲ್ಲ. ಜಿಲ್ಲೆಯ ಸುಮಾರು 24 ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆ ಲಭ್ಯವಿದ್ದು, ಈ ಆಸ್ಪತ್ರೆಗಳಲ್ಲಿ ನಿತ್ಯವೂ 2ರಿಂದ ಮೂವರು ಮೃತಪಡುತ್ತಿದ್ದಾರೆ. ಆ ಲೆಕ್ಕವನ್ನು ಪರಿಗಣಿಸುತ್ತಿಲ್ಲ ಎನ್ನಲಾಗಿದೆ.

ಜಿಲ್ಲಾ ಕೋವಿಡ್‌ ಆಸ್ಪತ್ರೆ ಹಾಗೂ ನಗರದ ಪ್ರಮುಖ ಖಾಸಗಿ ಕೋವಿಡ್‌ ಆಸ್ಪತ್ರೆಯ ಆವರಣಗಳಂತೂ ಭಯಾನಕ ಸ್ಥಿತಿಯಲ್ಲಿವೆ. ಸೋಂಕಿತರು ಆಸ್ಪತ್ರೆಯ ಒಳಗಿದ್ದರೆ, ಆಸ್ಪತ್ರೆಯ ಹೊರಗೆ ಸೋಂಕಿತರ ಕಡೆಯವರ ಗೋಳು-ನೋವು-ದುಃಖ ನೋಡಲಾಗದ ಸ್ಥಿತಿ ತಲುಪಿದೆ. ಸೋಂಕಿತರು ಪರದಾಡುತ್ತಿದ್ದರೆ, ಅತ್ತ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ, ಕೆಲ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಮಾನವೀಯತೆ ಎಂಬುದು ಮರೆತು ಹಣ ಗಳಿಸುವ ಜಾಲದಲ್ಲಿ ತೊಡಗಿರುವುದೂ ಸೋಮವಾರ ಪತ್ತೆಯಾಗಿದೆ.

Advertisement

ರೆಮ್‌ಡಿಸಿವಿಯರ್‌ ಚುಚ್ಚು ಮದ್ದನ್ನು 18ರಿಂದ 25 ಸಾವಿರಕ್ಕೆ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ವೇಳೆ 11 ಜನ ಸಿಕ್ಕು ಬಿದ್ದಿದ್ದಾರೆ. ಇಂತಹ ಕೊರೊನಾ ಕರಾಳ ದಿನಗಳಲ್ಲೂ ಹಣ ಮಾಡುವ ದಂಧೆಯಲ್ಲಿ ತೊಡಗಿದವರನ್ನು ದೇವರು ಸುಮ್ಮನೆ ಬಿಡ್ತಾನಾ ಎಂಬುದು ಕೆಲವರ ಆಕ್ರೋಶ. ತಿರುಗಾಟ ನಿಲ್ಲಲಿ: ಜಿಲ್ಲಾ ಕೇಂದ್ರವಾದ ಬಾಗಲಕೋಟೆಯ ವಿದ್ಯಾಗಿರಿ ಹಾಗೂ ನವನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ನಿಖರ ಕಾರಣ, ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಕೂಡ ಗಂಭೀರತೆಯಿಂದ ಕೆಲಸ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಇಷ್ಟೆಲ್ಲ ಆದರೂ, ನವನಗರ, ವಿದ್ಯಾಗಿರಿಯಲ್ಲಿ ಜನರ ಓಡಾಟ ನಿಂತಿಲ್ಲ. ಪೊಲೀಸರು ಕೈಮುಗಿದು ಕೇಳಿಕೊಂಡರೂ ಪ್ರಭಾವಿಗಳಿಂದ ಕರೆ ಮಾಡಿಸಿ, ಇಲ್ಲವೋ ಆಸ್ಪತ್ರೆ, ಔಷಧ ತರುವ ನೆಪ ಹೇಳಿ ತಿರುಗಾಡುವ ಪ್ರಯತ್ನ ನಡೆಯುತ್ತಿವೆ.

ಖಾಸಗಿ ಹಾಗೂ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಸಾವುಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ಒಂದು ವರ್ಷಗಳ ಕಾಲ ಕೊರೊನಾ ಮೊದಲ ಅಲೆಗೆ (2020ರ ಏಪ್ರಿಲ್‌ನಿಂದ ನವ್ಹೆಂಬರ್‌ ವರೆಗೆ) 136 ಜನರು ಮೃತಪಟ್ಟಿದ್ದರು. ಆದರೆ, 2ನೇ ಅಲೆ ಕಳೆದ ಮಾರ್ಚ್‌ ಮೊದಲ ವಾರದಿಂದ ಜಿಲ್ಲೆಗೆ ಕಾಲಿಟ್ಟಿದ್ದು, ಇಲ್ಲಿಯವರೆಗೆ ಎರಡು ತಿಂಗಳಲ್ಲಿ 22 ಜನರು ಬಲಿಯಾಗಿದ್ದಾರೆ. ಸೋಮವಾರ ಒಂದೇ ದಿನ 5 ಜನ ಮೃತಪಟ್ಟಿದ್ದಾರೆ. 73 ವರ್ಷದ ಪುರುಷ, 63 ವರ್ಷ ಮಹಿಳೆ, 55 ವರ್ಷದ ಮಹಿಳೆ, 36 ಮತ್ತು 50 ವರ್ಷದ ಪುರುಷರು ಸೇರಿ ಒಟ್ಟು ಐದು ಜನರು ಸೋಮವಾರ ಖಾಸಗಿ ಹಾಗೂ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಸಾಯುವ ಮುನ್ನ ಸ್ಮಶಾನ ಸಿದ್ಧ: ಸೋಂಕಿನಿಂದ ನಿತ್ಯ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಗೆ ನಿಯೋಜನೆಗೊಂಡ ಕೋವಿಡ್‌ ಆಸ್ಪತ್ರೆ ಹಾಗೂ ನಗರಸಭೆಯ ಸಿಬ್ಬಂದಿ, ಭೀತಿಯಲ್ಲೇ ಅಂತ್ಯಕ್ರಿಯೆ ನೆರವೇರಿಸುತ್ತಿದ್ದಾರೆ. ನಗರದ ಶಿರೂರ ರೇಲ್ವೆ ಗೇಟ್‌ ಬಳಿ ಇರುವ ಸ್ಮಶಾನದಲ್ಲಿ ನಿತ್ಯವೂ 5ರಿಂದ 10 ಗುಂಡಿಗಳನ್ನು ಮುಂಚಿತವಾಗಿಯೇ ತೋಡಿ ಇಡಲಾಗುತ್ತಿದೆ. ಸೋಮವಾರ ಜಿಲ್ಲಾಡಳಿತದ ಲೆಕ್ಕಕ್ಕೆ ಐವರು ಮೃತಪಟ್ಟಿದ್ದು, ಸ್ಮಶಾನದಲ್ಲಿ ಏಳು ಗುಂಡಿ ತೋಡಲಾಗಿತ್ತು. ಮಧ್ಯಾಹ್ನದಿಂದ ಸಂಜೆಯವರೆಗೂ ನಗರಸಭೆಯ ಜೆಸಿಬಿ ಯಂತ್ರ, ಸ್ಮಶಾನದಲ್ಲಿ ಗುಂಡಿ ತೋಡುವ ಕಾರ್ಯದಲ್ಲಿ ತೊಡಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next