ರಬಕವಿ-ಬನಹಟ್ಟಿ: ಸಾವಿನ ದವಡೆಯಿಂದ ಪಾರು ಮಾಡಿ ಪುನರ್‌ಜನ್ಮ ನೀಡಿದ ವ್ಯಕ್ತಿಗೆ ಸನ್ಮಾನ ಮಾಡುವುದರೊಂದಿಗೆ ಅದರ ನೆನಪಿಗಾಗಿ ಸಾವಿರಾರು ಜನರಿಗೆ ಔತಣಕೂಟ ಏರ್ಪಡಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿಯ ರಾಮಪೂರದಲ್ಲಿ ನಡೆದಿದೆ.
ಜನ್ಮದಿನ, ಶೃದ್ಧಾಂಜಲಿ ಕಾರ್ಯಕ್ರಮಗಳಿಗೆ ಔತನಕೂಟ ಸಹಜ. ಆದರೆ ಸಾವಿನ ದವಡೆಯಿಂದ ಪಾರು ಮಾಡಿದ ವ್ಯಕ್ತಿಯನ್ನು ಸನ್ಮಾನಿಸಿ ಸಾವಿರಾರು ಜನರಿಗೆ ಔತನಕೂಟ ಏರ್ಪಡಿಸಿದ್ದು ವಿಶೇಷವಾಗಿತ್ತು.
ನಡೆದಿದ್ದೇನು ?
ಇತ್ತೀಚಿಗೆ ಬೆಳಗಾವಿ ಜಿಲ್ಲೆಯ ಮಲ್ಲಾಪುರ ಗ್ರಾಮದ ಬಳಿ ಘಟಪ್ರಭಾ ನದಿಗೆ ಕಾರು ಉರುಳಿ ಕೊಚ್ಚಿ ಹೋಗಿತ್ತು. ಇಬ್ಬರು ಪ್ರಯಾಣಿಕರಿದ್ದ ಕಾರಿನಿಂದ ಓರ್ವ ಮಾತ್ರ ಹೊರ ಬಂದು ಈಜಿ ದಡ ಸೇರಿದ್ದಾನೆ. ಮತ್ತೋರ್ವ ಪ್ರಯಾಣಿಕ ಖಲೀಲ ರಾಜನ್ನವರ ವಾಹನದಲ್ಲಿ ಸಿಲುಕಿಕೊಂಡಿರುವುದನ್ನು ಗಮನಿಸಿದ ಮಲ್ಲಾಪುರದ ಯುವಕ ವಿಠ್ಠಲ ಒಡೆಯರ್ ತಕ್ಷಣ ನದಿಗೆ ಹಾರಿ ಕಾರನ್ನು ತಲುಪಿ, ಪ್ರಯಾಣಿಕನನ್ನು ಸುರಕ್ಷಿತವಾಗಿ ಹೊರಗೆಳೆದು ನದಿಯ ದಡಕ್ಕೆ ಕರೆದುಕೊಂಡು ಬಂದಿದ್ದಾನೆ.
ರಾಮಪೂರದ ಖಲೀಲ ರಾಜನ್ನವರ ತನ್ನ ಪ್ರಾಣ ಉಳಿಸಿದ ಸಂಭ್ರಮಕ್ಕಾಗಿ ಆ.11ರ ಶುಕ್ರವಾರ ರಾಮಪೂರದ ತಮ್ಮ ಮನೆ ಮುಂದೆ ರಬಕವಿ-ಬನಹಟ್ಟಿಯ ಸಾವಿರಾರು ಜನರಿಗೆ ಔತಣಕೂಟದೊಂದಿಗೆ ಯುವಕ ವಿಠ್ಠಲ ಒಡೆಯರ್ ಅವರನ್ನು ಸನ್ಮಾನಿಸಿದ ವಿಶೇಷ ಘಟನೆ ನಡೆದಿದೆ.