Advertisement

“ಗೇಟ್‌ ವೇ ಆಫ್ ಡ್ರಗ್ಸ್‌’ಬಗ್ಗೆ ಜಾಗೃತಿಯೇ ಕಡಿವಾಣ

11:44 PM Mar 13, 2023 | Team Udayavani |

ನಮ್ಮ ಮಕ್ಕಳನ್ನು ಖೆಡ್ಡಾಕ್ಕೆ ಬೀಳಿಸಲೆಂದೇ ಮಾದಕ ವಸ್ತುವಿನ ಮಾರಾಟ ಜಾಲ ಕಾಯುತ್ತಿರುತ್ತದೆ. ಡ್ರಗ್ಸ್‌ ಪೆಡ್ಲರ್‌ಗಳು ಮಿಕಗಳಿಗಾಗಿ ಹುಡುಕುತ್ತಿರುತ್ತಾರೆ. ಇಂಥ ಖೆಡ್ಡಾಗಳಿಗೆ ಬೀಳದಂತೆ ಯುವಜನರಲ್ಲಿ ಜಾಗೃತಿ ಮೂಡಿಸಬೇಕಾದುದು ಎಲ್ಲರ ಕರ್ತವ್ಯ. ಈ ವಿಷಯದಲ್ಲಿ ಸಮಾಜವೇ ಮಾದರಿ ಪಾಠಶಾಲೆಯಾಗಬೇಕು. ಜಿಲ್ಲಾಡಳಿತ, ಪೊಲೀಸ್‌ ವ್ಯವಸ್ಥೆ, ಜನಪ್ರತಿನಿಧಿಗಳು ಎಲ್ಲರೂ ಒಂದಾಗಲೇಬೇಕು.

Advertisement

ಮಂಗಳೂರು: ಇದೇ “ಗೇಟ್‌ ವೇ ಆಫ್ ಡ್ರಗ್ಸ್‌’ !
ಈ ಗೇಟಿನೊಳಗೆ ಒಳ ಹೋಗದಂತೆ ನಮ್ಮ ಯುವಜನರನ್ನು ತಡೆಯುವಲ್ಲಿ ಸಮಾಜ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಸಫ‌ಲರಾದರೆ ಡ್ರಗ್ಸ್‌ ಹಾವಳಿಯೆಂಬ ಹೆಬ್ಟಾವನ್ನೇ ಕಿತ್ತೆಸೆಯಬಹುದು.

ಉದಯವಾಣಿ ತಂಡವು ಮಾದಕ ಜಗತ್ತಿನ ನೆರಳಿನ ಬಗ್ಗೆ ಸರಣಿ ಆರಂಭಿಸಿದಾಗ ಹಲವರನ್ನು ಸಂಪರ್ಕಿಸಿ, ಮಾತನಾಡಿಸಿದೆವು. ಎಲ್ಲರ ಮೊದಲ ಮಾತೆಂದರೆ, “ಮನೆಯಲ್ಲಿ ಮಕ್ಕಳು ಪಾರ್ಟಿಗೆ ಹೋಗುತ್ತಾರೆಂದರೆ ಒಪ್ಪಿ ಬಿಡುತ್ತೇವೆ. ಯಾಕೆಂದರೆ ಪಾರ್ಟಿ ಈಗ ಸಾಮಾನ್ಯ. ಆದರೆ ಕೆಲವು ದಿನಗಳ ಬಳಿಕ ಆ ಪಾರ್ಟಿಯ ಹುಚ್ಚು ಎಷ್ಟರಮಟ್ಟಿಗೆ ಇರುತ್ತದೆಂದರೆ ತಮ್ಮ ಓದು-ಕಲಿಕೆ, ಮನೆ-ಕುಟುಂಬ ಬಿಡಲೂ ಸಿದ್ಧರಿರುತ್ತಾರೆ’ ಎಂಬುದು. ಇದು ಒಬ್ಬರ ಮಾತಲ್ಲ. ಹಲವರ ಅನುಭವ.

ಹಾಗಾದರೆ ಅಂಥದೊಂದು ವ್ಯಸನದ ಮಾದರಿಯಲ್ಲಿ ಬೆಳೆಯುವ ಪಾರ್ಟಿಗಳಲ್ಲಿ ಏನು ನಡೆಯಬಹುದು? ಎಂಬ ಕುತೂಹಲಕ್ಕೆ ಒಮ್ಮೆ ಹೊಕ್ಕರೆ ತೆರೆದುಕೊಳ್ಳುವುದೇ ಮಾದಕ ಜಗತ್ತು. ವಿಚಿತ್ರವೆಂದರೆ ಎಲ್ಲರೂ ಮಾದಕ ಜಗತ್ತಿಗೆ ಪ್ರವೇಶವಾಗುವುದು ಚಿಕ್ಕದೊಂದು ಕಿಂಡಿಯಿಂದ ! ಆ ಚಿಕ್ಕ ಕಿಂಡಿಯೇ ಗೇಟ್‌ ವೇ ಆಫ್ ಡ್ರಗ್ಸ್‌ !

ಸಾಮಾನ್ಯವಾಗಿ ಯಾರೇ ಆಗಲಿ, ಆರಂಭದಿಂದಲೇ ನೇರವಾಗಿ ಮಾದಕ ವ್ಯಸನಿಗಳಾಗಲು ಸಾಧ್ಯವಿಲ್ಲ. ಅಂಥದೊಂದು ವ್ಯಸನಕ್ಕೆ ಕೊಂಡೊಯ್ಯುವ ವಿವಿಧ ಹಂತಗಳು, ಮಾರ್ಗಗಳು ಹಾಗೂ ಚಟಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಅವುಗಳ ಅಪಾಯದ ಬಗ್ಗೆ ಬಾಲ್ಯದಲ್ಲಿಯೇ ಮಕ್ಕಳಿಗೆ ಮಾಹಿತಿ ಒದಗಿಸುವುದು ಕ್ಷೇಮ ಎಂಬುದು ಹಲವರ ಸಲಹೆ.

Advertisement

ಏನಿದು “ಗೇಟ್‌ ವೇ ಆಫ್ ಡ್ರಗ್ಸ್‌?’
ಹದಿ ಹರಯದ ಕುತೂಹಲ, ಮೋಜು ಮಸ್ತಿಯ ನೆಪದಲ್ಲಿ ನಡೆಯುವ ಪಾರ್ಟಿಗಳಲ್ಲಿ ಕಾನೂನುಬದ್ಧ ಮಾದಕ ವಸ್ತುಗಳ ಸೇವನೆ, ಅದರ ಅಮಲಿನ ಅನುಭವವೇ ಹತ್ತಾರು ನಿಷೇಧಿತ ಡ್ರಗ್ಸ್‌ಗಳತ್ತ ಕೊಂಡೊಯ್ಯುತ್ತದೆ. ಆರಂಭದಲ್ಲಿ ಸ್ನೇಹಿತರ/ಸ್ನೇಹಿತೆಯರ ಕೂಟ, ಸಣ್ಣ ಪಾರ್ಟಿ ಇತ್ಯಾದಿಗಳಲ್ಲಿ ಕುತೂಹಲ, ಒತ್ತಡ ಅಥವಾ ಮೋಜಿನ ನೆಪದಲ್ಲಿ ಧೂಮಪಾನ, ಅಲ್ಕೋಹಾಲ್‌ ಸೇವನೆ ಆರಂಭಿಸುತ್ತಾರೆ. ಆದರೆ ಅದು ಚಟವಾಗಿ ಬೆಳೆದು, ಕೆಲವರ ಸಂಪರ್ಕವಾಗಿ ನಿಧಾನಗತಿಯಲ್ಲಿ ಕದ್ದುಮುಚ್ಚಿ ನಿಷೇಧಿತ ಡ್ರಗ್ಸ್‌ ಬಳಕೆಗೆ ತೊಡಗುತ್ತಾರೆ. ಕೆಲವು ಪಬ್‌ಗಳು ಏರ್ಪಡಿಸುವ ವಿಶೇಷ ಪಾರ್ಟಿಗಳು, ಕೆಲವು ನಿಷೇಧಿತ ಡ್ರಗ್ಸ್‌ಗಳ ಸೇವನೆಗೆಂದೇ ಆಯ್ದ ಗ್ರಾಹಕರಿಗೆಂದೇ ಆಯೋಜಿಸುವ “ವಿಐಪಿ’ ಪಾರ್ಟಿಗಳಿಗೆ ಹೋಗತೊಡಗುತ್ತಾರೆ. ಅಲ್ಲಿಗೇ ಮಾದಕ ಜಗತ್ತಿನ ಗೇಟು ದಾಟಿ ಒಳ ಹೊಕ್ಕಂತೆಯೇ. ಕುಡಿತ ಜಾಸ್ತಿಯಾದಾಗ ಗುರುತಿಸಬಹುದು. ಆದರೆ ನಿಷೇಧಿತ ಡ್ರಗ್ಸ್‌ಗಳ ಬಳಕೆ ಬಗ್ಗೆ ತತ್‌ಕ್ಷಣವೇ ತಿಳಿಯದು.

ಸಾಮಾನ್ಯವಾಗಿ ಹದಿಹರೆಯದ ಮಕ್ಕಳು ಕುತೂಹಲದ ಮೂಲಕವೇ ಕುಡಿತ, ಬೀಡಿ, ಸಿಗರೇಟ್‌ನಂತಹ ಚಟದಲ್ಲಿ ತೊಡಗಿ ಈ ಡ್ರಗ್ಸ್‌ ಮಾಯಾ ಜಾಲಕ್ಕೆ ಬೀಳುತ್ತಾರೆ. ಬಳಿಕ ಪಾರ್ಟಿ, ಟೂರ್‌, ಸ್ಟಡಿ ಎಂಬ ನೆಪದಲ್ಲಿ ತಾವಿರುವ ಏಕಾಂತ ಜಾಗವನ್ನೇ ತಮ್ಮ ಅಡ್ಡೆಯನ್ನಾಗಿಸಿಕೊಳ್ಳುತ್ತಾರೆ. ಸಿಗರೇಟ್‌, ಕುಡಿತದ ಅಮಲಿನ ನಶೆ ತಮ್ಮ ಖುಷಿ, ದುಃಖ ಅಥವಾ ಒತ್ತಡಕ್ಕೆ ಸಾಕಾಗದು ಎಂದು ಅನಿಸಿದಾಗ ಸಹಜವಾಗಿ ಉಳಿದ ಮಾದಕ ವಸ್ತುಗಳ ದಾಸರಾಗುತ್ತಾರೆ. ಆದ್ದರಿಂದ ಈ ಅಪಾಯಕಾರಿ ಮಾದಕ ವಸ್ತುಗಳಿಗೆ ಅವಕಾಶ ಕಲ್ಪಿಸುವ ಗೇಟ್‌ ವೇ ಡ್ರಗ್ಸ್‌ಗಳಿಂದಲೇ ತಮ್ಮ ಮಕ್ಕಳನ್ನು ದೂರವಿರಿಸಬೇಕಿದೆ ಎನ್ನುತ್ತಾರೆ ಮಾದಕ ವಸ್ತುಗಳ ವಿಷಯ ತಜ್ಞರಾದ ಗಣೇಶ್‌ ಮುಲ್ಕಿ ನಾಯಕ್‌.

ಗಾಂಜಾ ಹೂವಿಗಿರುವ ನಿಷೇಧ ಗಿಡಕ್ಕಿಲ್ಲ?
ಗಾಂಜಾದ ಒಣಗಿದ ಹೂವು, ಅದರ ಸೊನೆಯೇ ಮಾದಕ ವಸ್ತುವಾಗಿ ಬಳಸುವಂಥದ್ದು. ನಿಷೇಧಿತ ಎನ್ನಲಾಗಿದ್ದರೂ ಗಾಂಜಾವನ್ನು ಬೆಳೆಸಲಾಗುತ್ತದೆ. ಬಾಂಗ್‌ ಸೇವನೆಗೆ ಒಪ್ಪಿಗೆಯಿದ್ದರೂ ಡ್ರಗ್ಸ್‌ ಸೇವನೆಯಡಿ ತಪಾಸಣೆಗೊಳಪಟ್ಟಾಗ ಸಿಕ್ಕಿಬಿದ್ದು ಪಾಸಿಟಿವ್‌ ಬಂದಲ್ಲಿ ಶಿಕ್ಷಾರ್ಹರು. ಇ- ಸಿಗರೇಟ್‌ ಮಾರಾಟ ನಿಷೇಧಿಸಲ್ಪಟ್ಟಿದ್ದರೂ ಮಂಗಳೂರು ನಗರದ ಜನದಟ್ಟಣೆಯ ಸ್ಥಳಗಳಲ್ಲಿ ಗುಪ್ತವಾಗಿ ಮಾರಾಟವಾಗುತ್ತಿವೆ ಎಂಬ ಆರೋಪ ಇದೆ. ಡ್ರಗ್ಸ್‌ ಪೆಡ್ಲರ್‌ಗಳೇ ವಿದ್ಯಾರ್ಥಿಗಳಿಗೆ, ಯುವಜನರಿಗೆ ಇ- ಸಿಗರೇಟ್‌ನಂತಹ ನಿಷೇಧಿತ ವಸ್ತುಗಳನ್ನು ವಿವಿಧ ಬಣ್ಣ, ರೂಪ, ಸುವಾಸನೆಗಳಲ್ಲಿ ಪೂರೈಸಿ ತಮ್ಮತ್ತ ಸೆಳೆದುಕೊಳ್ಳುತ್ತಾರೆ. ಇಷ್ಟೆಲ್ಲಾ ನಡೆದರೂ ಪೊಲೀಸರು ಸೇರಿದಂತೆ ಸಂಬಂಧಪಟ್ಟ ಯಾವ ಇಲಾಖೆಗಳೂ ಇದರತ್ತ ಗಮನಹರಿಸುವುದೇ ಕಡಿಮೆ ಎಂಬ ಟೀಕೆ ಕೇಳಿಬಂದಿದೆ.

– ಸತ್ಯಾ ಕೆ.

Advertisement

Udayavani is now on Telegram. Click here to join our channel and stay updated with the latest news.

Next