Advertisement

ಕನಿಷ್ಠ ವೇತನ ನೀಡದಿದ್ದರೆ ಗ್ರಾಪಂ ಕೆಲಸ ಬಹಿಷ್ಕಾರ

05:13 PM Sep 05, 2017 | Team Udayavani |

ಚಿಕ್ಕಬಳ್ಳಾಪುರ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಸರ್ಕಾರದ ಆದೇಶದಂತೆ ಕನಿಷ್ಠ ವೇತನ ನೀಡುವಂತೆ ಹಾಗು ನೌಕರರ ಬಡ್ತಿ ನೀಡಲು ಪಿಯುಸಿ ಬದಲು ಎಸ್ಸೆಸ್ಸೆಲ್ಸಿ ಪರಿಗಣಿಸುವಂತೆ ಒತ್ತಾಯಿಸಿ ಜಿಲ್ಲೆಯ ಗ್ರಾಪಂ ನೌಕರರು, ರಾಜ್ಯ ಗ್ರಾಪಂ ನೌಕರರ ಸಂಘದ (ಸಿಐಟಿಯು) ನೇತೃತ್ವದಲ್ಲಿ ನೂರಾರು ಜಿಪಂ ಚಲೋ ನಡೆಸಿ ಪ್ರತಿಭಟನೆ ನಡೆಸಿದರು.

Advertisement

ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯದ ಆವರಣದಲ್ಲಿ ಜಮಾಯಿಸಿದ ಗ್ರಾಪಂ ನೌಕರರು ನಗರದ ಮುಖ್ಯ ಬೀದಿಗಳಲ್ಲಿ ಬೃಹತ್‌ ಪ್ರತಿಭಟನಾ ರ್ಯಾಲಿ ಮೂಲಕ ನಗರದ ಹೊರ ವಲಯದ ಅಣಕನೂರು ಸಮೀಪ ಇರುವ ಜಿಲ್ಲಾಡಳಿತ ಭವನದವರೆಗೂ ಕಾಲ್ನಡಿಗೆ ಮೂಲಕ ಆಗಮಿಸಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಘೋಷಣೆ ಕೂಗಿದರು. ಗ್ರಾಪಂ ನೌಕರರಿಗೆ ಕನಿಷ್ಠ ವೇತನ ಕೊಡದಿದ್ದರೆ ಕೆಲಸ, ಕಾರ್ಯಕ್ಕೆ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು.

ಸಿಎಂ ಆದೇಶ ಪಾಲಿಸಿ: ಗ್ರಾಪಂ ನೌಕರರಿಗೆ ಕನಿಷ್ಠ ವೇತನ ನೀಡುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ
ಅಧ್ಯಕ್ಷತೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರ ಹಾಗೂ ಇಲಾಖೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಸೂಚಿಸಿದ್ದಾರೆ.ಆದರೆ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿಗಳ ಆದೇಶವನ್ನು ಜಾರಿಗೆ ತರಲು ಮೀನಮೇಷ ಎಣಿಸುತ್ತಿದ್ದಾರೆಂದು ಪ್ರತಿಭಟನಾನಿರತ ಗ್ರಾಪಂ ನೌಕರರು ಕಿಡಿಕಾರಿದರು.

ವೇತನ ಬಾಕಿ: ಕನಿಷ್ಠ ಕೂಲಿ ಕಾಯ್ದೆ ಅನ್ವಯ ಗ್ರಾಪಂ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಸ್ವತ್ಛತೆಯಲ್ಲಿ ತೊಡಗಿರುವ ನೌಕರರಿಗೆ 13,600 ರೂ, ಗುಮಾಸ್ತ, ಜವಾನರಿಗೆ ಕನಿಷ್ಠ 10,000 ರೂ. ಜಲಗಾರರಿಗೆ 11,350 ರೂ. ಹಾಗೂ ಕರ ವಸೂಲಿಗಾರರಿಗೆ 13,350 ರೂ. ನೀಡಬೇಕೆಂದು ಸರ್ಕಾರ ಆದೇಶಿಸಿದೆ.ಆದರೆ, ಇದುವರೆಗೂ ಗ್ರಾಪಂಗಳು ತನ್ನ ನೌಕರರಿಗೆ ಕನಿಷ್ಠ ವೇತನ ಕೊಡದೇ ವಂಚಿಸುತ್ತಿವೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತಿತರ ಚಟುವಟಿಕೆಗಳಿಗೆ ಗ್ರಾಪಂಗಳು ನೀಡುವ ಅರೆಬರೆ ವೇತನ ಸಾಲುತ್ತಿಲ್ಲ. ಜಿಲ್ಲೆಯ ಹಲವು ಗ್ರಾಪಂಗಳಲ್ಲಿ ನೌಕರರಿಗೆ ನಾಲ್ಕೈದು ತಿಂಗಳ ವೇತನ ಬಾಕಿ ಇದೆ ಎಂದು ದೂರಿದರು.

ಕನಿಷ್ಠ ಕೂಲಿ ಕೊಡದಿದ್ದರೆ ಕೆಲಸ ಬಹಿಷ್ಕಾರ: ಸರ್ಕಾರದ ಆದೇಶದಂತೆ ಸಾಮಾನ ಕೆಲಸಕ್ಕೆ ಸಮಾನ ವೇತನ ಕೊಡದಿದ್ದರೆ ಕೆಲಸ ಕಾರ್ಯಗಳನ್ನು ಬಹಿಷ್ಕಾರಿಸಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳುವುದಾಗಿ ಪ್ರತಿಭಟನಾನಿರತ ಗ್ರಾಪಂ ನೌಕರರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು. ಸರ್ಕಾರ ಆದೇಶ ನೀಡಿದ್ದರೂ ಬಹಳಷ್ಟು ನೌಕರರಿಗೆ ಜಿಪಂ ಇನ್ನೂ ಅನುಮೋದನೆ ನೀಡಿಲ್ಲ. ಕೂಡಲೇ ನಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಸಭೆ ನಡೆಸಿ ಚರ್ಚೆ ನಡೆಸಬೇಕೆಂದು ಸಂಘದ ಮುಖಂಡರು ಜಿಲ್ಲಾ ಪಂಚಾಯಿತಿ ಅಧಿಕಾರಿಗಳನ್ನು ಆಗ್ರಹಿಸಿದರು.

Advertisement

ಉಪ ಕಾರ್ಯದರ್ಶಿಗೆ ಮನವಿ ಸಲ್ಲಿಕೆ: ಪ್ರತಿಭಟನಾನಿರತ ಸ್ಥಳಕ್ಕೆ ಆಗಮಿಸಿದ ಜಿಪಂ ಉಪ ಕಾರ್ಯದರ್ಶಿ ಡಾ.ಸಿ.ಸಿದ್ದರಾಮಯ್ಯಗೆ ಗ್ರಾಪಂ ನೌಕರರ ಸಂಘದ ಮುಖಂಡರು ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಗ್ರಾಮ ಪಂಚಾಯಿತಿ ನೌಕರರ ನೌಕರರ ಸಂಘದ ಜಿಲ್ಲಾಧ್ಯಕ್ಷ ಗೋವಿಂದರೆಡ್ಡಿ, ಉಪಾಧ್ಯಕ್ಷ ಬಿ.ಎನ್‌. ಮುನಿಕೃಷ್ಣಪ್ಪ, ಕಾರ್ಯದರ್ಶಿ ಪಾಪಣ್ಣ, ಚಿಂತಾಮಣಿ ತಾಲೂಕು ಅಧ್ಯಕ್ಷ ಕೋನಪಲ್ಲಿ ನಾಗರಾಜ್‌, ಮುನಿವೆಂಕಟರೆಡ್ಡಿ, ಗೌರಿಬಿದನೂರಿನ ನರಸಿಂಹಮೂರ್ತಿ, ತಿಪ್ಪಣ್ಣ, ಶಿಡ್ಲಘಟ್ಟದ ಸುದರ್ಶನ್‌, ಬಾಗೇಪಲ್ಲಿ ತಾಲೂಕಿನ ವೆಂಕಟರಾಮಯ್ಯ, ಬಾಬುರೆಡ್ಡಿ ಸೇರಿದಂತೆ ಸೇರಿದಂತೆ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಜವಾನರು, ಗುಮಾಸ್ತರು, ಕರವಸೂಲಿಗಾರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next