ಮೈಸೂರು: ರಾಜ್ಯದಲ್ಲಿರುವ ಗ್ರಾಮ ಪಂಚಾಯಿತಿ ನೌಕರರಿಗೆ ಸರ್ಕಾರದಿಂದ ಇಎಫ್ಎಂಎಸ್ ಮೂಲಕ ವೇತನ ನೀಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದ ಸದಸ್ಯರು ಸೋಮವಾರ ನಗರದ ನಜರ್‌ಬಾದ್‌ನಲ್ಲಿರುವ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯತಿ ನೌಕರರು ಮಾಸಿಕ ಸಂಬಳ ಸಿಗದೆ ಸರ್ಕಾರ ನಿಗದಿಗೊಳಿಸಿರುವ ಕನಿಷ್ಠ ವೇತನ ಜಾರಿಯಾಗದೆ ಕಷ್ಟದಲ್ಲಿದ್ದಾರೆ. ಗ್ರಾಮ ಪಂಚಾಯತಿಯಲ್ಲಿರುವ ಅಂದಾಜು 51,114 ನೌಕರರಿಗೆ ಸರ್ಕಾರದಿಂದ ಇಎಫ್ಎಂಎಸ್ ಮೂಲಕ ವೇತನ ನೀಡಲು ಆದೇಶ ಹೊರಡಿಸಲಾಗಿದೆ.
ಸರ್ಕಾರದ ಆದೇಶದಂತೆ ಗ್ರಾಮ ಪಂಚಾಯತ್ ನೌಕರರಿಗೆ ಇಎಫ್ಎಂಎಸ್ ಮೂಲಕ ವೇತನ ದೊರೆಯಬೇಕು ಹಾಗೂ ಎರಡನೇ ಬಿಲ್ ಕಲೆಕ್ಟರ್‌ಗಳಿಗೆ ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್‌ಗಳಿಗೆ ಆಗಿರುವ ತೊಂದರೆ ನಿವಾರಿಸಬೇಕೆಂದು ಆಗ್ರಹಿಸಿ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ಎಸ್ಸೆಸ್ಸೆಲ್ಸಿ ಪಾಸಾದ 10 ವರ್ಷ ಸೇವೆ ಸಲ್ಲಿಸಿದ ಬಿಲ್ ಕಲೆಕ್ಟರ್‌ಗಳಿಗೆ ಸಿಗುತ್ತಿದ್ದ ಗ್ರೇಡ್-2 ಕಾರ್ಯದರ್ಶಿ ಬಡ್ತಿಯನ್ನು ಮತ್ತೆ ಸಿಗುವಂತೆ ಆದೇಶ ಹೊರಡಿಸಬೇಕು. ಗ್ರಾಮ ಪಂಚಾಯತ್ ನೌಕರರಿಗೆ ಪೆನ್ಶನ್, ವೈದ್ಯಕೀಯ ವೆಚ್ಚ, ಗ್ರಾಜ್ಯುಯೇಟ್ ಸಿಗುವಂತೆ ಆದೇಶ ನೀಡಬೇಕು.
ಜತೆಗೆ ಅವಶ್ಯಕತೆಗಳಿಗೆ ಅನುಗುಣವಾಗಿ ವಿವಿಧ ಹುದ್ದೆಗಳನ್ನು ಸೃಷ್ಟಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ನೌಕರರ ಸಂಘದ ಅಧ್ಯಕ್ಷ ವರುಣ ನಾಗರಾಜ್, ತಾಲೂಕು ಕಾರ್ಯದರ್ಶಿ ಮಣಿಗೌಡ, ತಾಲೂಕು ಪದಾಧಿಕಾರಿ ಬಸವಣ್ಣ ಸೇರಿದಂತೆ ಅನೇಕರು ಭಾಗವಹಿಸಿದ್ದರು.