ದಾವಣಗೆರೆ: ಭವಿಷ್ಯ ರೂಪಿಸಿಕೊಳ್ಳುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಡಾ| ಶಾಮನೂರು ಶಿವಶಂಕರಪ್ಪ ಜನಕಲ್ಯಾಣ ಟ್ರಸ್ಟ್‌ನಿಂದ ಆರ್ಥಿಕ ನೆರವು ನೀಡಲಾಗುವುದು ಎಂದು ಟ್ರಸ್ಟ್ ಕಾರ್ಯದರ್ಶಿ ಅಥಣಿ ಎಸ್. ವೀರಣ್ಣ ಹೇಳಿದ್ದಾರೆ. ದೇವರಾಜ ಅರಸು ಬಡಾವಣೆಯಲ್ಲಿನ ಅನ್ನದಾನೀಶ್ವರ ಶಾಖಾ ಮಠದಲ್ಲಿ ಏರ್ಪಡಿಸಿದ್ದ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡಲಾಗುವುದು. ವಿದ್ಯಾರ್ಥಿಗಳು ಇದನ್ನ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಐಗೂರು ಗ್ರಾಮದ ರೈತನ ಮಗ ಪಿ.ಎಚ್. ಬಸವರಾಜ್ ತಾನು ವೈದ್ಯನಾಗುವ ಹಂಬಲ ವ್ಯಕ್ತಪಡಿಸಿದ್ದಾನೆ. ಆತನಿಗೆ ನಮ್ಮ ಟ್ರಸ್ಟ್ ಬೆನ್ನುಲುಬಾಗಿ ನಿಲ್ಲಲಿದೆ.
ಎಂಬಿಬಿಎಸ್ ವ್ಯಾಸಂಗಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ನಂತರ ವಿದ್ಯಾರ್ಥಿಗಳಿಗೆ ಸ್ವತಂತ್ರವಾಗಿ ಮುಂದೆ ತಾವೇನಾಗಬೇಕು ಎಂಬುದಾಗಿ ನಿರ್ಧರಿಸುವ ಮನೋಭಾವ ಬರುತ್ತದೆ.
ಇದಕ್ಕೆ ಪೋಷಕರು ಸಹ ಪ್ರೋತ್ಸಾಹ ನೀಡಬೇಕು. ವಿದ್ಯಾರ್ಥಿಗಳು ಈ ಉತ್ತೇಜನದಿಂದ ಗುರಿ ಸಾಧಿಧಿಸಿ ಹಣದ ಬೆನ್ನು ಹತ್ತದೆ ಸಮಾಜ ಸೇವೆಗೆ ಸ್ಪಲ್ಪ ಸಮಯವನ್ನಾದರೂ ಮೀಸಲಿಡಬೇಕು ಎಂದು ಅವರು ಕಿವಿಮಾತು ಹೇಳಿದರು.
ನಿವೃತ್ತ ಪ್ರಾಂಶುಪಾಲ ಉಮೇಶ್ ಹಿರೇಮಠ ಮಾತನಾಡಿ, ಶಿಕ್ಷಣ, ಆರೋಗ್ಯ, ಧರ್ಮ ಈ ಮೂರು ಕ್ಷೇತ್ರಗಳನ್ನು ಮರೆಯಬಾರದು. ಮಕ್ಕಳಿಗೆ ಪಠ್ಯೇತರ ಚಟುವಟಿಕೆಯಲ್ಲೇ ಹೆಚ್ಚು ತೊಡಗಿಸುವಂತೆ ಪೊತ್ಸಾಹಿಸಬೇಕೆಂದರು. ಅನ್ನದಾನೀಶ್ವರ ಸಂಸ್ಥಾನ ಮಠದ ನಿಯೋಜಿತ ಉತ್ತರಾಧಿಧಿಕಾರಿ ಮುಪ್ಪಿನ ಬಸವಲಿಂಗದೇವರು ಆಶೀರ್ವಚನ ನೀಡಿದರು.
ಸಿದ್ಧಗಂಗಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಜಸ್ಟಿನ್ ಡಿಸೋಜಾ, ನಿರ್ದೇಶಕ ಡಾ| ಡಿ.ಎಸ್. ಜಯಂತ್, ಅನ್ನದಾನೇಶ್ವರ ಮಠದ ಕಾರ್ಯದರ್ಶಿ ಎನ್.ಡಿ. ಅಡವೆಪ್ಪ, ಖಜಾಂಚಿ ಎನ್.ಎ. ಗಿರೀಶ್ ಟಿ.ಎಚ್. ಎಂ. ಶಿವಕುಮಾರಸ್ವಾಮಿ, ಪತ್ರಕರ್ತ ವೀರಪ್ಪ ಎಂ. ಭಾವಿ ವೇದಿಕೆಯಲ್ಲಿದ್ದರು. ಅಥಣಿ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಐಶ್ವರ್ಯ ಶಾನಭಾಗ್, ಸಿದ್ಧಗಂಗಾ ಕಾಲೇಜಿನ ವಿದ್ಯಾರ್ಥಿ ಪಿ.ಎಚ್. ಬಸವರಾಜ್ ಇತರನ್ನು ಸನ್ಮಾನಿಸಿ, ಗೌರವಿಸಲಾಯಿತು.