Advertisement

ಶತಮಾನ ಪೂರೈಸಿದ ಶಾಲೆಗಳಿಗೆ ಅನುದಾನ

06:17 PM Jan 19, 2022 | Team Udayavani |

ಚಿಕ್ಕೋಡಿ: ಶತಮಾನ ಪೂರೈಸಿದ ನಿಪ್ಪಾಣಿ ತಾಲೂಕಿನ ಮಾಣಕಾಪುರ ಗ್ರಾಮದ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯ ಮೂಲ ಸೌಲಭ್ಯಗಳನ್ನು ಕಲ್ಪಿಸಲು 16.50 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿದೆ.

Advertisement

ಅಲ್ಲದೆ ಅಮೃತ ಮಹೋತ್ಸವ ಪೂರೈಸಿದ ತಾಲೂಕಿನ ಮಾಣಕಾಪುರ, ಕುನ್ನೂರ ಮತ್ತು ಯಮಗರ್ಣಿ ಗ್ರಾಮಗಳ ಸರ್ಕಾರಿ ಪ್ರೌಢಶಾಲೆಗಳಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ತಲಾ 10 ಲಕ್ಷ ರೂ.ಅನುದಾನ ಬಿಡುಗಡೆಗೊಂಡಿದೆ ಎಂದು ಮುಜರಾಯಿ, ವಕ್ಫ್  ಹಾಗೂ ಹಜ್‌ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ನಿಪ್ಪಾಣಿ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಡಿಭಾಗದಲ್ಲಿ ಶಿಕ್ಷಣಕ್ಕೆ ಮಹತ್ವ ನೀಡಲಾಗುತ್ತಿದೆ. ಕ್ಷೇತ್ರದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ನಿಟ್ಟಿನಲ್ಲಿ ಮೊದಲಿನಿಂದ ಅವಿರತವಾಗಿ ಪ್ರಯತ್ನಿಸುತ್ತಿದ್ದೇವೆ. ಅದರ ಫಲವಾಗಿ ತಾಲೂಕಿನ ಅಪ್ಪಾಚಿವಾಡಿ, ಮಾಣಕಾಪೂರ ಗ್ರಾಮಗಳ ಮತ್ತು ಸ್ಥಳೀಯ ಸರ್ಕಾರಿ ಪ್ರೌಢಶಾಲೆಗಳನ್ನು ಉನ್ನತೀಕರಣಗೊಳಿಸಿ ಅಲ್ಲಿ ಪದವಿ ಪೂರ್ವ  ಮಹಾವಿದ್ಯಾಲಯಗಳನ್ನು ಆರಂಭಿಸಲು ಅನುಮತಿ ದೊರಕಿದೆ ಎಂದರು.

ಕಳೆದ ಎರಡು ವರ್ಷಗಳಿಂದ ಸರ್ಕಾರಿ ಪದವಿ ಮಹಾವಿದ್ಯಾಯವೂ ನಗರದಲ್ಲಿ ಆರಂಭಗೊಂಡಿದ್ದು, 168 ವಿದ್ಯಾರ್ಥಿಗಳು ಪದವಿ ಓದುತ್ತಿದ್ದಾರೆ. ನಗರಸಭೆಯಿಂದ 2 ಎಕರೆ ಜಾಗ ಕಲ್ಪಿಸಿಕೊಡಲಾಗಿದೆ. ನಗರ ಹಾಗೂ ಸುತ್ತಮುತ್ತಲಿನ ವಿದ್ಯಾರ್ಥಿಗಳು ಪದವಿಯವರೆಗೆ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಶಿಕ್ಷಣ ಪೂರೈಸಲು ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.

ಮುಂದಿನ ಶೈಕ್ಷಣಿಕ ಸಾಲಿನಿಂದ ತಾಲೂಕಿನ ಮಾಣಕಾಪೂರ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ಮತ್ತು 10ನೇ ಕನ್ನಡ ಮಾಧ್ಯಮ ತರಗತಿ ಆರಂಭಿಸಲು ಅನುಮತಿ ದೊರಕಿದೆ. ಸ್ಥಳೀಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮ ಪ್ರೌಢಶಾಲೆಯ ಜೊತೆಯಲ್ಲಿ ಉರ್ದು ಮಾಧ್ಯಮ ವಿಭಾಗದ 8, 9 ಮತ್ತು 10ನೇ ತರಗತಿಗಳನ್ನು ಪ್ರಾರಂಭಿಸಲು ಅನುಮತಿ ದೊರಕಿದೆ. ಶೈಕ್ಷಣಿಕ ಕ್ಷೇತ್ರದಲ್ಲಿಯ ಈ ಅಭಿವೃದ್ಧಿಗಳಿಂದಾಗಿ ಮಕ್ಕಳಿಗೆ ವಿಶೇಷವಾಗಿ ಹೆಣ್ಣುಮಕ್ಕಳಿಗೆ ದೂರ ಹೋಗಿ ಕಲಿಯುವ ಅವಶ್ಯಕತೆಯಿಲ್ಲ. ಮಕ್ಕಳಿಗೆ ಆಗುತ್ತಿದ್ದ ಅನಾನುಕೂಲತೆ, ಸಂಚಾರ ತಪ್ಪಲಿದೆ ಎಂದರು.

Advertisement

ಕ್ಷೇತ್ರ ಶಿಕ್ಷಣಾಧಿಕಾರಿ ರೇವತಿ ಮಠದ, ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಉಪಾಧ್ಯಕ್ಷೆ ನೀತಾ ಬಾಗಡೆ, ಸದಸ್ಯರು, ಬಿಜೆಪಿ ಸ್ಥಳೀಯ ನಗರ ಘಟಕದ ಅಧ್ಯಕ್ಷ ಪ್ರಣವ ಮಾನವಿ, ಎಪಿಎಂಸಿ ಸದಸ್ಯ ಬಂಡಾ ಘೊರ್ಪಡೆ, ಗೋಪಾಳ ನಾಯಿಕ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next