ಚಿಂಚೋಳಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಸ್ತೆ ಅಗಲೀಕರಣ ಮತ್ತು ಅಪಘಾತ ರಹಿತ ವಲಯ ಕಾಮಗಾರಿ ಪ್ರಾರಂಭಿಸಲು ಸರ್ಕಾರದಿಂದ ಒಂದು ಕೋಟಿ ರೂ. ಅನುದಾನವನ್ನು ಲೋಕೋಪಯೋಗಿ ಇಲಾಖೆಗೆ ನೀಡಿರುವುದರಿಂದ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ.
ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರ ಅಪಘಾತ ವಲಯವೆಂದು ಗುರುತಿಸಿರುವುದರಿಂದ ಕಾಮಗಾರಿ ನಡೆಯುತ್ತಿದೆ. ಅಪಘಾತ ರಹಿತ ವಲಯ ಮಾಡುವುದಕ್ಕಾಗಿ 2017-18ನೇ ಸಾಲಿನಲ್ಲಿ 78 ಲಕ್ಷ ರೂ. ನೀಡಲಾಗಿತ್ತು. ಆದರೆ ಟೆಂಡರ್ ಕಾಮಗಾರಿ ಗುತ್ತಿಗೆ ಪಡೆದುಕೊಂಡಿರುವ ಗುತ್ತಿಗೆದಾರ ಕಾಮಗಾರಿ ಪ್ರಾರಂಭಿಸದೇ ಇರುವುದರಿಂದ ಮತ್ತೆ ಕಾಮಗಾರಿ ವಿಳಂಬವಾಗಿದೆ.
ರಸ್ತೆ ಅಗಲೀಕರಣ, ಚರಂಡಿ ನಿರ್ಮಾಣ, ವಿದ್ಯುತ್ ಸಂಪರ್ಕ ಮತ್ತು ವಿದ್ಯುತ್ ಕಂಬಗಳನ್ನು ಅಳವಡಿಸುವುದು, ರಸ್ತೆ ವಿಭಜಕ ಕಾಮಗಾರಿ ಪೂರ್ಣಗೊಳಿಸಿ ಬಸವೇಶ್ವರ ವೃತ್ತವನ್ನು ಸೌಂದರೀಕರಣ ಮಾಡುವುದು ಇಲಾಖೆ ಮುಖ್ಯ ಉದ್ದೇಶವಾಗಿದೆ.