ಮೈಸೂರು: ವಿಶ್ವವಿದ್ಯಾಲಯಗಳು ಗುಣಮಟ್ಟದ ಶಿಕ್ಷಣ ನೀಡಿಕೆ ಮತ್ತು ಸಂಶೋಧನೆಗೆ ಮುಂದಾಗಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಮೈಸೂರು ವಿವಿಯ ಆಡಳಿತ ಸೌಧ ಕ್ರಾಫರ್ಡ್ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ವಿವಿಧ ಕಟ್ಟಡಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ವಿಶ್ವವಿದ್ಯಾಲಯಗಳು ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನೀಡಬೇಕು. ಇದಕ್ಕೆ ಸರ್ಕಾರದಿಂದ ಯಾವ ರೀತಿಯ ಅನುಕೂಲಗಳು ಆಗಬೇಕು ಎಂಬುದನ್ನು ಶಿಕ್ಷಣ ತಜ್ಞರು ತಿಳಿಸಿದರೆ ಸಂಪೂರ್ಣ ಜವಾಬ್ದಾರಿವಹಿಸಿಕೊಂಡು ಅನುದಾನ ನೀಡಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು.
ರಾಜ್ಯದ ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳಲ್ಲಿ ಪ್ರಮುಖವಾಗಿರುವ ಮೈಸೂರು ವಿಶ್ವ ವಿದ್ಯಾಲಯವು ನಮ್ಮ ರಾಜ್ಯಕ್ಕೆ ಹಲವಾರು ತಜ್ಞರನ್ನು ಕೊಡುಗೆ ನೀಡಿದೆ. ಇಲ್ಲಿ ಪ್ರಮುಖ ಏಳು ಯೋಜನೆಗಳಿಗೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮಾಡುತ್ತಿರುವುದು ಸಂತಸ ತಂದಿದೆ ಎಂದರು.
ಇಂದು ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ನಡೆಸುವುದು ಕಡಿಮೆಯಾಗುತ್ತಿದೆ. ಶಿಕ್ಷಣ ಎಂದರೆ ಉದ್ಯೋಗಕ್ಕಾಗಿ ಮಾತ್ರ ಎಂಬ ಭಾವನೆ ಮೂಡುತ್ತಿದೆ, ಅದು ನಿಲ್ಲಬೇಕು ಎಂದರು. ಮುಂದಿನ ದಿನಗಳಲ್ಲಿ ಶಾಲಾ – ಕಾಲೇಜಿಗೆ ತೆರಳಿ ಶಿಕ್ಷಣ ಪಡೆಯುವ ಪದ್ಧತಿ ದೂರವಾಗಲಿದೆ. ಮನೆಯಲ್ಲಿಯೇ ಕುಳಿತು ಓದುವ, ಪರೀಕ್ಷೆ ಬರೆಯುವ ವ್ಯವಸ್ಥೆ ಜಾರಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿಯೂ ಬದಲಾವಣೆ ಅಗತ್ಯವಿದೆ ಎಂದರು.
ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಮಾತನಾಡಿದರು. ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕುಲಪತಿ ಪ್ರೊ.ಜಿ. ಹೇಮಂತಕುಮಾರ್ ಅಧ್ಯಕ್ಷತೆವಹಿಸಿದ್ದರು.
ಏಳು ಯೋಜನೆಗಳಿಗೆ ಉದ್ಘಾಟನೆ: ಮೈಸೂರು ವಿಶ್ವದ್ಯಾನಿಲಯದ ಕಾನೂನು ಶಾಲಾ ಕಟ್ಟಡ, ಸ್ನಾತಕೋತ್ತರ ಸಾವಯವ ರಾಸಾಯನಿಶಾಸ್ತ್ರ ವಿಭಾಗದ ಕಟ್ಟಡ, ಶತಮಾನೋತ್ಸವ ವಸ್ತು ಸಂಗ್ರಹಾಲಯ ಕಟ್ಟಡ, ವಾಣಿಜ್ಯ ಸಂಕೀರ್ಣ ಕಟ್ಟಡ, ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ವಿಶ್ವವಿದ್ಯಾಲಯದ ನಿವೇಶನದಲ್ಲಿ ನಿರ್ಮಿಸಲಿರುವ ವಿವಿಯ ನೂತನ ಆವರಣದ ಶಂಕುಸ್ಥಾಪನೆ, ದೂರ ಶಿಕ್ಷಣ ಕಾರ್ಯಕ್ರಮದ ಉದ್ಘಾಟನೆ ಮತ್ತು ವಿವಿಯ ಈಜುಕೊಳದ ನೂತನ ಗ್ಯಾಲರಿಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು.