ಖಾನಾಪುರ: ತಾಲೂಕಾ ಪಂಚಾಯತಿ ಸರ್ವಸಾಧಾರಣ ಸಭೆಯಲ್ಲಿ 15ನೇ ಹಣಕಾಸು ಯೋಜನೆ ಅಡಿಯಲ್ಲಿ 2.15 ಕೋಟಿ ವೆಚ್ಚದ ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮತಿ ನೀಡಲಾಯಿತು.
ಪಟ್ಟಣದಲ್ಲಿ ತಾಪಂ ಕಾರ್ಯಾಲಯದಿಂದ ನಿರ್ಮಿಸಲಾದ ಮಾರಾಟ ಮಳಿಗೆ ಖಾಲಿ ಮಾಡಿಸುವ ಕುರಿತು ತಾಪಂ ಸದಸ್ಯರು ಚರ್ಚೆಗೆ ಮುಂದಾದಾಗ ಕೊವಿಡ್-19 ಸಂದರ್ಭದಲ್ಲಿ ಸದ್ಯ ಆ ವಿಷಯ ಬೇಡ. ಕಾನೂನಾತ್ಮಕ ಸರಿಯಾದ ನೆರವು ಪಡೆದು ಮುಂದಿನ ಕ್ರಮ ಕೈಗೊಳ್ಳಬೇಕಿದೆ ಎಂದು ಇಒ ನುಡಿದರು. ಹಲವು ಅನುದಾನ ಬಳಕೆಯಾಗದೇ ಮರಳಿದ್ದು, ಬರುವ ವರ್ಷದಲ್ಲಿ ಹಾಗಾಗದಂತೆ ಸರಿಪಡಿಸಿ ಕೊಳ್ಳಲು ತಾಪಂ ಸದಸ್ಯರು ತಿಳಿಸಿದರು.
ತೊಲಗಿ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನ ಬಳಿ ಎರಡು ವಿದ್ಯುತ್ ಕಂಬ ಹಾಕುವಲ್ಲಿ ವಿಳಂಬವಾಗಿದ್ದು ತಕ್ಷಣ ಈ ಕಾರ್ಯ ನಿರ್ವಹಿಸಲು ಹೆಸ್ಕಾಂಗೆ ಸೂಚಿಸಲಾಯಿತು. ತಾಪಂ ಸದಸ್ಯ ಶ್ರೀಕಾಂತ ಇಟಗಿ ಮಾತನಾಡಿ, ಪಾರಿಶ್ವಾಡದಿಂದ ಖಾನಾಪುರವರೆಗೆ 28 ಕೋಟಿ ರೂ. ರಸ್ತೆ ಕಾಮಗಾರಿ ಟೆಂಡರ್ ಇದ್ದು ಗುತ್ತಿಗೆದಾರರು ಕಡಿಮೆ ಟೆಂಡರ್ ಹಾಕುತ್ತಿರುವುದರಿಂದ ಇನ್ನೂ ಗುತ್ತಿಗೆ ನೀಡಲಾಗಿಲ್ಲ. ಸದ್ಯ ಈ ರಸ್ತೆ ಹಾಳಾಗಿದ್ದು ಮೊರಂ, ಮಣ್ಣು ಹಾಕಿ ತಾತೂ³ರ್ತಿಕವಾಗಿ ರಸ್ತೆ ಸರಿಪಡಿಸಲು ಸೂಚಿಸಿದರು.
ಈ ಕುರಿತು ಲೋಕೋಪಯೋಗಿ ಇಲಾಖೆ ಎಇಇ ಗಿರೀಶ ದೇಸಾಯಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದು ಸಭೆಗೆ ಮಾಹಿತಿ ನೀಡಿದರು.
ತಾಪಂ ಅಧ್ಯಕ್ಷೆ ನಂದಾ ಕೊಡಚವಾಡಕರ ಸಭೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶ್ವೇತಾ ಮಜಗಾಂವಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಸದಸ್ಯರಾದ ಬಸವರಾಜ ಸಾಣಿಕೊಪ್ಪ, ಬಾಳು ಶೇಲಾರ, ಪಾಂಡು ಸಾವಂತ್, ಮಾರುತಿ ಕಮತಗಿ ಮುಂತಾದವರು ಹಾಜರಿದ್ದರು. ಸಭೆಯನ್ನು ಎಸ್. ಎಮ್.ಅಮ್ಮಣಗಿ ನಿರ್ವಹಿಸಿದರು.