Advertisement

ಅನುದಾನ ದುರುಪಯೋಗ: ತನಿಖೆಗೆ ಸದಸ್ಯರ ಆಗ್ರಹ

11:35 AM Mar 02, 2018 | Team Udayavani |

ಚಿಂಚೋಳಿ: ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಸರಕಾರದಿಂದ ನೀಡುವ ನಿರ್ವಹಣೆ ಅನುದಾನ ಸರಿಯಾಗಿ ಉಪಯೋಗ ಆಗುತ್ತಿಲ್ಲ. ಅಲ್ಲಿನ ವೈದ್ಯರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು ಎಂದು ತಾಪಂ ಸದಸ್ಯರು ಒತ್ತಾಯಿಸಿದರು.

Advertisement

ಪಟ್ಟಣದಲ್ಲಿ ತಾಪಂ ಅಧ್ಯಕ್ಷೆ ರೇಣುಕಾ ಚವ್ಹಾಣ ಅವರ ಅಧ್ಯಕ್ಷತೆಯಲ್ಲಿ ನಡೆದ 9ನೇ ಸಾಮಾನ್ಯ ಸಭೆಯಲ್ಲಿ ವಿಪಯ ಪ್ರಸ್ತಾಪಿಸಿದ ಚಂದನಕೇರಾ ತಾಪಂ ಸದಸ್ಯ ರಾಮರಾವ ರಾಠೊಡ ಮತ್ತು ಐನಾಪುರ ತಾಪಂ ಸದಸ್ಯ ಪ್ರೇಮಸಿಂಗ ಜಾಧವ್‌, ಶಿರೋಳಿ ತಾಪಂ ಸದಸ್ಯ ವೆಂಕಟರೆಡ್ಡಿ ಪಾಟೀಲ, ಗ್ರಾಮಗಳಲ್ಲಿರುವ ಆರೋಗ್ಯ ಉಪ ಕೇಂದ್ರಗಳು ಹಾಗೂ ಪಿಎಚ್‌ಸಿಗಳಿಗೆ ಸರಕಾರ ಪ್ರತಿ ವರ್ಷ ನಿರ್ವಹಣೆಗಾಗಿ ಅನುದಾನ ನೀಡುತ್ತಿದೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆಗಾಗಿ ವೈದ್ಯಕೀಯ ಉಪಕರಣ ಖರೀದಿಗಾಗಿ ಹಣ ನೀಡುತ್ತಿದೆ. ಆದರೆ ಕೇವಲ ಸುಣ್ಣ ಬಣ್ಣ ಹಚ್ಚಿ ಅಲ್ಲಿನ ವೈದ್ಯರು ಅನುದಾನ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಚಿಮ್ಮನಚೋಡ, ಸಾಲೇಬೀರನಳ್ಳಿ, ಖರ್ಚಖೇಡ, ಮೋಘಾ, ಸುಲೆಪೇಟ, ಚಂದನಕೇರಾ, ಐನಾಪುರ, ರಟಕಲ್‌, ಗಡಿಕೇಶ್ವರ, ನಿಡಗುಂದಾ, ಕುಂಚಾವರಂ, ಕೋಡ್ಲಿ ಆರೋಗ್ಯ ಕೇಂದ್ರಗಳಿಗೆ ನೀಡಿದ ಅನುದಾನ ಎಷ್ಟು? ಇದರ ಬಗ್ಗೆ ತನಿಖೆ ಮಾಡಿಸಬೇಕು ಎಂದು ಆಗ್ರಹಿಸಿದರು. 

ತೋಟಗಾರಿಕೆ ಇಲಾಖೆಯಲ್ಲಿ ಜನರಿಗೆ ಬೇಕಾಗುವ ಸವಲತ್ತು ಕೊಡುತ್ತಿಲ್ಲ. 2005ರಿಂದ ಸರಕಾರ ನೀಡಿದ ಯೋಜನೆಗಳ ಮಾಹಿತಿಯನ್ನು ಎಲ್ಲ ಸದಸ್ಯರಿಗೆ ನೀಡಬೇಕು ಎಂದು ಹಣಮಂತ ರಾಜಗಿರಿ, ಬಸವಣ್ಣಪ್ಪ ಕುಡಹಳ್ಳಿ, ಕಾವೇರಿ ರಾಮತೀರ್ಥ ಒತ್ತಾಯಿಸಿದರು. ಧರ್ಮಸಾಗರ ತಾಂಡಾದಲ್ಲಿ ಹೊಸದಾಗಿ ಆರೋಗ್ಯ ವಿಸ್ತರಣಾ ಕೇಂದ್ರ ಪ್ರಾರಂಭಿಸಲಾಗಿದೆ. 

ಆದರೆ ಅಲ್ಲಿ ವೈದ್ಯರೇ ಇಲ್ಲ. ಕೇಂದ್ರದ ಬಾಗಿಲು ಮುಚ್ಚಿರುತ್ತದೆ. ಅರಣ್ಯಪ್ರದೇಶದಲ್ಲಿ ಇರುವ ವೃದ್ದ ಮಹಿಳೆಯರಿಗೆ ಕುಂಚಾವರಂಗೆ ಹೋಗಲು ತೊಂದರೆಯಾಗುತ್ತಿದೆ. ಖಾಯಂ ವೈದ್ಯರನ್ನು ನೇಮಿಸಬೇಕು ಎಂದು ವೆಂಕಟಾಪುರ ತಾಪಂ ಸದಸ್ಯೆ ಪಾರ್ವತಿ ಪವಾರ ಆಗ್ರಹಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ| ಮಹ್ಮದ್‌ ಗಫಾರ್‌ ಮಾತನಾಡಿ, ನಾನು ಕಳೆದ ಒಂದು ತಿಂಗಳ ಹಿಂದೆ ಅಷ್ಟೆ ಪ್ರಭಾರ ವಹಿಸಿಕೊಂಡಿದ್ದೇನೆ. ನೀವು ಕೇಳಿದ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತ ಕ್ರಮ ಕೈಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ತಾಪಂ ಉಪಾಧ್ಯಕ್ಷ ರುದ್ರಶೆಟ್ಟಿ ಪಡಶೆಟ್ಟಿ, ಮಹಮ್ಮದ್‌ ಹುಸೇಸ್‌ ನಾಯಕೊಡಿ, ತಾಪಂ ಅಧಿಕಾರಿ ಶಿವಾಜಿ ಡೋಣಿ, ಎಇಇ ಅಶೋಕ ಚವ್ಹಾಣ, ಸುರೇಂದ್ರಕುಮಾರ, ಡಾ| ಧನರಾಜ ಬೊಮ್ಮ, ಕೃಷಿ ಇಲಾಖೆ ಅಧಿಕಾರಿ ಸಿದ್ದಣ್ಣ ಗಡಗಿಮನಿ, ಮೀನುಗಾರಿಕೆ ಇಲಾಖೆ ಅಧಿಕಾರಿ ಪದ್ಮಾವತಿ, ಎಇ ನಾಗನಾಥ, ಜೆಇ ಮುಸಾ ಖಾದ್ರಿ, ವ್ಯವಸ್ಥಾಪಕ ಅಣ್ಣಾರಾವ ಪಾಟೀಲ, ವಿಜಯಕುಮಾರ ದಸ್ತಾಪುರ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next