Advertisement

ಅಜ್ಜಿ ಸಿಟ್ಟಿಗೆ ಹಸುಗೂಸು ಬಲಿ

12:05 PM Dec 26, 2018 | |

ಬೆಂಗಳೂರು: ತಿಂಗಳ ಹಸುಗೂಸಿನ ಕೊಲೆ ರಹಸ್ಯ ಭೇದಿಸಿರುವ ಅಶೋಕನಗರ ಠಾಣೆ ಪೊಲೀಸರು, ಮಗ ಹಾಗೂ ಸೊಸೆಯ ಮೇಲಿನ ಕೋಪಕ್ಕೆ ಹಸುಗೂಸಿನ ಕತ್ತುಹಿಸುಕಿ ಕೊಲೆಗೈದಿದ್ದ ಅಜ್ಜಿಯನ್ನು ಬಂಧಿಸಿದ್ದಾರೆ.

Advertisement

ವಿಜಯಲಕ್ಷ್ಮೀ (54) ಬಂಧಿತ ಆರೋಪಿ. ಮಗ ಕಾರ್ತಿಕ್‌, ಸೊಸೆ ಸ್ಟೆಲ್ಲಾ ಜತೆಗಿನ ನಿರಂತರ ಜಗಳ, ವೈಮನಸ್ಸು, ಹೊಂದಾಣಿಕೆ ಸಮಸ್ಯೆ ಕೋಪದಲ್ಲಿ ಹಸುಗೂಸನ್ನು ಕೊಲೆ ಮಾಡಿದ್ದಾಗಿ ಆರೋಪಿ ವಿಜಯಲಕ್ಷ್ಮೀ ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ತನಿಖೆಯನ್ನು ಹಲವು ಆಯಾಮಗಳಲ್ಲಿ ನಡೆಸಿದ್ದು ಕಾರ್ತಿಕ್‌ ಕುಟುಂಬ ಸದಸ್ಯರು ಎಲ್ಲರನ್ನೂ ಹಲವು ಬಾರಿ ವಿಚಾರಣೆ ನಡೆಸಿದರೂ, ವಿಜಯಲಕ್ಷ್ಮೀ ಗೊಂದಲದ ಹೇಳಿಕೆ ನೀಡುತ್ತಿದ್ದಳು. ಹೀಗಾಗಿ, ಅವರ ಮೇಲೆಯೇ ಬಲವಾದ ಅನುಮಾನ ಮೂಡಿತ್ತು.

ಕೊನೆಗೆ ಆಕೆಯೇ ಮಗ ಹಾಗೂ ಸೊಸೆಯ ನಡುವಿನ ಜಗಳದ ವೈಷಮ್ಯಕ್ಕೆ ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಳು ಎಂದು ಅಧಿಕಾರಿಯೊಬ್ಬರು ತಿಳಿಸಿದರು. ನಿರಂತರ ಜಗಳದಿಂದ ಕೆಲವು ದಿನಗಳ ಹಿಂದೆ ಗಂಡ ಚಿತ್ತರಾಜ್‌ ಹಾಗೂ ವಿಜಯಲಕ್ಷ್ಮೀ ಮನೆಯ ಎದುರುಗಡೆಯಿರುವ ಸಂಬಂಧಿಕರ ಮನೆಯಲ್ಲಿ ವಾಸವಿದ್ದರು.

ವಿಜಯಲಕ್ಷ್ಮೀ ದಿನವೂ ಬಂದು ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ಆರೈಕೆ ಮಾಡುತ್ತಿದ್ದರು ಆದರೆ ಮಗ ಹಾಗೂ ಸೊಸೆ ಜತೆ ಮಾತನಾಡುತ್ತಿರಲಿಲ್ಲ. ಆಗಾಗ್ಗೆ ಜಗಳವೂ ನಡೆಯುತ್ತಿತ್ತು. ಡಿ.21ರ ಬೆಳಗ್ಗೆ ಪಾತ್ರೆ ತೊಳೆಯುವ ವಿಚಾರಕ್ಕೆ ಕಾರ್ತಿಕ್‌, ತಾಯಿ ವಿಜಯಲಕ್ಷ್ಮೀ ನಡುವೆ ಮಾತಿಗೆ ಮಾತು ಬೆಳೆದು ಜಗಳ ನಡೆದಿತ್ತು.

Advertisement

ಹತ್ತು ನಿಮಿಷದಲ್ಲಿ ಕೊಲೆ: ಬೆಳಗ್ಗೆ ಮಗನ ಜತೆ ನಡೆದ ಜಗಳದ ಕೋಪದಲ್ಲಿದ್ದ ವಿಜಯಲಕ್ಷ್ಮೀ, ಸಂಜೆ 5.10ರ ಸುಮಾರಿಗೆ ಮನೆಗೆ ಬಂದಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿಗೆ ಔಷಧಿ ತರಲು ಕಾರ್ತಿಕ್‌ ಹೊರಗಡೆ ಹೋಗಿದ್ದ.

ಸೊಸೆ ಸ್ಟೆಲ್ಲಾ, ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನು ಬೆಡ್‌ ಮೇಲೆ ಮಲಗಿಸಿದ್ದರು. ಮತ್ತೂಂದು ಮಗುವನ್ನು ಹಾಲ್‌ನಲ್ಲಿ ಮಲಗಿಸಿ. ಶೌಚಾಲಯಕ್ಕೆ ತೆರಳಿದ್ದರು. ಮಲಬದ್ಧತೆ ಕಾಯಿಲೆಯಿಂದ ಬಳಲುತ್ತಿದ್ದ ಸೊಸೆ ಸ್ಟೆಲ್ಲಾ ಶೌಚಗೃಹಕ್ಕೆ ತೆರಳಿದರೆ ಕನಿಷ್ಠ 10 ನಿಮಿಷ ಬರುವುದಿಲ್ಲ ಎಂಬುದು ವಿಜಯಲಕ್ಷ್ಮಿಗೆ ಗೊತ್ತಿತ್ತು. ಈ ವೇಳೆ ಬೆಡ್‌ಮೇಲೆ ಮಲಗಿದ್ದ ಮಗುವಿಗೆ ಶಾಲುವಿನಲ್ಲಿ ಕುತ್ತಿಗೆ ಬಿಗಿದು ಕೊಲೆ ಮಾಡಿ ಮಂಚದ ಕೆಳಗೆ ಎಸೆದು.

ಸೊಸೆ ಹೊರಗಡೆ ಬರುತ್ತಿದ್ದಂತೆ ತಾನು ವಾಸವಿದ್ದ ಮನೆಗೆ ತೆರಳಿದ್ದಳು. ಕೆಲಹೊತ್ತಿನ ಬಳಿಕ ಬೆಡ್‌ ಮೇಲೆ ಮಲಗಿದ್ದ ಮಗು ಕಾಣದಿದ್ದಾಗ ಗಾಬರಿಗೊಂಡ ಸ್ಟೆಲ್ಲಾ ಪತಿಗೆ ಕರೆ ಮಾಡಿ ತಿಳಿಸಿ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಮಂಚದ ಅಡಿಯಲ್ಲಿದ್ದ ಮಗುವಿನ ದೇಹ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದರು.

ಕೌಟುಂಬಿಕ ಕಲಹದಿಂದ ಕೃತ್ಯ: ಮಗ ಕಾರ್ತಿಕ್‌ ಸ್ಟೆಲ್ಲಾ ರನ್ನು ಪ್ರೀತಿಸಿ ವಿವಾಹವಾಗಿದ್ದು, ಮನೆಯ ಯಾರೊಬ್ಬರಿಗೂ ಇಷ್ಟವಿರಲಿಲ್ಲ. ಜತೆಗೆ, ಕೆಲಸವನ್ನೇ ಬಿಟ್ಟಿದ್ದ ಕಾರ್ತಿಕ್‌ ಸ್ನೇಹಿತರು ಎಲ್ಲರ ಬಳಿ ಸಾಲ ಮಾಡಿಕೊಂಡಿದ್ದ ಈ ವಿಚಾರವಾಗಿ ಕುಟುಂಬದಲ್ಲಿ ಜಗಳ ನಿರಂತರವಾಗಿತ್ತು. ಹೀಗಾಗಿ ಮನೆ ಬದಲಿಸಿದ್ದೆವು.

ಕಾರ್ತಿಕ್‌ ಎಲ್ಲರಿಗೂ ನನಗೆ ಅವಳಿ- ಜವಳಿ ಮಕ್ಕಳಾಗಿವೆ ಎಂದು ಹೇಳಿಕೊಂಡು ಬರುತ್ತಿದ್ದ. ಆದರೆ, ಅವರ ಆರೋಗ್ಯ ಪಾಲನೆ, ವೈದ್ಯಕೀಯ ಖರ್ಚಿಗೆ ನಮ್ಮನ್ನೇ ಅವಲಂಬಿಸಿದ್ದ. ಆತನ ವರ್ತನೆಗೆ ರೋಸಿಹೋಗಿದ್ದೆ. ಡಿ.21ರಂದು ಬೆಳಗ್ಗೆ ಮಗನ ಜತೆ ನಡೆದ ಜಗಳದಿಂದ ಕೋಪ ಬಂದಿತ್ತು, ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನು ಆಸ್ಪತ್ರೆಗೆ ಗಂಡ- ಹೆಂಡತಿ ಕರೆದೊಯ್ದಿದ್ದರು.

ನಾನು ಒಂದು ಮಗುವನ್ನು ನೋಡಿಕೊಂಡಿದ್ದೆ. ಆದರೆ, ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನು ಕೊಲೆ ಮಾಡಿದರೆ, ಮಗ ಹಾಗೂ ಸೊಸೆಯೇ ಮೇಲೆಯೇ ಬರಲಿದೆ ಎಂದು ಕೋಪದಲ್ಲಿ ತಪ್ಪು ಮಾಡಿಬಿಟ್ಟೆ ಎಂದು ಆರೋಪಿ ವಿಜಯಲಕ್ಷ್ಮೀ ಹೇಳುತ್ತಾಳೆ ಎಂದು ಅಧಿಕಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next