ಬಾಲ್ಯದ ದಿನಗಳಲ್ಲಿ ತಂದೆ-ತಾಯಿಯನ್ನು ಹೊರತುಪಡಿಸಿ ಮಕ್ಕಳಿಗೆ ಅತೀ ಪ್ರಿಯವಾದ ಇನ್ನೊಂದು ಜೀವವೆಂದರೆ ಅದು ಅಜ್ಜಿ. ಬಾಲ್ಯದ ಹೆಚ್ಚು ಸಮಯವನ್ನು ನಾವೂ ಅಜ್ಜಿಯೊಂದಿಗೆ ಕಳೆದಿರುತ್ತೇವೆ. ಏಕೆಂದರೆ, ಅವಳು ನಮ್ಮನ್ನು ಅಪ್ಪ, ಅಮ್ಮನಿಗಿಂತಲೂ ಹೆಚ್ಚು ಪ್ರೀತಿಸುತ್ತಿದ್ದವಳು, ಅಳುವಾಗ ಕಥೆ ಹೇಳಿ ಸಂತೈಸುತ್ತಿದ್ದವಳು, ಅಪ್ಪನ ಕಠಿಣ ಏಟಿನಿಂದ ತಪ್ಪಿಸಿ ಮುದ್ದಿಸುತ್ತಿದ್ದವಳು ಅವಳು. ನಮ್ಮ ಆಟ-ಪಾಠಗಳಲ್ಲಿ ಜೊತೆಗಿದ್ದು ಸರಿ-ತಪ್ಪುಗಳನ್ನು ತಿದ್ದಿ-ತೀಡಿದವಳು ಅವಳು. ಬಹುಶಃ ಬಾಲ್ಯ ಎಂದರೆ ಅದು ಅಜ್ಜಿಯ ಬೆಚ್ಚಗಿನ ಮಡಿಲು ಎಂದರೆ ತಪ್ಪಾಗಲಾರದು.
ಆದರೂ ಅಜ್ಜಿ ನಮಗೆ ಅನೇಕ ಸುಳ್ಳುಗಳನ್ನು ಹೇಳಿ ಬೆಳೆಸಿದ್ದಾಳೆ. ಆವತ್ತಿಗೆ ಆ ಸುಳ್ಳನ್ನು ನಿಜವೆಂದು ನಂಬಿದ್ದ ನಾವೂ ತದನಂತರ ಪ್ರಾಯಾವಸ್ಥೆಯಲ್ಲಿ ಆ ಸುಳ್ಳಿನ ಕುರಿತು ಅಜ್ಜಿಯೊಂದಿಗೆ ಯಾವತ್ತೂ ತರ್ಕಕ್ಕೆ ನಿಂತಿಲ್ಲ. ಏಕೆಂದರೆ, ಇವತ್ತಿಗೆ ಅಜ್ಜಿ ಅಂದು ಏಕೆ ಸುಳ್ಳು ಹೇಳಿರಬಹುದು ಎಂಬ ಸ್ಪಷ್ಟವಾದ ಕಲ್ಪನೆ ನಮ್ಮ ಮನದಲ್ಲಿದೆ. ಬಾಲ್ಯದಲ್ಲಿ ನಮಗೆ ಸಮಯಕ್ಕೆ ಸರಿಯಾಗಿ ಸ್ನಾನ ಮಾಡಿಸಿ ಉಣ್ಣಿಸುತ್ತಿದ್ದವಳು ಅಜ್ಜಿ. ಇಲ್ಲಿಂದಲೇ ಅಜ್ಜಿಯ ಸುಳ್ಳಿನ ಕಥೆ ಆರಂಭವಾಗುತ್ತದೆ. ಊಟ ಮಾಡದಿದ್ದರೆ ಭೂತ ಬರುತ್ತದೆ ಎಂಬುವುದು ಅಜ್ಜಿ ಹೇಳಿದ ಮೊದಲ ಸುಳ್ಳು. ಆಗ ಭೂತಕ್ಕೆ ಹೆದರಿ ಊಟ ಮಾಡುತ್ತಿದ್ದ ನಮಗೆ ಅಜ್ಜಿಯ ಸುಳ್ಳು ನಮಗೆ ಸತ್ಯದ ಹೆಗ್ಗುರುತಾಗಿ ಕಂಡಿತ್ತು. ಆದರೆ, ಬೆಳೆದು ದೊಡ್ಡವರಾದಂತೆ ಕೆಲಸದ ತರಾತುರಿಯಲ್ಲಿ ಊಟವನ್ನು ಮರೆತಾಗ ಯಾವ ಭೂತವೂ ಬರದೇ ಇದ್ದಾಗಲೇ ಅರಿವಾಗಿತ್ತು, ಅಜ್ಜಿ ಹೇಳಿದ ಸುಳ್ಳು.
ಮಕ್ಕಳಾಗಿದ್ದಾಗ ಚಾಕೊಲೇಟಿನ ಆಸೆಗಾಗಿ ಅಜ್ಜಿಯ ದಿಂಬಿನ ಕೆಳಗಿನ ಪೆಟ್ಟಿಗೆಯಿಂದ ಚಿಲ್ಲರೆ ಹಣ ವನ್ನು ಕದ್ದಾಗ ಸತ್ಯ ತಿಳಿಯಲು ಅಜ್ಜಿ ನಮ್ಮನ್ನು ಸಾಲಾಗಿ ನಿಲ್ಲಿಸಿ ನನ್ನ ಮೇಲೆ ಆಣೆ ಹಾಕಿ, “ಯಾರು ಹಣ ಕದ್ದದು ಎಂದು ಹೇಳಿ. ಆಣೆ ಹಾಕಿ ಸುಳ್ಳು ಹೇಳಿದರೆ ನಾನು ಸಾಯುತ್ತೇನೆ’ ಎಂದು ಅಜ್ಜಿ ಎರಡನೆಯ ಬಾರಿಗೆ ಸುಳ್ಳು ಹೇಳಿದ್ದಳು, ಆಗ ಅಜ್ಜಿ ಸಾಯಬಾರದು ಎಂಬ ಭಯ ಮತ್ತು ಕಳಕಳಿಯಿಂದ ಅಜ್ಜಿಯ ಗೊಡ್ಡು ಬೆದರಿಕೆಗೆ ಹೆದರಿ ಸತ್ಯ ಒಪ್ಪಿಕೊಂಡಿದ್ದೆವು
ಚಿಕ್ಕವರಿದ್ದಾಗ ಅಣ್ಣನೊಂದಿಗಿನ ಜಗಳ ವಿಪರೀತ ಹಂತಕ್ಕೆ ಏರಿ ಪೊರಕೆ ಹಿಡಿದು ಯುದ್ಧಕ್ಕೆ ನಿಂತಾಗ ಎಲ್ಲಿಂದಲೋ ಓಡಿ ಬಂದ ಅಜ್ಜಿ ಮೂರನೇ ಸುಳ್ಳನ್ನು ನಮ್ಮ ಮನದಲ್ಲಿ ಹಚ್ಚೆ ಹಾಕುತ್ತಾಳೆ. ಪೊರಕೆಯಲ್ಲಿ ಹೊಡೆದುಕೊಂಡರೆ ಮೀಸೆಯೂ ಬರುವುದಿಲ್ಲ, ಮದುವೆಯೂ ಆಗುವುದಿಲ್ಲ ಎಂದಳು. ಮದುವೆಯಾಸೆಗೋ ಅಥವಾ ಮೀಸೆಯಾಸೆಗೊ ಗೊತ್ತಿಲ್ಲ ಅವತ್ತೇ ಪೊರಕೆಯಲ್ಲಿ ಜಗಳವಾಡುವುದನ್ನು ನಿಲ್ಲಿಸಿದೆವು. ಆದರೆ, ಕಾಲಕ್ರಮೇಣ ಪ್ರಾಯಕ್ಕೆ ಬಂದಂತೆ ಅಣ್ಣನ ಮುಖದಲ್ಲಿ ಮೀಸೆ ಚಿಗುರೊಡೆಯುವುದನ್ನು ಕಂಡಾಗಲೇ ಸರಿದಿತ್ತು ಅಜ್ಜಿಯ ಸುಳ್ಳಿನ ಪರದೆ. ಆದರೆ ಇವತ್ತು ಇದನ್ನು ಅಜ್ಜಿಯ ಬಳಿ ಕೇಳಲು ಸಾಧ್ಯವಿಲ್ಲ , ಏಕೆಂದರೆ ಅದರ ಹಿಂದಿನ ಮರ್ಮ ಇಂದು ನಮಗೆ ಅರಿವಾಗಿದೆ.
ಅಕ್ಷಿತ್
ವಿವೇಕಾನಂದ ಕಾಲೇಜು, ಪುತ್ತೂರು