ಬೆಳಗಾವಿ: ವಯಸ್ಸು 73, ಆದರೂ ಮುಖ ಬಾಡಿಲ್ಲ, ಬೆನ್ನು ಬಾಗಿಲ್ಲ. ಮೊಣಕಾಲಿನ ನೋವಿಲ್ಲ. ಹದಿ ಹರೆಯದವರಂತೆ ಓಡಾಡುವ ಈ ಅಜ್ಜಿ ಯೋಗ ಶಿಕ್ಷಕಿ. ಬೆಳಗಾವಿ ನಗರದಲ್ಲಿ ಸುಮಾರು 40 ವರ್ಷಗಳಿಂದ ಉಚಿತ ಯೋಗ ಕಲಿಸುತ್ತ ಖ್ಯಾತರಾಗಿದ್ದಾರೆ.
ಇಲ್ಲಿಯ ಸದಾಶಿವ ನಗರದ ಗಣಪತಿ ದೇವಸ್ಥಾನದಲ್ಲಿ ಪ್ರತಿ ನಿತ್ಯ ಯೋಗ ಕಲಿಸಿ ಜನರಲ್ಲಿ ಆರೋಗ್ಯ ಕುರಿತು ಜಾಗೃತಿ ಮೂಡಿಸುತ್ತಿರುವ ಅಂಜಲಿತಾಯಿ ಗಾಡಗೀಳ ಯೋಗ ಶಿಕ್ಷಕಿ. ಪುರುಷ-ಮಹಿಳೆಯರೆನ್ನದೇ ಎಲ್ಲರಿಗೂ ಉಚಿತ ಯೋಗ ಕಲಿಸುವುದು ದಿನ ನಿತ್ಯದ ಕಾಯಕ. 31ನೇ ವಯಸ್ಸಿನಲ್ಲಿ ಯೋಗಕ್ಕೆ ಮನಸೋತು ಉಳಿದವರಿಗೂ ಅದರ ಲಾಭವನ್ನು ಮನದಟ್ಟು ಮಾಡಿಕೊಡುತ್ತಿದ್ದಾರೆ.
ಮೊಣಕಾಲು ನೋವು, ಪಾದಗಳಲ್ಲಿ ಜೀವ ಇಲ್ಲದಂತಾಗುವುದು, ಎದ್ದು ನಡೆಯಲೂ ಆಗದಂತಹ ವಿಪರೀತ ನೋವಿನಿಂದ ಅಂಜಲಿತಾಯಿ ಬಳಲುತ್ತಿದ್ದರು. ಆಗ ತುಮಕೂರಿನ ಕೃಷಿ ಅಧಿಕಾರಿಯಾಗಿದ್ದ ರಾಮಸ್ವಾಮಿ ಅವರು ಬೆಳಗಾವಿಗೆ ವರ್ಗವಾಗಿ ಬಂದಿದ್ದರು. ಆಗ ಅಲ್ಲಲ್ಲಿ ಯೋಗ ಕಲಿಸುತ್ತಿದ್ದರು. ಇದನ್ನು ಗಮನಿಸಿದ ಅಂಜಲಿತಾಯಿ ಅವರ ಬಳಿ ಯೋಗ ಅಭ್ಯಾಸ ಮಾಡಲು ಆರಂಭಿಸಿದ ನಂತರ ಕೆಲವೇ ದಿನಗಳಲ್ಲಿ ಅವರ ಆರೋಗ್ಯ ಸಮಸ್ಯೆಗಳು ದೂರವಾದವು.
ಯೋಗ ಕಲಿಸುವುದು ಹೇಗೆ, ಯೋಗದಿಂದ ಲಾಭವೇನು ಎಂಬುದರ ಬಗ್ಗೆಯೇ ರಾಮಸ್ವಾಮಿ ತರಬೇತಿ ನೀಡಿದ್ದರು. ಉಚಿತವಾಗಿ ಯೋಗ ಕಲಿಸಿ ತಾವೂ ಉಚಿತವಾಗಿ ತರಬೇತಿ ನೀಡುವಂತೆ ಹೇಳುತ್ತಿದ್ದರು. ಹೀಗಾಗಿ ಇವರ ಪ್ರೇರಣೆಯಂತೆ ಅಂಜಲಿತಾಯಿ ಈಗಲೂ ಉಚಿತವಾಗಿಯೇ ಯೋಗ ಕಲಿಸಿ ಸ್ಫೂರ್ತಿದಾಯಕರಾಗಿದ್ದಾರೆ. ಹರಿದ್ವಾರದ ರಾಮದೇವ ಬಾಬಾ ಅವರ ಬಳಿಯೂ ಹೋಗಿ ಬಂದಿದ್ದಾರೆ.
ಸುಮಾರು 40ಕ್ಕೂ ಹೆಚ್ಚು ಯೋಗಾಸನ ಹಾಗೂ ಪ್ರಾಣಾಯಾಮ ಕಲಿಸುತ್ತಿರುವ ಅಂಜಲಿತಾಯಿ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬರುತ್ತಾರೆ. ನಿಸ್ವಾರ್ಥ ಸೇವೆ ರೂಢಿಸಿಕೊಂಡಿರುವ ಇವರು ಯಾವುದೇ ಪ್ರಶಸ್ತಿಯ ಬೆನ್ನು ಹತ್ತಿದವರಲ್ಲ. ಪ್ರಚಾರದಿಂದ ದೂರವೇ ಉಳಿದಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಿಕಾದಲ್ಲಿ ಸೇವೆ ಸಲ್ಲಿಸುತ್ತಾರೆ. ಈಗ ಕೆಲ ವರ್ಷಗಳಿಂದ ಶಿರ್ಷಾಸಾನ ಮಾಡುವುದನ್ನು ನಿಲ್ಲಿಸಿ, ಇನ್ನುಳಿದ ಸರ್ವಾಂಗಾಸನಗಳನ್ನು ಮಾಡುತ್ತಿದ್ದಾರೆ.
ಉತ್ತಮ ಜೀವನ ಪದ್ಧತಿ,ಮನಸ್ಸಿನ ಸಮತೋಲನ ಕಾಪಾಡಿಕೊಳ್ಳಲು ಯೋಗ ಸಂಜೀವಿನಿ. ನನ್ನ ಜೀವನದಲ್ಲಿ ಆದ ಪರಿವರ್ತನೆಯಿಂದಲೇ ಯೋಗ ಕಲಿತಿದ್ದೇನೆ. ಈವರೆಗೆ ನನಗೆ ಯಾವುದೇ ಅನಾರೋಗ್ಯವಿಲ್ಲ. ನನ್ನ ಪತಿ ಸಿವಿಲ್ ಎಂಜಿನಿಯರ್ ಆಗಿ ನಿವೃತ್ತರಾಗಿದ್ದಾರೆ. ಈಗ ಅವರಿಗೆ 81 ವಯಸ್ಸು. ನಿತ್ಯ ಪ್ರಾಣಾಯಾಮ ಮಾಡುತ್ತಾರೆ.
ಮಗ ಎಂಜಿನಿಯರ್, ಮಗಳು ದಂತ ವೈದ್ಯೆ. ಅವರೂ ಯೋಗಾಸನ ರೂಢಿಸಿಕೊಂಡಿದ್ದಾರೆ.
– ಅಂಜಲಿತಾಯಿ ಗಾಡಗೀಳ,
ಯೋಗ ಶಿಕ್ಷಕಿ
-ಭೈರೋಬಾ ಕಾಂಬಳೆ