Advertisement

ಅಜ್ಜನಿಂದ ಸಿಕ್ತು ನೋಡಿ ಬಿಸಿ ಬಿಸಿ ಕಜ್ಜಾಯ!

06:00 AM Jul 10, 2018 | |

ಚಿತ್ರದುರ್ಗದ ಚಿನ್ಮೂಲಾದ್ರಿ ಶಾಲೆಯಲ್ಲಿ ಓದುತ್ತಿರುವಾಗ ಆಗಿಂದಾಗ್ಗೆ ಶಾಲೆಗೆ ಚಕ್ಕರ್‌ ಹಾಕಿ ಕೋಟೆ, ಚಂದ್ರವಳ್ಳಿ, ಕಾಡುಮಲ್ಲೇಶ್ವರ ಹೀಗೆ ಮನಸ್ಸು ಬಂದಲ್ಲೆಲ್ಲ ನಾವು ಸುತ್ತುತ್ತಿದ್ದುದುಂಟು. ಶಾಲೆಯಲ್ಲಿ ಹಾಜರಾತಿ ಹಾಕುವಾಗ ನಮ್ಮ ಹೆಸರುಗಳ ಬದಲು ರೋಲ್‌ ನಂಬರನ್ನು ಕೂಗುತ್ತಿದ್ದರು. ಇದರಿಂದ ನಮಗೆ ಬಹಳ ಸಹಾಯವಾಗುತ್ತಿತ್ತು ನಾವು ಚಕ್ಕರ್‌ ಕೊಟ್ಟಾಗ ಹಾಜರಾತಿಯಲ್ಲಿ ನನ್ನ ಸಂಖ್ಯೆ ಬಂದಾಗ ಅಲ್ಲೇ ಇದ್ದ ಸ್ನೇಹಿತರ್ಯಾರೋ ಪ್ರಸೆಂಟ್‌ ಎನ್ನುವುದು, ಅವರು ಚಕ್ಕರ್‌ ಕೊಟ್ಟಾಗ ನಾವು ಅವರ ನಂಬರ್‌ಗೆ ಪ್ರಸೆಂಟ್‌ ಎನ್ನುವುದನ್ನು ಕರಗತ ಮಾಡಿಕೊಂಡಿದ್ದೆವು. 

Advertisement

ಹಲವು ಪುರಾಣ ಕಥೆಗಳಲ್ಲಿ, ಚಲನಚಿತ್ರಗಳಲ್ಲಿ ಗುಡ್ಡಗಳಲ್ಲಿನ ಯಾವುದೋ ಬಂಡೆಯನ್ನು ಅಲುಗಾಡಿಸಿದ ಕೂಡಲೆ ಬಂಡೆಯು ಪಕ್ಕಕ್ಕೆ ಸರಿದು ಅರಮನೆಗೋ, ಬಂಗಾರದ ತಿಜೋರಿಗೋ ಹೋಗುವ ದಾರಿ ಪ್ರತ್ಯಕ್ಷವಾಗುವ ದೃಶ್ಯಗಳನ್ನು ಕಂಡಿದ್ದ ನಾವು, ನಮ್ಮ ಊರಿನ ಬೆಟ್ಟಗಳಲ್ಲಿ ಕೂಡ ಹೀಗೆ ಇರಬಹುದು ಎಂದೆಲ್ಲಾ ಊಹಿಸಿಕೊಂಡು, ಅವುಗಳನ್ನು ಕಂಡುಹಿಡಿಯಬೇಕೆಂಬ ಹಟದಿಂದ ಮೂರು ನಾಲ್ಕು ಮಂದಿ ಒಟ್ಟುಗೂಡಿ ಶಾಲೆಗೆ ಚಕ್ಕರ್‌ ಕೊಟ್ಟು ಬೆಟ್ಟಗಳನ್ನು ಹೊಕ್ಕು ಹುಡುಕಾಟದ ಸಾಹಸಕ್ಕೆ ಕೈಹಾಕುತ್ತಿದ್ದೆವು. ಶಾಲಾ ಸಮವಸ್ತ್ರಗಳಲ್ಲಿ ಅಲ್ಲಿ ಆಡುತ್ತಿದ್ದ ನಮ್ಮನ್ನು ನೋಡಿದ ಹಿರಿಯರು ಗದರಿಸಿದರೆ ಅಲ್ಲಿಂದ ಬೇರೆ ಸ್ಥಳಕ್ಕೆ ಕಾಲು ಕೀಳುತ್ತಿದ್ದೆವು. ಬಿಸಿಲಲ್ಲಿ ಬೆಟ್ಟಗಳನ್ನು ಸುತ್ತಿ ಏನೂ ಸಿಗದೆ ಅಲ್ಲಿದ್ದ ಮಂಗಗಳ ಜೊತೆ ಬಂಡೆಗಳನ್ನು ಏರುತ್ತ- ಇಳಿಯುತ್ತ, ಬೀಳುತ್ತ- ಏಳುತ್ತ ಬೆಟ್ಟದಲ್ಲಿ ಹೇರಳವಾಗಿದ್ದ ಮುಳ್ಳಿನ ಗಿಡಗಳ ಮಧ್ಯೆ ನಾಜೂಕಾಗಿ ಕೈ ಒಳತೂರುವಾಗ ಮುಳ್ಳಿನ ಗೀರುಗಳು ಬಿಡಿಸುವ ಮಿಂಚಿನ ಎಳೆಯಂತಹ ಚಿತ್ರಗಳನ್ನು ಲೆಕ್ಕಿಸದೆ ಬಾರೆಹಣ್ಣು, ಕಾರೆಹಣ್ಣು, ಸೀತಾಫ‌ಲ ಹಣ್ಣುಗಳನ್ನು ಕಿತ್ತು ತಿನ್ನುತ್ತಿದ್ದೆವು. ವಿವಿಧ ಆಟಗಳನ್ನು ಆಡುತ್ತ ಗೋಪಾಲಸ್ವಾಮಿ ಹೊಂಡದಲ್ಲಿ ಚೆನ್ನಾಗಿ ಈಜಿ ಸಂಜೆ ಮನೆಗೆ ಹಿಂದಿರುಗುತ್ತಿದ್ದೆವು.

ನಾವು ಓದುತ್ತಿದ್ದ ಶಾಲೆಗೆ ನಮ್ಮ ಅಜ್ಜನೇ ಅಧ್ಯಕ್ಷರಾಗಿದ್ದರು. ಶಾಲೆಗೆ ಸಂಬಂಧಿಸಿದ ಕೆಲ ಪತ್ರಗಳಿಗೆ ಸಹಿ ಹಾಕಿಸಿಕೊಂಡು ಬರುವಂತೆ ಪತ್ರಗಳನ್ನು ಕೊಡಲು ಮುಖ್ಯೋಪಾಧ್ಯಾಯರು ನನ್ನನ್ನು ಕರೆಯಲು ಹೇಳಿದ್ದಾರೆ. ಆಗ ತರಗತಿಯಲ್ಲಿ ನಾನಿಲ್ಲದ ವಿಷಯ ತಿಳಿದು ಅವರೇ ಮನೆಗೆ ಹೋಗಿಬಿಟ್ಟಿದ್ದಾರೆ. ಹೆಡ್‌ಮಾಸ್ಟರು ಮನೆಗೆ ಬಂದುದನ್ನು ಕಂಡ ಅಜ್ಜ, “ನೀವೇಕೆ ಬರೋಕೆ ಹೋದ್ರಿ? ನಮ್ಮ ಹುಡುಗನ ಕೈಯಲ್ಲಿ ಕಳುಹಿಸಬಹುದಿತ್ತಲ್ಲವೆ?’ ಎಂದು ಕೇಳಿದ್ದಾರೆ. “ಅವನು ಶಾಲೆಗೆ ಬಂದಿಲ್ಲ ಸರ್‌. ಹಾಗಾಗಿ, ನಾನೇ ತಂದೆ’ ಎಂದುಬಿಟ್ಟಿದ್ದಾರೆ. ಸಂಜೆ, ಶಾಲೆ ಮುಗಿಯುವ ಹೊತ್ತಿಗೆ ನಾನು ಮನೆ ಸೇರಿದಾಗ ಅಜ್ಜ ಕೆಂಡಾಮಂಡಲವಾಗಿದ್ದರು. ಅವರ ಕಣ್ಣುಗಳು ಬೆಂಕಿಯ ಚೆಂಡಿನಂತೆ ಗೋಚರಿಸುತ್ತಿದ್ದವು. ಎಲ್ಲಿಗೆ ಹೋಗಿದ್ದೆಯೋ ರಾಸ್ಕಲ್‌ ಎಂದು ವಾಕಿಂಗ್‌ ಸ್ಟಿಕ್‌ನಿಂದ ಬಾಸುಂಡೆ ಬರುವ ಹಾಗೆ ಬಾರಿಸಿದರು. ಆ ಬಿಸಿಬಿಸಿ ಕಜ್ಜಾಯದ ನೆನಪು ಇನ್ನೂ ಮಾಸದೆ ಹಾಗೆಯೇ ಉಳಿದಿದೆ.

ಸ್ವಾನ್‌ ಕೃಷ್ಣಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next