ಸಂಧಿ, ಸಮಾಸಗಳ ಬಗ್ಗೆ ನಿಮಗೆಷ್ಟು ಗೊತ್ತು? -ಈ ರೀತಿ ಸದನದಲ್ಲಿ ಶುಕ್ರವಾರ ಶಾಸಕರಿಗೆ ವ್ಯಾಕರಣ ಪಾಠ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸದನವನ್ನು ನಗೆಗಡಲಲ್ಲಿ ತೇಲಿಸಿದರು. ತಾವು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾಗ ಕಲಿತ ಕನ್ನಡದ ವ್ಯಾಕರಣಗಳನ್ನು ವಿವರಿಸುತ್ತಾ ಇತರರಿಗೂ ಪಾಠ ಮಾಡಿದರು. ಇದಕ್ಕೆ ಕಾರಣವಾಗಿದ್ದು ಇಲಾಖಾ ಅನುದಾನಗಳ ಬೇಡಿಕೆ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ, ಸರ್ಕಾರಿ ಶಾಲೆಗಳನ್ನು ಮುಚ್ಚಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಲು ಅವಕಾಶ ನೀಡುತ್ತಿರುವ ಬಗ್ಗೆ ಸಿಎಂ
ಸಿದ್ದರಾಮಯ್ಯ ಅವರನ್ನು ನೇರವಾಗಿ ಪ್ರಶ್ನಿಸಿದ್ದು.
Advertisement
“ಸರ್ಕಾರ ಕಳೆದ 10 ವರ್ಷದಲ್ಲಿ 10 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಿದೆ. ಇದೇ ವೇಳೆ ಎರಡೇ ವರ್ಷದಲ್ಲಿ10 ಸಾವಿರ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಅನುಮತಿ ನೀಡಿದೆ. ಪ್ರಾಥಮಿಕ ಮತ್ತು ಉನ್ನತ ಶಿಕ್ಷಣಕ್ಕೆ ಕಳೆದ ನಾಲ್ಕು ವರ್ಷದಲ್ಲಿ 1.8 ಲಕ್ಷ ಕೋಟಿ ರೂ. ಖರ್ಚು ಮಾಡಿದೆ. ಆದರೂ ಸರ್ಕಾರಿ ಶಾಲೆಯಲ್ಲಿ ಬರೀ 46 ಲಕ್ಷ ಮಕ್ಕಳು ಓದುತ್ತಿದ್ದರೆ, ಖಾಸಗಿ ಶಾಲೆಯಲ್ಲಿ 53 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಹೀಗಾದರೆ ಸರ್ಕಾರದ ಹಣ ವ್ಯಯವಾದಂತಲ್ಲವೇ? ಕನ್ನಡ ಶಾಲೆಗಳಿಗೆ ನಾವೇ ಮರಣ ಶಾಸನ ಬರೆದಂತಲ್ಲವೇ’ ಎಂದು ನಾರಾಯಣಸ್ವಾಮಿ ಹೇಳುತ್ತಿದ್ದಾಗ ಸಿಎಂ ಸಿದ್ದರಾಮಯ್ಯ ಸದನಕ್ಕೆ ಆಗಮಿಸಿದರು.
Related Articles
Advertisement
ನಂತರ ಹಾಸ್ಯದೊಂದಿಗೆ ವ್ಯಾಕರಣ ಪಾಠ ಮಾಡಿದ ಮುಖ್ಯಮಂತ್ರಿಗಳು, “ಅಕ್ಷರಗಳು ಎಡಬಿಡದೆ ಸೇರುವುದಕ್ಕೆ ಸಂಧಿ ಎನ್ನುತ್ತಾರೆ. ಮೂರು ಪ್ರಮುಖ ಸಂಧಿಗಳಿವೆ. ಸವರ್ಣದೀರ್ಘ ಸಂಧಿ, ಗುಣಸಂಧಿ ಮತ್ತು ಲೋಪ ಸಂಧಿ. ಲೋಪ ಸಂಧಿ ಎಂದರೆ, ಈಗೇನು ನೀನು ಇಲ್ಲಿ ಬಂದು ನಿಂತಿಯಲ್ಲ ಅದುವೇ’ ಎಂದು ನಾರಾಯಣಸ್ವಾಮಿ ಅವರನ್ನು ಛೇಡಿಸಿದಾಗಮತ್ತೆ ಸದನದಲ್ಲಿ ನಗೆಯ ಅಲೆ ಉಕ್ಕಿತು. ನಂತರ ಮಾತನಾಡಿದ ಬಿಜೆಪಿ ಸದಸ್ಯರಾದ ಸುರೇಶಗೌಡ, ನಾರಾಯಣಸ್ವಾಮಿ, “ನಾವು ಭಾಷಾ ಮಾಧ್ಯಮ ನೀತಿ ಅಥವಾ ಇಂಗ್ಲಿಷ್‌ನ ವಿರೋಧಿಗಳಲ್ಲ. ಆದರೆ, ಸರ್ಕಾರ ಸಾವಿರಾರು ಕೋಟಿ ರೂ. ಖರ್ಚು ಮಾಡಿದರೂ ಏಕೆ ಉತ್ತಮ ಶಿಕ್ಷಣ ಸಿಗುತ್ತಿಲ್ಲ? ಸರ್ಕಾರಿ ಶಾಲೆಗಳಿಗೆ ಮಕ್ಕಳೇಕೆ ಬರುತ್ತಿಲ್ಲ ಎಂದಷ್ಟೇ ನಮ್ಮ ಪ್ರಶ್ನೆ’ ಎಂದಾಗ, “ಆಯ್ತು ಮಾತು ಮುಂದುವರಿಸಿ’ ಎಂದು ಸಿದ್ದರಾಮಯ್ಯ ಸುಮ್ಮನಾದರು. ಸಂದಿ ಹೊಕ್ಕಿದ್ದಕ್ಕೆ ಸಿಎಂ ಆದ್ರಿ: ಪುಟ್ಟಣ್ಣಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕರಿಗೆ ವ್ಯಾಕರಣ ಪಾಠ ಮಾಡಿ ಸಂಧಿಗಳ ಬಗ್ಗೆ ವಿವರಣೆ ನೀಡಿ ಮುಗಿಸುತ್ತಿದ್ದಂತೆ ಮಧ್ಯಪ್ರವೇಶಿಸಿದ ಸರ್ವೋದಯ ಕರ್ನಾಟಕ ಪಕ್ಷದ ಸದಸ್ಯ ಕೆ.ಎಸ್.ಪುಟ್ಟಣ್ಣಯ್ಯ, “ಸಿದ್ದರಾಮಯ್ಯನವರೇ ನೀವು
ಎಲ್ಲಾ ಸಂದಿಗಳನ್ನು ಹೊಕ್ಕು ಬಂದಿದ್ದಕ್ಕೆ ಮುಖ್ಯಮಂತ್ರಿಯಾಗಿದ್ದೀರಿ’ ಎಂದು ಚಟಾಕಿ ಹಾರಿಸಿದರು. ಅದಕ್ಕೆ ಸಿದ್ದರಾಮಯ್ಯ, “ರೀ ಪುಟ್ಟಣ್ಣಯ್ಯ, ನೀವೂ ಎಲ್ಲಾ ಸಂದಿಗಳನ್ನು ಹೊಕ್ಕುಬನ್ನಿ. ನೀವೂ ಮುಖ್ಯಮಂತ್ರಿಗಳಾಗಬಹುದು..’ ಎಂದಾಗ, “ಅಯ್ಯೋ, ನಾವು ರೈತರ ಸಂದಿಯಲ್ಲಿ ಸಿಲುಕಿದ್ದೇವೆ. ನಮಗೆ ಬೇರೆ ಸಂದಿಗಳು ಆಗಿಬರುವುದಿಲ್ಲ ಬಿಡಿ’ ಎಂದು ಪುಟ್ಟಣ್ಣಯ್ಯ ಹೇಳಿದರು.