ವಿನಯ್ ರಾಜಕುಮಾರ್ ಅಭಿನಯದ ಮುಂದಿನ ಚಿತ್ರ ಯಾವುದು ಎಂಬ ಗೊಂದಲಕ್ಕೆ ಕೊನೆಗೂ ತೆರೆಬಿದ್ದಿದೆ. ಅದಾಗಬಹುದು, ಇದಾಗಬಹುದು ಎಂಬ ಗೊಂದಲದ ನಂತರ, ವಿನಯ್ ಈಗ “ಗ್ರಾಮಾಯಣ’ ಎಂಬ ಚಿತ್ರವನ್ನು ಒಪ್ಪಿಕೊಂಡಿದ್ದು, ಸದ್ಯದಲ್ಲೇ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ. ಅದಕ್ಕೂ ಮುನ್ನ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್ ರಾಜಕುಮಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ. ಚಿನ್ನೇಗೌಡ ಸೇರಿದಂತೆ ಹಲವರು ಈ ಟೀಸರ್ ಬಿಡುಗಡೆಗೆ ಸಾಕ್ಷಿಯಾದರು.
“ಗ್ರಾಮಾಯಣ’ ಎಂಬ ಹೆಸರೇ ಹೇಳುವಂತೆ, ಇದೊಂದು ಗ್ರಾಮೀಣ ಚಿತ್ರ. ಎಸ್.ಎಲ್.ಎನ್. ಮೂರ್ತಿ ಎನ್ನುವವರು ಈ ಚಿತ್ರವನ್ನು ನಿರ್ಮಿಸಿದರೆ, ದೇವನೂರು ಚಂದ್ರು ಎನ್ನುವವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರ ಪ್ರಾರಂಭವಾಗಿದ್ದರ ಕುರಿತು ಮಾತನಾಡಿದ ಅವರು, “ನಿರ್ಮಾಪಕ ಮೂರ್ತಿ ಅವರಿಗೆ ನಾಲ್ಕು ಬಾರಿ ಕಥೆ ಹೇಳಿದೆ. ಕಥೆ ಹೇಳಿ ಸುಸ್ತಾಯಿತು. ಬೇಸರವಾಗಿ ಊರಿಗೆ ಹೋಗಿದ್ದೆ. ಒಂದು ದಿನ ರಾಘಣ್ಣ ಫೋನ್ ಮಾಡಿದ್ದರು. ಊಟಕ್ಕೆ ಬನ್ನಿ ಅಂತ ಕರೆದರು. ಅವರ ಮನೆಗೆ ಹೋದೆ. ಅವರಿಗೆ ಕಥೆ ಇಷ್ಟವಾಗಿ, ಚಿತ್ರ ಮಾಡಿ ಅಂತ ಹೇಳಿದರು. ನಿರ್ಮಾಪಕರು ಒಪ್ಪಿ ಚಿತ್ರ ಪ್ರಾರಂಭವಾಗಿ, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ’ ಎಂದು ಹೇಳಿದರು.
ವಿನಯ್ ರಾಜಕುಮಾರ್ ಈ ಚಿತ್ರದಲ್ಲಿ ಸಿಕ್ಸ್ತ್ ಸೆನ್ಸ್ ಸೀನ ಎಂಬ ಪಾತ್ರ ಮಾಡುತ್ತಿದ್ದಾರಂತೆ. “ಇತ್ತೀಚೆಗೆ ಟೀಸರ್ ಚಿತ್ರೀಕರಣವಾಯ್ತು. ಗಾಜನೂರಿನ ತಾತ ಹುಟ್ಟಿದ ಮನೆಯಲ್ಲಿ ಚಿತ್ರೀಕರಣ ನಡೆಯಿತು. ತುಂಬಾ ಭಯ ಇತ್ತು. ಶೂಟಿಂಗ್ ಬಹಳ ಚೆನ್ನಾಗಿ ನಡೀತು. ಟೀಸರ್ ನೋಡಿದರೆ, ಕಥೆ ಏನಿರಬಹುದು ಎಂದು ಗೊತ್ತಾಗುತ್ತದೆ. ಸುಮಾರು ಎಂಟು ತಿಂಗಳ ಹಿಂದೆ ಚಂದ್ರು ಕಥೆ ಹೇಳಿದ್ದರು. ಕಥೆ ಸಾಕಷ್ಟು ಕಾಡಿತು. ಈ ಚಿತ್ರವು ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’ ಎಂದು ವಿನಯ್ ಹೇಳಿದರು.
ನಂತರ ಮಾತನಾಡಿದ ರಾಘ ವೇಂದ್ರ ರಾಜಕುಮಾರ್, “ನಿರ್ದೇಶಕ ಚಂದ್ರು ಕಥೆ ಹೇಳುತ್ತಿದ್ದಂತೆ, ಅಪ್ಪಾಜಿ ಹೇಳಿದ ಮಾತೊಂದು ನೆನಪಾಯಿತು. ಒಮ್ಮೆ ಅವರು ಊರಿಗೆ ಕರೆದುಕೊಂಡು ಹೋಗೋದಕ್ಕೆ ಹೇಳಿದರು.
ಕಾರಣಾಂತರಗಳಿಂದ ಆಗಲಿಲ್ಲ. ಆಗ ನೀವು ಊರನ್ನು ಮಿಸ್ ಮಾಡ್ಕೊàತಿದ್ದೀರಾ ಅಂತ ಕೇಳಿದೆ. ಅದಕ್ಕವರು, “ನಾನು ಊರನ್ನು ಮಿಸ್ ಮಾಡಿಕೊಳ್ಳುತ್ತಿಲ್ಲ, ಊರು ನನ್ನನ್ನ ಮಿಸ್ ಮಾಡಿಕೊಳ್ಳುತ್ತಿದೆ’ ಎಂದರು. ನಿರ್ದೇಶಕರು ಕಥೆ ಹೇಳಿದಾಗ, ಈ ನೆನಪು ಕಾಡಿತು. ಈ ಸಿನಿಮಾ ಒಪ್ಪಿಕೊಂಡ ನಂತರ ನನ್ನ ಮಗ ಊರಿಗೆ ಹೋಗಿ ಬರಿ¤àನಿ ಅಂತ ಹೋದ. ಈ ಕಥೆ ಚೆನ್ನಾಗಿದೆ. ಆ ಕಥೆಯೇ ಸಿನಿಮಾ ಮಾಡಿಸಿಕೊಳ್ಳುತ್ತೆ’ ಎಂದು ಹೇಳಿದರು.
ವಿನಯ್‌ಗೆ ನಾಯಕಿಯಾಗಿ ಅಮೃತಾ ಅಯ್ಯರ್ ಇದ್ದಾರೆ. ಇನ್ನು ಅಪರ್ಣ, ಸೀತಾ ಕೋಟೆ, ಸಂಪತ್ ಕುಮಾರ್ ಮುಂತಾದವರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಎಲ್ಲರೂ ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಖುಷಿ ವ್ಯಕ್ತಪಡಿಸಿದರು.