ಗಂಗಾವತಿ: ತಾಲ್ಲೂಕಿನ ಸಂಗಾಪುರ ಗ್ರಾ .ಪಂ. ವ್ಯಾಪ್ತಿಯ ರಾಜಾಪುರ ಸೀಮಾದಲ್ಲಿ ಅಕ್ರಮವಾಗಿ ಸಾಗುವಳಿ ಮಾಡುತ್ತಿದ್ದ 7.18 ಎಕರೆ ಗಾಂವಠಾಣಾ ಭೂಮಿಯನ್ನು ಜಿಲ್ಲಾಧಿಕಾರಿಗಳ ಸೂಚನೆ
ಮೇರೆಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಭೂಮಾಪನ ಇಲಾಖೆಯ ಅಧಿಕಾರಿಗಳು ಸರ್ವೆ ಮಾಡಿ ಸರಹದ್ದು ನಿಗದಿ ಮಾಡಿದರು .
ಸರ್ವೇ ನಂಬರ್ 69 ಮತ್ತು 70 ರಲ್ಲಿ ಇರುವ 7.18 ಪ್ರದೇಶದ ಗಾಂವಠಾಣಾ ಭೂಮಿಯನ್ನು ಕೆಲವರು ಅಕ್ರಮವಾಗಿ ಸಾಗುವಳಿ ಮಾಡುತ್ತಿದ್ದರು .ಈ ಬಗ್ಗೆ ಸ್ಥಳೀಯರು ಗಾಂವಠಾಣಾ ಭೂಮಿಯನ್ನು ಬಿಡಿಸಿ ಬಡವರಿಗೆ ನಿವೇಶನ ಹಂಚಿಕೆ ಮಾಡುವಂತೆ ನಿರಂತರವಾಗಿ ತಾಲ್ಲೂಕು ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ . ಇತ್ತೀಚೆಗೆ ಅಕ್ರಮ ಸಕ್ರಮ ಕಮಿಟಿಯವರು ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ವಿತರಣೆಗಾಗಿ ಭೂಮಿಯ ಪರಿಶೀಲನೆ ವೇಳೆ ಸಂಗಾಪುರದ ರಜಪೂತ ಸೀಮಾದಲ್ಲಿರುವ 7.18 ಎಕರೆ ಭೂಮಿಯ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಕೂಡಲೇ ಅಕ್ರಮ ಸಕ್ರಮ ಸಮಿತಿ ಸದಸ್ಯ ಸಿದ್ದಲಿಂಗಯ್ಯ ಗಡ್ಡಿಮಠ ಜಿಲ್ಲಾಧಿಕಾರಿಗಳಿಗೆ ಗಾವಠಾಣಾ ಭೂಮಿ ಅಕ್ರಮ ಸಾಗುವಳಿ ಮಾಡುವವರು ತೆರವುಗೊಳಿಸಿ ಬಡವರಿಗೆ ನಿವೇಶನ ಹಂಚುವಂತೆ ಮನೆ ಮಾಡಿ ಪತ್ರ ಬರೆದಿದ್ದಾರೆ .ಕೂಡಲೇ ಕಾರ್ಯಪ್ರವೃತ್ತರಾದ ಜಿಲ್ಲಾಧಿಕಾರಿಗಳು ಸಹಾಯಕ ಆಯುಕ್ತರ ಮೂಲಕ ಭೂಮಿಯನ್ನು ಸರ್ವೆ ಮಾಡಿ ಸರಹದ್ದು ಆಚರಿಸಲು ಸೂಚನೆ ನೀಡಿದ್ದಾರೆ .ಜಿಲ್ಲಾಧಿಕಾರಿಗಳ ಸೂಚನೆಯಂತೆ ಗೈರಾಣ ಭೂಮಿ ಸರ್ವೆ ಮಾಡಿ ಸರಹದ್ದಿನ ಕಲ್ಲುಗಳನ್ನು ಹಾಕಲಾಯಿತು .
ಗಾಂವಠಾಣಾ ಭೂಮಿ 7.18 ಎಕರೆಯಲ್ಲಿ 2.18 ಎಕರೆ ಪ್ರದೇಶ ಭೂಮಿಗೆ ಕಂದಾಯ ಅಧಿಕಾರಿಗಳು ಸಾಗುವಳಿ ಮಾಡುವವರಿಗೆ ಆರ್ ಟಿಸಿ ಮಾಡಿಕೊಟ್ಟಿದ್ದು ಭೂಮಿಯ ನಿಯಮಗಳನ್ನು ಉಲ್ಲಂಘಿಸಿ ಕೃತ್ಯವೆಸಗಲಾಗಿದೆ. ಇದರ ಬಗ್ಗೆಯೂ ಸ್ಥಳೀಯರು ನೀಡಿದ ದೂರಿನ ಅನ್ವಯ ಭೂಮಿಯಲ್ಲಿ ಸಾಗುವಳಿ ಚೀಟಿ ಪಡೆದವರ ಆದೇಶವನ್ನು ರದ್ದು ಮಾಡುವಂತೆ ಈಗಾಗಲೇ ಅಧಿಕಾರಿಗಳು ಸಂಬಂಧಪಟ್ಟ ದಾಖಲಾತಿ ಇದೆ ಜಿಲ್ಲಾಧಿಕಾರಿಗಳಿಗೆ ವರದಿ ಮಾಡಿದ್ದಾರೆ.
ಒತ್ತಡ : ರಾಜಾಪುರ ಸೀಮಾದಲ್ಲಿರುವ ಗಾಂವಠಾಣಾ ಒತ್ತುವರಿ ಮಾಡಿ ಕೃಷಿ ಮಾಡುತ್ತಿರೋಣ ತೆರವುಗೊಳಿಸದೆ ಅವರ ಎದುರಲ್ಲೇ ಆರ್ ಟಿಸಿ ಮಾಡಿಕೊಡುವಂತೆ ಕೆಲವರು ಜನಪ್ರತಿನಿಧಿಗಳ ಮೇಲೆ ಒತ್ತಡ ಹಾಕುತ್ತಿದ್ದು ಇದರಿಂದ ಗಾಂವಠಾಣಾ ಭೂಮಿಯ ನಿಯಮಾವಳಿಗಳನ್ನು ಗಾಳಿಗೆ ತೂರುವ ಷಡ್ಯಂತ್ರ ನಡೆಯುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಡವರಿಗೆ ನಿವೇಶನ: ರಾಜಾಪುರ ಸೀಮಾದಲ್ಲಿರುವ ಭೂಮಿಯನ್ನು ಸರ್ವೆ ಮಾಡಿ ಬಡವರು ಮತ್ತು ನಿವೇಶನರಹಿತರಿಗೆ ಸಂಘ ಊರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ನಿವೇಶನ ನೀಡುವಂತೆ ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಮನವಿ ಮಾಡಲಾಗುತ್ತದೆ ಎಂದು ಅಕ್ರಮ ಸಕ್ರಮ ಸಮಿತಿಯ ಸದಸ್ಯ ಸಿದ್ದಲಿಂಗಯ್ಯ ಗಡ್ಡಿಮಠ ತಿಳಿಸಿದಿದ್ದಾರೆ.
ಕ್ರಮ ವಹಿಸಲಾಗಿದೆ : ತಾಲ್ಲೂಕು ಮತ್ತು ಜಿಲ್ಲಾಡಳಿತದ ಆದೇಶದಂತೆ ರಾಜಾಪುರ ಸೀಮಾದಲ್ಲಿರುವ ಗಾಂವಠಾಣಾ ಭೂಮಿಯ ಸರಹದ್ದು ನಿಗದಿ ಮಾಡಲಾಗಿದ್ದು ಉಳಿದ 2.18 ಎಕರೆ ಭೂಮಿಯನ್ನು ಉಳುಮೆ ಮಾಡುವವರಿಗೆ ಆರ್ಟಿಸಿ ಮಾಡಿಕೊಡಲಾಗಿದ್ದು ಈ ಆರ್ಟಿಸಿ ರದ್ದುಪಡಿಸುವಂತೆ ಜಿಲ್ಲಾಡಳಿತಕ್ಕೆ ಪತ್ರ ಬರೆದು ಮನವಿ ಮಾಡಲಾಗಿದೆ ಉಳಿದ ಗಾಂವ್ ಠಾಣಾ ಭೂಮಿಯನ್ನು ಗ್ರಾಪಂ ವ್ಯಾಪ್ತಿಗೆ ತೆಗೆದುಕೊಂಡು ಜಿಲ್ಲಾಧಿಕಾರಿಗಳಿಗೆ ವರದಿ ಮಾಡಲಾಗುತ್ತದೆ ಎಂದು ಸಂಗಾಪುರ ಗ್ರಾ ಪಂ ಪಿಡಿಒ ನೀಲಾ ಸೂರ್ಯಕುಮಾರಿ ಉದಯವಾಣಿಗೆ ತಿಳಿಸಿದ್ದಾರೆ.
-ವಿಶೇಷ ವರದಿ :ಕೆ.ನಿಂಗಜ್ಜ