Advertisement

ಜನರ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ: ಜಿಲ್ಲಾಧಿಕಾರಿ

02:58 PM Nov 22, 2022 | Team Udayavani |

ಮಾಗಡಿ: ಜಿಲ್ಲೆಯ ಕಟ್ಟಕಡೆಯ ಗ್ರಾಮದ ಸಾರ್ವಜನಿಕರಿಗೂ ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸಲು ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ವರದಾನವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಅವಿನಾಶ್‌ ಮೆನನ್‌ ರಾಜೇಂದ್ರನ್‌ ಹೇಳಿದರು.

Advertisement

ತಾಲೂಕಿನ ಅಜ್ಜನಹಳ್ಳಿ ಗ್ರಾಮದಲ್ಲಿ ಜಿಲ್ಲಾಡಳಿತದಿಂದ ನಡೆದ ಡೀಸಿ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮಸ್ಥರು ಜಿಲ್ಲಾ ಕೇಂದ್ರಕ್ಕೆ ಬರುವುದನ್ನು ತಪ್ಪಿಸಿ, ಅವರ ಗ್ರಾಮದಲ್ಲೇ ಅವರಿಗೆ ಸರ್ಕಾರದ ಸೇವಾ- ಸೌಲಭ್ಯ ಕಲ್ಪಿಸುವುದು ಡೀಸಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಉದ್ದೇಶ. ಜಿಲ್ಲಾ ಮಟ್ಟದಲ್ಲಿ ತೆಗೆದುಕೊಳ್ಳಬಹುದಾದ ನಿರ್ಧಾರಗಳನ್ನು ಗ್ರಾಮದಲ್ಲೇ ತೆಗೆದುಕೊಂಡು ಜನರ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದರು.

ಕಾರ್ಯಕ್ರಮ ಬಳಸಿಕೊಳ್ಳಿ: ಕಂದಾಯ ಇಲಾಖೆ ಸಮಸ್ಯೆಗಳಾದ ಪಹಣಿ ತಿದ್ದುಪಡಿ, ಪಿಂಚಣಿ ಆದೇಶ ಸೇರಿದಂತೆ ಇತರೆ ಸೌಲಭ್ಯಗಳನ್ನು ಸ್ಥಳದಲ್ಲೇ ವಿತರಿಸು ವುದು ಕಾರ್ಯಕ್ರಮದ ಆಶಯವಾಗಿದೆ. ಕಾರ್ಯ ಕ್ರಮದಲ್ಲಿ ಸೌಲಭ್ಯ ಹಾಗೂ ತಮ್ಮ ಗ್ರಾಮದ ಸಮಸ್ಯೆಗಳ ಕುರಿತು ಅಹವಾಲು ಸಲ್ಲಿಸಿದ್ದಲ್ಲಿ, ಆದ್ಯತೆ ಮೆರೆಗೆ ಸ್ಥಳದಲ್ಲೇ ಪರಿಹಾರ ನೀಡಲಾಗುವುದು. ಸರ್ಕಾರದ ಹಂತದಲ್ಲಿ ಪರಿಹರಿಸಬಹುದಾದ ಸಮಸ್ಯೆಗಳಿಗೆ ಅಗತ್ಯ ಪ್ರಸ್ತಾವನೆ ಸಲ್ಲಿಸಲಾಗುವುದು. ಗ್ರಾಮಸ್ಥರು ಕಾರ್ಯ ಕ್ರಮವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತಹಶೀಲ್ದಾರ್‌ ಬಿ.ಜಿ.ಶ್ರೀನಿವಾಸ್‌ ಪ್ರಸಾದ್‌ ಮಾತ ನಾಡಿ, ಡೀಸಿ ನಡೆ ಹಳ್ಳಿಯ ಕಡೆಗೆ ಎನ್ನುವ ಈ ಕಾರ್ಯ ಕ್ರಮ ಅತ್ಯಂತ ಯಶಸ್ವಿ ಕಾರ್ಯಕ್ರಮವಾಗಿದ್ದು, ಸಂಪೂರ್ಣ ಆಡಳಿತವೇ ಹಳ್ಳಿಗೆ ಬಂದು ತಮ್ಮ ಸಮಸ್ಯೆಗಳಿಗೆ ಅಲ್ಲಿಯೇ ಪರಿಹಾರ ನೀಡುವ ಕಾರ್ಯಕ್ರಮವಾಗಿದೆ. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದು, ಅವರವರ ಇಲಾಖೆಗಳ ಸಮಸ್ಯೆಗಳಿದ್ದರೆ ಅವರು ಇಲ್ಲಿಯೇ ಪರಿಹಾರ ದೊರಕಿಸಿಕೊಡುತ್ತಾರೆ. ಕಂದಾಯ ಇಲಾಖೆಯ ಸಮಸ್ಯೆಗಳಿದ್ದರೆ, ಪಿಂಚಣಿ, ವಿಧವಾ ವೇತನ, ಅಂಗವಿಕಲರ ವೇತನ, ಪಹಣಿಯಲ್ಲಿನ ದೋಷ, ಆಧಾರ್‌ ಕಾರ್ಡ್‌ ತಿದ್ದುಪಡಿ ಇತ್ಯಾದಿ ಯಾವುದೇ ಸಮಸ್ಯೆ ಇದ್ದರೂ ಸಹ ಅವುಗಳನ್ನು ಸ್ಥಳದಲ್ಲಿಯೇ ಪರಿಹಾರ ಮಾಡಿಕೊಡಲಾಗುವುದು ಎಂದರು.

ಆರೋಗ್ಯ ಶಿಬಿರ: ಆರೋಗ್ಯ ಇಲಾಖೆ ವತಿಯಿಂದ ಉಚಿತ ಅರೋಗ್ಯ ಶಿಬಿರ ಹಾಗೂ ಸಾಂಕ್ರಾಮಿಕ ರೋಗಗಳ ಕುರಿತು ಅರಿವು ಮೂಡಿಸಲಾಯಿತು. ಕೋವಿಡ್‌ ಲಸಿಕಾ ಅಭಿಯಾನ, ಪೋಷಣ್‌ ಮಾಸಾ ಚರಣೆ ಅಭಿಯಾನ, ವಿವಿಧ ಇಲಾಖೆಗಳಿಂದ ಸಿಗುವ ಸೌಲಭ್ಯಗಳ ಕುರಿತು ಅರಿವು ಮೂಡಿಸಲಾಯಿತು. ಇಒ ಚಂದ್ರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕಿ ರಮ್ಯ, ಟಿಎಚ್‌ಒ ಡಾ. ಎಂ.ಸಿ .ಚಂದ್ರಶೇಖರಯ್ಯ, ಗಂಗಾಧರ್‌, ಅಜ್ಜನಹಳ್ಳಿ ಗ್ರಾಪಂ ಅಧ್ಯಕ್ಷೆ ಗಂಗಾಲಕ್ಷಮ್ಮ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next