ಹನೂರು (ಚಾಮರಾಜನಗರ) : ಅಧಿಕಾರಕ್ಕಾಗಿ ಧರ್ಮಸ್ಥಳದ ಮಂಜುನಾಥನ ದೇವಾಲಯದ ಮುಂದೆ ಆಣೆ -ಪ್ರಮಾಣದ ವಿಡಿಯೋ ಒಂದೆಡೆಯಾದರೆ ಮತ್ತೊಂದೆಡೆ ದೇವಾಲಯದ ಮುಂಭಾಗ ಹಣದ ಕಂತೆಗಳನ್ನು ನೀಡುತ್ತಿರುವ ಭಾವಚಿತ್ರಗಳು ವೈರಲ್ ಆಗಿರುವುದು ತಾಲೂಕಿನ ರಾಜಕೀಯದಲ್ಲಿ ಕುರುಡು ಕಾಂಛಾಣದ ನರ್ತನಕ್ಕೆ ಸಿಕ್ಕಂತಹ ಪುರಾವೆಯಾಗಿದೆ.
ತಾಲೂಕಿನ ಕೌದಳ್ಳಿ ಗ್ರಾಮದ ನಾಯಕರ ಬಡಾವಣೆಯ ಹುಚ್ಚಪ್ಪನ ದೇವಾಲಯದ ಮುಂಭಾಗ ಗ್ರಾಮ ಪಂಚಾಯಿತಿಯ ನೂತನ ಸದಸ್ಯರಿಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ್ ಹಣದ ಕಂತೆಗಳನ್ನು ವಿತರಿಸುತ್ತಿರುವ ಭಾವಚಿತ್ರಗಳು ವೈರಲ್ ಆಗಿವೆ.
ಚುನಾವಣೆ ಹಿನ್ನೆಲೆ ಹಣ ಹಂಚಿಕೆಯೇ?: ಕೌದಳ್ಳಿ ಗ್ರಾಮ ಪಂಚಾಯಿತಿಯಲ್ಲಿ 23 ಸದಸ್ಯ ಬಲಹೊಂದಿದ್ದು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 15 ಬಿಜೆಪಿ ಬೆಂಬಲಿತ 6 ಮತ್ತು ಜೆಡಿಎಸ್ ಬೆಂಬಲಿತರು 2 ಗೆಲುವು ಸಾಧಿಸಿದ್ದಾರೆ. ಈ ಪಂಚಾಯಿತಿಗೆ ಅಧ್ಯಕ್ಷ ಹುದ್ದೆ ಸಾಮಾನ್ಯ ವರ್ಗಕ್ಕೂ ಉಪಾಧ್ಯಕ್ಷ ಹುದ್ದೆ ಪರಿಶಿಷ್ಠ ಜಾತಿ ಮಹಿಳೆಗೂ ಮೀಸಲಾಗಿದ್ದು ಜನವರಿ 28ರಂದು ಚುನಾವಣೆ ನಿಗದಿಯಾಗಿದೆ. ಈ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತರಿಗೆ ಬಹುಮತ ಲಭಿಸಿದೆ. ಆದರೂ ಕೂಡ ಹೇಗಾದರೂ ಮಾಡಿ ಅಧಿಕಾರ ಹಿಡಿಯಲೇ ಬೇಕು ಎಂಬ ಹಠಕ್ಕೆ ಬಿದ್ದಿರುವ ಮಂಜುನಾಥ್ ಮಲ್ಲಯ್ಯನಪುರ ರವಿ, ಪುದುನಗರ ಟಿ.ಎಂ.ನಾರಾಯಣ, ಎಂ.ಟಿ.ದೊಡ್ಡಿ ಅನಿಲ್ ಕುಮಾರ್ ಸೇರಿದಂತೆ ಕೆಲ ಸದಸ್ಯರಿಗೆ ಹಣವನ್ನು ನೀಡಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು ಬಹುಮತಕ್ಕೆ ಬೇಕಾದ ಇನ್ನಷ್ಟು ಸದಸ್ಯರನ್ನು ಮೈತ್ರಿ ಪಕ್ಷಕ್ಕೆ ಕರೆತರುವಂತೆ ಸೂಚನೆ ನೀಡಿ ನೂತನ ಸದಸ್ಯರುಗಳಿಗೆ ಹಣ ಹಂಚಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ಇದನ್ನೂ ಓದಿ:ಸೆನ್ಸೆಕ್ಸ್ 531 ಅಂಕ ಕುಸಿತ, ನಿಫ್ಟಿ 133 ಅಂಕ ಇಳಿಕೆ ; IT ಕ್ಷೇತ್ರದ ಷೇರುಗಳಿಗೆ ನಷ್ಟ
ಕ್ರಮಕ್ಕೆ ಸೂಚಿಸಿದ ಉಸ್ತುವಾರಿ ಸಚಿವರು: ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಮತ್ತು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು 2 ದಿನಗಳ ಜಿಲ್ಲಾ ಪ್ರವಾಸ ಕೈಗೊಂಡಿರುವ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ಈ ಭಾವಚಿತ್ರಗಳು ಬಂದಿದ್ದು ಈ ಸಂಬಂಧ ಕೂಡಲೇ ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಹಣ ವಿತರಿಸುತ್ತಿರುವ ಬಗ್ಗೆ ತಮ್ಮ ಗಮನಕ್ಕೂ ಬಂದಿದ್ದು ಗ್ರಾಮಕ್ಕೆ ಭೇಟಿನೀಡಿ ಮುಖಂಡರು ಮತ್ತು ಗ್ರಾಮಸ್ಥರಿಂದ ಅಗತ್ಯ ಮಾಹಿತಿ ಪಡೆದಿದ್ದೇನೆ. ಈ ಬಗ್ಗೆ ಗ್ರಾಮಸ್ಥರು ದೂರು ನೀಡಿದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವ ಬಗ್ಗೆ ಕ್ರಮವಹಿಸಲಾಗಿದೆ.
– ಜಿ.ಎಚ್. ನಾಗರಾಜು, ತಹಸೀಲ್ದಾರ್