Advertisement

ಯುವಜನತೆಗೆ ಸಿಗಲಿ ಗ್ರಾಮಾಡಳಿತದ ಚುಕ್ಕಾಣಿ

12:07 AM Dec 20, 2020 | sudhir |

ಭಾರತೀಯರಾದ ನಮಗೆ ಪ್ರಜಾಪ್ರಭುತ್ವವೇ ಧರ್ಮ, ಸಂವಿಧಾನವೇ ನಮ್ಮ ಧರ್ಮಗ್ರಂಥ. ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯ ಗಳು ಪ್ರಾಪ್ತವಾಗಿ ನಾವೆಲ್ಲರೂ ಒಂದಾದುದು ಈ ಸಂವಿಧಾನದಿಂದಲೇ. ಉಳಿದಂತೆ ನಮ್ಮ ಮತಧರ್ಮಾದಿಗಳು ತೀರಾ ವೈಯಕ್ತಿಕ. ಅವುಗಳು ನಮ್ಮ ವೈಯಕ್ತಿಕ ಬದುಕಿನ ಏಳಿಗೆಗಾಗಿಯೇ ಹೊರತು ರಾಜ್ಯ-ರಾಷ್ಟ್ರಗಳ‌ ನಿರ್ಮಾಣಕ್ಕಾಗಿ ಅಲ್ಲ. ರಾಜರ ಆಳ್ವಿಕೆ, ಬ್ರಿಟಿಷರ ಆಳ್ವಿಕೆಗಳಿಂದ ಬೇಸತ್ತ ಜನಸಮೂಹಕ್ಕೆ ಸುಂದರ ಬದುಕಿನ ಅಮೃತಪಾನ ಮಾಡಿಸಿದ್ದು ನಮಗೆ ದೊರೆತ ಸ್ವಾತಂತ್ರ್ಯ ಮತ್ತು ನಮ್ಮ ಸಂವಿಧಾನ.

Advertisement

ನನ್ನ ವೈದ್ಯಕೀಯ ವ್ಯಾಸಂಗದ ಕಾಲದಲ್ಲಿ ನನ್ನ ಕೊಠಡಿಯಲ್ಲಿ ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ ಮೊದಲಾದ ಸಾಧಕರ ಭಾವಚಿತ್ರಗಳಿದ್ದುವು. ಈ ಚಿತ್ರಗಳನ್ನು ನೋಡಿ, ನನ್ನ ಆಸಕ್ತಿಗಳನ್ನು ತಿಳಿದು ಪ್ರಶಂಸಿಸಿದವರಲ್ಲಿ ಡಾ| ವಿ.ಎಸ್‌.ಆಚಾರ್ಯರು ಒಬ್ಬರು. ಕೇವಲ ಪ್ರಶ‌ಂಸೆ ವ್ಯಕ್ತಪಡಿಸಿದ್ದು ಮಾತ್ರವಲ್ಲ ಎಲ್ಲ ವಿದ್ಯಾರ್ಥಿಗಳನ್ನು ಕರೆದು ಅಲ್ಲೊಂದು ಪುಟ್ಟ ಸಭೆ ನಡೆಸಿ ಯುವಕರು ರೂಪುಗೊಳ್ಳಬೇಕಾದ, ಬದುಕನ್ನು ನೋಡಬೇಕಾದ ದೃಷ್ಟಿಕೋನದ ಬಗ್ಗೆ ಅವರು ಸುದೀರ್ಘ‌ ಮಾತುಗಳನ್ನಾಡಿ ದ್ದರು. ಅವರಾಡಿದ ಮಾತುಗ ಳಲ್ಲಿ ಭವ್ಯ ಭಾರತದ ಅಭಿವೃದ್ಧಿ, ರಾಷ್ಟ್ರಪ್ರೇಮ, ಸರ್ವಸಮಾನ ತೆಯ ಸಂದೇಶಗಳಿದ್ದುವು. ಅವರಾಗಲೇ ಬಹುದೊಡ್ಡ ಸಾಧನೆ ಮಾಡಿದ ಸಚ್ಚಾರಿತ್ರ್ಯದ ಜನನಾಯಕರು. ನನಗಾಗಲೀ ಆಚಾರ್ಯರಿಗಾಗಲೀ ಪ್ರೇರಣೆ ನೀಡಿದ್ದು ನಮ್ಮ ಬದುಕಿನ ಹಿನ್ನೆಲೆಯಲ್ಲಿದ್ದ ಗ್ರಾಮೀಣ ಪ್ರದೇಶವೇ ಎಂದು ನಿಸ್ಸಂಶಯವಾಗಿ ನಾನು ಹೇಳಬಲ್ಲೆ.

ಭಾರತದ ನೈಜ ಅಭಿವೃದ್ಧಿಯೆಂದರೆ ಅದು ಗ್ರಾಮಗಳ ಅಭಿವೃದ್ಧಿ. ಗ್ರಾಮಸ್ವರಾಜ್ಯ ಮಹಾತ್ಮಾ ಗಾಂಧೀಜಿಯವರ ಕನಸಾಗಿತ್ತು. ಆಧುನಿಕ ವಿದ್ಯಾಭ್ಯಾಸದ ಪರಿಣಾಮವಾಗಿ ಯುವಜನತೆ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಾರೆ ಎಂದು ಹೇಳಿದಾಗಲೂ ಅದೆಷ್ಟೋ ಆಧುನಿಕ ಶಿಕ್ಷಣ ಪಡೆದ ಯುವಕರು ದೇಶದ ಬೆನ್ನೆಲುಬಾದ ವ್ಯವಸಾಯವನ್ನೇ ನೆಚ್ಚಿಕೊಂಡು ಗ್ರಾಮಗಳಿಗೆ ಹಿಂದಿರುಗಿದ್ದಾರೆ. ಪಾರಂಪರಿಕ ವ್ಯವಸಾಯ ಕ್ರಮಗಳಿಗೆ ಬದಲಾಗಿ ಸುಧಾರಿತ ಕೃಷಿ ಪದ್ಧತಿಗಳ ಕೈಹಿಡಿದು ರಾಷ್ಟ್ರಾಭಿವೃದ್ಧಿಯಲ್ಲಿ ಕೈಜೋಡಿಸುತ್ತಿದ್ದಾರೆ. ದೇಶದ ಒಟ್ಟು ಜನಸಂಖ್ಯೆ ಯಲ್ಲಿ ಶೇ. 65 ಯುವ ಜನರು ಅಂದರೆ 35 ವರ್ಷ ಒಳಗಿನವರು. ಇವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಪರೋಕ್ಷವಾಗಿ ರಾಷ್ಟ್ರ ನಿರ್ಮಾಣದ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.

ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರು 2020ರ ಭಾರತದ ಕುರಿತು ನುಡಿದುದು ಇವರ ಇರವನ್ನೇ ಕಂಡುಕೊಂಡು. ಗ್ರಾಮದ ಅಭಿವೃದ್ಧಿಗೆ ಹಲವು ನೆಲೆಗಳಿರುವುದಾದರೂ ಅವುಗಳಲ್ಲಿ ಪ್ರಮುಖವಾಗುವುದು ಅಲ್ಲಿನ ಯುವಕರೇ ಅಧಿಕಾರದ ಸೂತ್ರವನ್ನು ಕೈಗೆತ್ತಿ ಕೊಳ್ಳುವುದರಿಂದ. ಸ್ವಾತಂತ್ರ್ಯೋತ್ತರ ಭಾರತ ದಲ್ಲಿ ಸಂವಿಧಾನದ ಆಶಯದಂತೆ ಭಾರತದ ಹಳ್ಳಿ ಹಳ್ಳಿಗಳು ಅಭಿವೃದ್ಧಿಯಾಗಿ ರಾಷ್ಟ್ರ ನಿರ್ಮಾಣವಾಗಬೇಕಿತ್ತು. ಇದಕ್ಕಾಗಿ ರಾಜ್ಯ ಸರಕಾರಗಳು ಹಲವಾರು ಕಾನೂನಾತ್ಮಕ ಸುಧಾರಣೆಗಳನ್ನೂ ತಂದವು. ಇವೆಲ್ಲದರಿಂದ ಸ್ಥಳೀಯಾಡಳಿತವು ಗ್ರಾಮಾಭಿವೃದ್ಧಿಯಲ್ಲಿ ಪ್ರಧಾನ ಭೂಮಿಕೆ ವಹಿಸಬೇಕಾಗಿತ್ತು.

ಆದರೆ ಹಾಗಾಗಲಿಲ್ಲ. ಹಾಗಾಗದಿರಲು ಅನೇಕ ಕಾರಣ ಗಳನ್ನು ಪಟ್ಟಿ ಮಾಡಬಹುದು. ಅದು ಇಲ್ಲಿ ಪ್ರಸ್ತುತವಲ್ಲ. ಜನಸೇವೆಯ ಇಚ್ಛಾಶಕ್ತಿ ಇರುವ ಸುಶಿಕ್ಷಿತ ಯುವಜನಾಂಗದ ಕೈಗೆ ಸ್ಥಳೀಯಾ ಡಳಿತದ ಅಧಿಕಾರ ದೊರೆತರೆ ಈ ಸಮಸ್ಯೆ ಪರಿಹಾರವಾದೀತು ಎಂಬ ನಂಬಿಕೆ ನನಗಿದೆ.

Advertisement

ಗ್ರಾಮ ಪಂಚಾಯತ್‌ ಚುನಾವಣೆಯ ಹೊಸ್ತಿಲಲ್ಲಿ ನಾವಿಂದು ನಿಂತಿದ್ದೇವೆ. ಆಡಳಿತಾ ತ್ಮಕವಾಗಿ ಗ್ರಾಮೀಣ ಯುವಕರೇ ಪಂಚಾಯತ್‌ಗಳ ಆಡಳಿತದ ಚುಕ್ಕಾಣಿ ಹಿಡಿಯುವ ಸುವರ್ಣಾವಕಾಶವಿದು. ಗ್ರಾಮೀಣ ಜನರಿಗೆ ಶಿಕ್ಷಣ, ತರಬೇತಿ, ಆರೋಗ್ಯ, ನೈರ್ಮಲ್ಯ ಮುಂತಾದ ಸೌಲಭ್ಯಗಳನ್ನು ಒದಗಿಸಲು ಆಯಾ ಗ್ರಾಮದವರೇ ಹೆಚ್ಚು ಶಕ್ತರು. ಅಲ್ಲಿನ ಸಮಸ್ಯೆ ಗಳು ಅವರಿಗೆ ದೃಗ್ಗೊಚರವಾಗುವುದರಿಂದ ಪರಿಹಾರವೂ ಬಲು ಸುಲಭ. ವಿದ್ಯುತ್‌, ನೀರಾವರಿ, ಸಾರಿಗೆ, ಮಾರುಕಟ್ಟೆ ಮುಂತಾದ ಸೌಕರ್ಯಗಳನ್ನು ಒದಗಿಸಿ ಗ್ರಾಮದ ಜನರ ಬದುಕನ್ನು ಹಸನಾಗಿಸುವಲ್ಲಿ ಪಂಚಾಯತ್‌ನ ಪಾತ್ರ ಹಿರಿದು. ಬಡತನದ ಕಾರಣವಾಗಿ ಆಧು ನಿಕ ವಿದ್ಯಾಭ್ಯಾಸವನ್ನು ಮುಂದುವರಿಸಲಾಗದೆ ಸಾಂಪ್ರದಾಯಿಕ ವ್ಯವಸಾಯಗಳಲ್ಲಿ ತೊಡಗಿಸಿ ಕೊಂಡವರ ಬದುಕಿನ ಮಟ್ಟವನ್ನು ಮೇಲೆತ್ತು ವುದಕ್ಕಾಗಿ ಕೃಷಿಯ ಜತೆಗೆ ಪಶುಪಾಲನೆ, ಮೀನು ಗಾರಿಕೆ, ಕೋಳಿಸಾಕಣೆಯೇ ಮೊದಲಾದ ಕೃಷಿ ಸಂಬಂಧಿ ಚಟುವಟಿಕೆಗಳನ್ನು ಉತ್ತೇಜಿಸುವ ವ್ಯವಸ್ಥೆಯೂ ಆಗಬೇಕಾಗಿದೆ. ಕೃಷಿ ಕಾರ್ಮಿಕರು, ಹಿಂದುಳಿದ ಹಾಗೂ ಬಡಜನರಿಗೆ ನಿರಂತರ ವಾಗಿ ಉದ್ಯೋಗಾವಕಾಶಗಳು ದೊರೆಯು ವಂತೆ ಅವಕಾಶಗಳನ್ನು ಕಲ್ಪಿಸಿಕೊಡಬೇಕಾಗಿದೆ. ಮಹಿಳಾ ಸಶಕ್ತೀಕರಣಕ್ಕಾಗಿ ಕಾರ್ಯಯೋಜನೆ ರೂಪಿಸಬೇಕಾಗಿದೆ.

ಗ್ರಾಮೀಣ ಯುವಜನರೆಲ್ಲರೂ ಜನಪ್ರತಿ ನಿಧಿಯಾಗಲು ಸಾಧ್ಯವಿಲ್ಲ. ಪ್ರಜ್ಞಾವಂತ ಯುವ ಸಮುದಾಯವನ್ನು ಆರಿಸುವುದರಲ್ಲಿಯೂ ಯುವಜನತೆಯ ಪಾತ್ರವಿದೆ. ನಮ್ಮ ದೇಶದಲ್ಲಿ 18ನೇ ವರ್ಷಕ್ಕೆ ಯುವಕ- ಯುವತಿಯರು ಮತ ಚಲಾವಣೆಯ ಹಕ್ಕನ್ನು ಪಡೆದುಕೊಳ್ಳುತ್ತಾರೆ. ಮತ ಚಲಾಯಿಸುವುದಕ್ಕಿಂತ ಮೊದಲೇ ಯೋಗ್ಯ ಅಭ್ಯರ್ಥಿಯನ್ನು ನಿರ್ಧರಿಸುವ ಮತ್ತು ಆರಿಸುವ ಗುರುತರ ಜವಾಬ್ದಾರಿ ಪ್ರತಿಯೊಬ್ಬ ಪ್ರಜ್ಞಾವಂತ ಯುವಜನರದೂ ಆಗಿದೆ. ಯಾವುದೇ ಆಮಿಷಕ್ಕೊಳಗಾಗದೆ, ವ್ಯಕ್ತಿಪೂಜೆ, ಪಕ್ಷಪೂಜೆಗಳಿಗಿಳಿಯದೆ ಗ್ರಾಮಾಭಿವೃದ್ಧಿಯೇ ಆದ್ಯ ಧ್ಯೇಯವಾಗಿ ಅಭ್ಯರ್ಥಿಗಳ ಆಯ್ಕೆ ನಡೆದರೆ ಗ್ರಾಮ ಸುರಾಜ್ಯ ನಿರ್ಮಾಣವಾಗುವುದರಲ್ಲಿ ಸಂದೇಹವಿಲ್ಲ. ತಾನು ಆರಿಸಿದ ಅಭ್ಯರ್ಥಿಯು ಕರ್ತವ್ಯಚ್ಯುತನಾದರೆ ಎಚ್ಚರಿಸಿ ಮುನ್ನಡೆಸಲೂ ಯೋಗ್ಯ ಮತದಾರನಿಗೆ ಸಾಧ್ಯವಾಗುತ್ತದೆ. ಗ್ರಾಮಾಭಿವೃದ್ಧಿಯಲ್ಲಿ ಜನಪ್ರತಿನಿ ಧಿಯಾಗಿಯೂ ಮತದಾರನಾಗಿಯೂ ಅಲ್ಲಿನ ಜನತೆ ಬಹು ಮಹತ್ವದ ಪಾತ್ರ ವಹಿಸಬೇಕಾಗಿದೆ. ಅವರ ಸ್ವಾರ್ಥರಹಿತ, ನೈಜ ಅಭಿವೃದ್ಧಿ ಪರ ಕಾಳಜಿಯು ಸಾದ್ಯಂತ ಪರಿವರ್ತನೆಗೆ ನಾಂದಿ ಹಾಡುವುದರಲ್ಲಿ ಸಂಶಯವಿಲ್ಲ.

ನಮ್ಮ ಆಡಳಿತ ವ್ಯವಸ್ಥೆ ರೂಪುಗೊಳ್ಳುತ್ತಿರುವುದು ದೇಶದ ರಾಜಧಾನಿಯಲ್ಲಿ. ಅಲ್ಲಿಂದ ಹಂತ ಹಂತವಾಗಿ ಆಡಳಿತ ಜಾರಿಯಾಗುತ್ತಾ ಹಳ್ಳಿಗಳನ್ನು ತಲುಪುತ್ತದೆ. ಈ ಚಲನೆಯು ಭ್ರಷ್ಟಾಚಾರ, ಸ್ವಜನಪಕ್ಷಪಾತ, ಹಣಬಲ, ತೋಳ್ಬಲ, ಸುಳ್ಳು ಗಳ ಬಲದಿಂದ ಕೂಡಿದ್ದು ಹೊಲಸಾಗಿ ಪರಿಣ ಮಿಸಿದೆ. ಈ ಚಲನೆ ವಿರುದ್ಧ ದಿಕ್ಕಿಗೆ ತಿರುಗಿ ಹಳ್ಳಿಯಿಂದ ದಿಲ್ಲಿಯ ಕಡೆಗೆ ಪ್ರವಹಿಸಬೇಕಾದ ತುರ್ತು ಇಂದಿನದು. ಏಕೆಂದರೆ ಹಳ್ಳಿಗಳನ್ನು ಈ ಹೊಲಸು ಇನ್ನೂ ಕುಲಗೆಡಿಸಿಲ್ಲ. ಈ ದುಶ್ಚಟಗಳು ವ್ಯಾಪಿಸದಂತೆ ತಡೆಯಲು ಹಳ್ಳಿಗಳಲ್ಲಿ ಪ್ರಜ್ಞಾವಂತ ಯುವಕರ ಪಡೆ ಇದೆ. ಅವರು ಸ್ವತ್ಛ ಆಡಳಿತದ ಪ್ರವಾಹವನ್ನು ಹಳ್ಳಿಯಿಂದ ರಾಜಧಾನಿಯ ಕಡೆಗೆ ಕೊಂಡೊಯ್ಯುತ್ತಾರೆಂಬ ನಂಬಿಕೆ ನನ್ನದು.

ಹಳ್ಳಿಯ ಅಧಿಕಾರ ಹಾಗೂ ಹಳ್ಳಿಯ ಅಭಿವೃದ್ಧಿಯ ಜವಾಬ್ದಾರಿಗಳನ್ನು ಹಳ್ಳಿಯ ಯುವಕರಿಗೇ ವಹಿಸಿಕೊಡುವ ಅಧಿಕಾರದ ವಿಕೇಂದ್ರೀಕರಣ ನಡೆಯಬೇಕಾಗಿದೆ. ನಮ್ಮ ಪರಂಪರೆ, ಸಂಸ್ಕೃತಿಯ ಅರಿವಿರುವ ರಾಷ್ಟ್ರಾಭಿಮಾನದ, ಸ್ವಾರ್ಥರಹಿತ, ಪರೋಪಕಾರ ಗುಣದ ಯುವಪಡೆ ಪಂಚಾಯತ್‌ನ ಅಧಿಕಾರ ವಹಿಸಿಕೊಂಡು ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಸಾಕಾರವಾಗಬೇಕಾಗಿದೆ. ಪದವೀಧರರು, ಎಂಜಿನಿಯರಿಂಗ್‌ ಪದವೀಧರರು ಚುನಾವಣೆಗೆ ನಿಂತ ಮಾಹಿತಿ ಲಭ್ಯವಾಗುತ್ತಿ ರುವುದು ಈ ನಿಟ್ಟಿನಲ್ಲಿ ಮೊದಲ ವಿಜಯದ ಸಂಕೇತವಾಗಿದೆ.

– ಡಾ| ಎಂ. ಮೋಹನ ಆಳ್ವ
ಅಧ್ಯಕ್ಷರು, ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ (ರಿ.)ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next