ಬೆಂಗಳೂರು: ಪಂಚಾಯತ್‌ಗಳನ್ನು ಸ್ಥಳೀಯ ಸರಕಾರಗಳು ಎಂದು ಘೋಷಿಸಿ ಕಾನೂನು ಬಲ ಕೊಡಲಾಗಿದೆ. ಆದರೆ ಅಲ್ಲಿನ ನೌಕರರ ವೇತನ ಸಮಸ್ಯೆಗೆ ಮಾತ್ರ ಮುಕ್ತಿ ಇಲ್ಲ ! ವಿವಿಧ ತಾಂತ್ರಿಕ ಕಾರಣಗಳಿಂದಾಗಿ ಪಂಚಾಯತ್‌ಗಳ ಬಿಲ್ ಕಲೆಕ್ಟರ್, ಕ್ಲರ್ಕ್, ಪಂಪ್ ಆಪರೇಟರ್, ಕರ ವಸೂಲಿಗಾರ ಮತ್ತಿತರರಿಗೆ ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ. 2019- 20ನೇ ಸಾಲಿನಲ್ಲಿ 43 ಸಾವಿರ ಸಿಬಂದಿಯ 4ರಿಂದ 5 ತಿಂಗಳ ವೇತನ ಬಾಕಿ ಉಳಿದಿದೆ.
ವರ್ಷಕ್ಕೆ ಬೇಕು 900 ಕೋ.ರೂ.
ರಾಜ್ಯದ 6,024 ಗ್ರಾ.ಪಂ.ಗಳಲ್ಲಿ ಸುಮಾರು 65 ಸಾವಿರ ಸಿಬಂದಿ ಕೆಲಸ ಮಾಡುತ್ತಿದ್ದಾರೆ. ಇವರ ವೇತನಕ್ಕೆ ವಾರ್ಷಿಕ ಅಂದಾಜು 900 ಕೋ.ರೂ. ಬೇಕು. 2019-20ನೇ ಸಾಲಿನಲ್ಲಿ 43 ಸಾವಿರ ಸಿಬಂದಿಗೆ ಸುಮಾರು 5 ತಿಂಗಳ ವೇತನ ಬಾಕಿ ಉಳಿದಿದ್ದರೆ, 2018-19ರಲ್ಲಿ 25 ಸಾವಿರ ಸಿಬಂದಿಯ 1 ವರ್ಷದ ವೇತನ ಬಾಕಿಯಿದೆ. ಬಜೆಟ್‌ನಲ್ಲಿ 383 ಕೋ.ರೂ. ಮೀಸಲಿಟ್ಟರೆ ಮಾತ್ರ ಬಾಕಿ ವೇತನ ನೀಡಬಹುದು.
ಬಾಕಿ ವೇತನ ಪಾವತಿಗಾಗಿ 382 ಕೋ.ರೂ.ಗಳನ್ನು ಬಜೆಟ್‌ನಲ್ಲಿ ಘೋಷಿಸಬೇಕೆಂಬ ಬೇಡಿಕೆ ಜತೆಗೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಗ್ರಾ.ಪಂ.ವಾರು ಪಟ್ಟಿ ಪರಿಶೀಲಿಸಿ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದಾರೆ. ಅದರಂತೆ ಹಣ ಬಿಡುಗಡೆಗೆ ಹಣಕಾಸು ಇಲಾಖೆ ಒಪ್ಪಿದೆ. ಆದರೆ 15 ಸಾವಿರ ಸಿಬಂದಿಯನ್ನು ಇಎಫ್ಎಂಎಸ್‌ಗೆ ಸೇರಿಸ ಲಾಗದೆ ವೇತನ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬುದು ಪಂ. ಸಿಬಂದಿಯ ಅಳಲು.
“ಇಲ್ಲ’ಗಳ ಸರಮಾಲೆ
– ಪಂ. ನೌಕರರಿಗೆ ಸರಕಾರಿ ಖಜಾನೆ ಯಿಂದ ವೇತನ ನೀಡಬೇಕು ಎಂದು ನಿರ್ಧಾರವಾಗಿದೆ. ಆದರೆ ಅದು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ.
– ಕನಿಷ್ಠ ವೇತನ ನಿಗದಿ ಬೇಡಿಕೆ ಈಡೇರಿಲ್ಲ.
– 30 ಸಾವಿರ ಸಿಬಂದಿ ನೇಮಕಾತಿ ಅನು ಮೋದನೆ ಆದೇಶ ನನೆಗುದಿಗೆ ಬಿದ್ದಿದೆ.
– 15 ಸಾವಿರ ಸಿಬಂದಿ ಈ ತನಕ “ಎಲೆಕ್ಟ್ರಾನಿಕ್ ಫಂಡ್ ಮ್ಯಾನೇಜ್‌ಮೆಂಟ್ ಸಿಸ್ಟಂ’ (ಇಎಫ್ಎಂಎಸ್) ವ್ಯಾಪ್ತಿಗೆ ಸೇರಿಲ್ಲ.
– 10- 15 ವರ್ಷಗಳಿಂದ ಸೇವೆ ಸಲ್ಲಿಸಿದ್ದರೂ ಬಿಲ್ ಕಲೆಕ್ಟರ್, ಕಂಪ್ಯೂಟರ್ ಆಪರೇಟರ್‌ಗಳ ಭಡ್ತಿಯ ಬೇಡಿಕೆಗೆ ಸ್ಪಂದನೆ ಸಿಗುತ್ತಿಲ್ಲ.
ಪಂಚಾಯತ್ ನೌಕರರ ವೇತನ ಸಮಸ್ಯೆಗೆ ಎಷ್ಟೇ ಸಭೆಗಳು ನಡೆದರೂ ಎಷ್ಟೇ ಆದೇಶಗಳನ್ನು ಹೊರ ಡಿಸಿದರೂ ಪೂರ್ಣ ಪರಿಹಾರ ಸಿಗುತ್ತಿಲ್ಲ. ಬಾಕಿ ವೇತನ ಬಿಡುಗಡೆ ಮಾಡಬೇಕು. ಇದಕ್ಕಾಗಿ ಬಜೆಟ್‌ನಲ್ಲಿ 382 ಕೋಟಿ ರೂ. ಘೋಷಿಸಬೇಕು. 30 ಸಾವಿರ ಸಿಬಂದಿಯ ನೇಮಕಾತಿ ಅನುಮೋದನೆಗೆ ಸಂಬಂಧಿಸಿದ 2019ರ ಜು.23ರ ಆದೇಶ ಜಾರಿಗೆ ತರಬೇಕು. 15 ಸಾವಿರ ಸಿಬಂದಿಯನ್ನು ಇಎಫ್ಎಂಎಸ್‌ಗೆ ಸೇರಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಾವು ಪ್ರತಿಭಟನೆ ನಡೆಸುತ್ತೇವೆ.
– ಮಾರುತಿ ಮಾನ್ಪಡೆ, ಗ್ರಾ.ಪಂ. ನೌಕರರ ಸಂಘದ ಅಧ್ಯಕ್ಷ
ರಫೀಕ್ ಅಹ್ಮದ್