Advertisement
ಕಡಬ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಾದು ಹೋಗುವ ಉಪ್ಪಿನಂಗಡಿ – ಕಡಬ – ಸುಬ್ರಹ್ಮಣ್ಯ ಲೋಕೋಪಯೋಗಿ ರಸ್ತೆಯ ಮಾರ್ಜಿನ್‌ನಲ್ಲಿ ಅನಧಿಕೃತವಾಗಿ ವ್ಯಾಪಾರ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ನೀತಿ ತಂಡದವರ ದೂರು ಹಾಗೂ ಗ್ರಾ.ಪಂ. ಸಾಮಾನ್ಯ ಸಭೆಯ ನಿರ್ಣಯದಂತೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಗ್ರಾ.ಪಂ. ಪರವಾನಿಗೆ ಇಲ್ಲದೆ ಅನಧಿಕೃತವಾಗಿ ರಸ್ತೆ ಪರಂಬೋಕ್‌ನಲ್ಲಿ ವ್ಯಾಪಾರ ಮಾಡುತ್ತಿರುವ ಗೂಡಂಗಡಿ, ಸೈಕಲ್ ಅಂಗಡಿ, ತಳ್ಳು ಗಾಡಿ ಮತ್ತು ಮೊಬೈಲ್ ಕ್ಯಾಂಟೀನ್ ವ್ಯಾಪಾರಸ್ಥರು ನೋಟಿಸ್ ತಲುಪಿದ ಒಂದು ವಾರದೊಳಗೆ ವ್ಯಾಪಾರ ಸ್ಥಗಿತಗೊಳಿಸಿ ಅಂಗಡಿಯನ್ನು ತೆರವುಗೊಳಿಸಬೇಕು. ತಪ್ಪಿದಲ್ಲಿ ಪಂಚಾಯತ್‌ರಾಜ್ ಅಧಿನಿಯಮ 1993 ಪ್ರಕರಣ 68, 69, 70ರಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ.
ಕಡಬ ಪೇಟೆಯಲ್ಲಿ ರಸ್ತೆ ಪರಂಬೋಕಿನಲ್ಲಿ 40ಕ್ಕೂ ಹೆಚ್ಚು ಅನಧಿಕೃತ ಗೂಡಂಗಡಿಗಳು ಕಾರ್ಯಾಚರಿಸುತ್ತಿವೆ ಎಂದು ಗ್ರಾ.ಪಂ. ಮಾಹಿತಿ ತಿಳಿಸಿದೆ. ಅನಧಿಕೃತ ಗೂಡಂಗಡಿ ನಡೆಸುತ್ತಿರುವ ವ್ಯಕ್ತಿಗಳಿಗೆ ವಾರದೊಳಗೆ ವ್ಯಾಪಾರ ಸ್ಥಗಿತಗೊಳಿಸಿ ಅಂಗಡಿ ತೆರವುಗೊಳಿಸುವಂತೆ ಸೂಚಿಸಲಾಗಿದೆ. ಲೋಕೋಪಯೋಗಿ ಇಲಾಖಾಧಿಕಾರಿಗಳು ನಿಗದಿಪಡಿಸಿದ ದಿನದಂತೆ ಕಂದಾಯ ಇಲಾಖೆ ಹಾಗೂ ಪೊಲೀಸರ ಸಹಕಾರದೊಂದಿಗೆ ಅಂಗಡಿ ರಚನೆಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗುವುದು. ರಸ್ತೆಯ ಪಕ್ಕದಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಡಕಾಗಿರುವ ತಳ್ಳು ಬಂಡಿ ವ್ಯಾಪಾರಕ್ಕೂ ಅವಕಾಶವಿಲ್ಲ ಎಂದು ಕಡಬ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ಗೌಡ ಕಜೆಮೂಲೆ ತಿಳಿಸಿದ್ದಾರೆ.
Related Articles
ಲೋಕೋಪಯೋಗಿ ರಸ್ತೆಯಗಳ ಪಕ್ಕದಲ್ಲಿ ಸುಗಮ ಸಂಚಾರಕ್ಕೆ ತೊಡಕಾಗುವ ರೀತಿಯಲ್ಲಿ ಅನಧಿಕೃತ ಗೂಡಂಗಡಿಗಳು ತೆರೆದುಕೊಂಡಿರುವ ಕುರಿತು ಸಾಕಷ್ಟು ದೂರುಗಳ ಬರುತ್ತಿವೆ. ಈ ಹಿಂದೆಯೇ ಅಂತಹ ಅನಧಿಕೃತ ಅಂಗಡಿಗಳವರು ತಮ್ಮ ವ್ಯಾಪಾರ ಸ್ಥಗಿತಗೊಳಿಸಿ ಅಂಗಡಿ ರಚನೆಗಳನ್ನು ತೆರವುಗೊಳಿಸಬೇಕೆಂದು ಪ್ರಕಟನೆ ನೀಡಲಾಗಿತ್ತು. ಗ್ರಾ.ಪಂ.ಗಳಿಗೂ ಪತ್ರ ರವಾನಿಸಲಾಗಿತ್ತು. ಕೆಲವು ಕಡೆ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಉಳಿದ ಕಡೆ ಪೊಲೀಸರ ನೆರವಿನೊಂದಿಗೆ ಕಂದಾಯ ಇಲಾಖೆ, ಗ್ರಾ.ಪಂ. ಆಡಳಿತ ಮೂಲಕ ಶೀಘ್ರ ಕಾರ್ಯಾಚರಣೆ ನಡೆಸಲಾಗುವುದು.
– ಪ್ರಮೋದ್‌ಕುಮಾರ್ ಕೆ.ಕೆ., ಪಿಡಬ್ಲ್ಯೂಡಿ ಎಇ, ಪುತ್ತೂರು
Advertisement
ಅನಧಿಕೃತ ಗೂಡಂಗಡಿಗಳಿಗೆ ನೋಟಿಸ್ ಜಾರಿಅನಧಿಕೃತ ಗೂಡಂಗಡಿಗಳ ವಿರುದ್ಧ ಸಾರ್ವಜನಿಕರಿಂದ ಪದೇ ಪದೆ ದೂರುಗಳು ಬರುತ್ತಿವೆ. ಗ್ರಾ.ಪಂ.ಪರವಾನಿಗೆ ಪಡೆದು ಎಲ್ಲ ತೆರಿಗೆ ಪಾವತಿಸಿ, ಬಾಡಿಗೆ ಕೊಠಡಿಗಳಿಗೆ ದುಬಾರಿ ಮುಂಗಡ ಹಾಗೂ ಬಾಡಿಗೆ ನೀಡಿ ಕಾನೂನು ಪ್ರಕಾರ ವ್ಯಾಪಾರ ನಡೆಸುವವರಿಗೆ ಇಂತಹ ಅನಧಿಕೃತ ಅಂಗಡಿಗಳಿಂದಾಗಿ ತೊಂದರೆಯಾಗುತ್ತಿದೆ. ಪೇಟೆಯ ಸೌಂದರ್ಯಕ್ಕೂ ಧಕ್ಕೆಯಾಗುತ್ತಿದೆ ಎಂದು ಸಾಮಾಜಿಕ ಸಂಘಟನೆ ನೀತಿ ತಂಡದ ಪದಾಧಿಕಾರಿಗಳು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಅನಧಿಕೃತ ಗೂಡಂಗಡಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.
– ಬಾಬು ಮುಗೇರ, ಕಡಬ ಗ್ರಾ.ಪಂ. ಅಧ್ಯಕ್ಷ ನಾಗರಾಜ್ ಎನ್.ಕೆ.