Advertisement

ಗ್ರಾಮ ಪಂಚಾಯತ್‌ ತೆರಿಗೆ ಸಂಗ್ರಹ: ಉಡುಪಿ ದ್ವಿತೀಯ, ದಕ್ಷಿಣ ಕನ್ನಡ ತೃತೀಯ

01:15 AM Jul 30, 2019 | Sriram |

ಉಡುಪಿ: ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ಅಳವಡಿಸಲಾದ ಪಂಚತಂತ್ರಾಂಶದ ಮೂಲಕ ಗ್ರಾ.ಪಂ. ತೆರಿಗೆ ವಸೂಲಾತಿಯಲ್ಲಿ 2018-19ನೇ ಸಾಲಿನಲ್ಲಿ ರಾಜ್ಯ ಮಟ್ಟದಲ್ಲಿ ಉಡುಪಿ ಜಿ.ಪಂ. ದ್ವಿತೀಯ ಮತ್ತು ದಕ್ಷಿಣ ಕನ್ನಡ ಜಿ.ಪಂ. ತೃತೀಯ ಸ್ಥಾನ ಗಳಿಸಿವೆ.

Advertisement

ಉಡುಪಿ: 6 ಕೋ. ರೂ., ತೆರಿಗೆ ಹೆಚ್ಚಳ
ಕಳೆದ ವರ್ಷ 4ನೇ ಸ್ಥಾನದಲ್ಲಿದ್ದ ಉಡುಪಿ ಜಿ.ಪಂ. ಈ ಬಾರಿ ಎರಡನೇ ಸ್ಥಾನಕ್ಕೆ ಜಿಗಿದಿದೆ. ಯೋಜನೆಯಡಿ ಜಿಲ್ಲೆಯ 158 ಗ್ರಾ.ಪಂ.ಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿವೆ. 2018ನೇ ಸಾಲಿನಲ್ಲಿ 21 ಕೋ.ರೂ. ಮತ್ತು 2017-18ರಲ್ಲಿ 15 ಕೋ.ರೂ. ತೆರಿಗೆ ಸಂಗ್ರಹವಾಗಿತ್ತು. ಒಂದೇ ವರ್ಷದ ಅವಧಿಯಲ್ಲಿ ತೆರಿಗೆ ಸಂಗ್ರಹ ಪ್ರಮಾಣ 6 ರೂ.ರೂ. ಹೆಚ್ಚಳವಾಗಿದೆ.

ದ.ಕ. 4ನೇ ಸ್ಥಾನ
ದಕ್ಷಿಣ ಕನ್ನಡ ಜಿಲ್ಲೆ ಕಳೆದ ವರ್ಷಕ್ಕಿಂತ ಒಂದು ಸ್ಥಾನ ಕುಸಿದರೂ ಇತರ ಜಿಲ್ಲೆಗೆ ಹೋಲಿಸಿ ದಲ್ಲಿ ಗಮ ನಾರ್ಹ ಸಾಧನೆ ಮಾಡಿದೆ. ಜಿಲ್ಲೆಯ 230 ಗ್ರಾ.ಪಂ.ಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿವೆ. 2018-19ನೇ ಸಾಲಿನಲ್ಲಿ 29 ಕೋ.ರೂ. ಮತ್ತು 2017-18ರಲ್ಲಿ 27 ಕೊ.ರೂ. ತೆರಿಗೆ ಸಂಗ್ರಹವಾಗಿದೆ.

ಏನಿದು ಪಂಚತಂತ್ರಾಂಶ?
ರಾಜ್ಯ ಸರಕಾರ ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪಂಚತಂತ್ರ (ಪಂಚತಂತ್ರಾಂಶ)ವನ್ನು ಅಭಿವೃದ್ಧಿಪಡಿಸಿದೆ. ಇಲ್ಲಿ ಎಲ್ಲ ಗ್ರಾ.ಪಂ.ಗಳು ಸಂಗ್ರಹಿಸಿದ ತೆರಿಗೆ ವಿವರಗಳನ್ನು ಕಾಲಕಾಲಕ್ಕೆ ಇದೇ ತಂತ್ರಾಂಶದಲ್ಲಿ ದಾಖಲು ಮಾಡಬೇಕು. ಒಂದು ವೇಳೆ ಸಂಗ್ರಹಿಸಿ ತೆರಿಗೆ ಮಾಹಿತಿಯನ್ನು ತಂತ್ರಾಂಶದಲ್ಲಿ ದಾಖಲು ಮಾಡದೆ ಹೋದರೆ ತೆರಿಗೆ ಸಂಗ್ರಹ ಪಟ್ಟಿಯಲ್ಲಿ ಆ ಜಿಲ್ಲೆ ಶೂನ್ಯ ಪ್ರಗತಿ ದಾಖಲಿಸುತ್ತದೆ.

ತೆರಿಗೆ ಹೆಚ್ಚಳಕ್ಕೆ ಕಾರಣ
ಉಡುಪಿ ಜಿ.ಪಂ. ವ್ಯಾಪ್ತಿಯ ಎಲ್ಲ ಗ್ರಾ.ಪಂ.ಗಳು ಸಮರ್ಪಕವಾಗಿ ತೆರಿಗೆ ವಸೂಲಿ ಮಾಡಿದ್ದು, ಸಕಾಲ ದಲ್ಲಿ ಪಂಚತಂತ್ರಾಂಶದಲ್ಲಿ ವಿವರ ಅಪ್‌ಲೋಡ್‌ಮಾಡಿವೆ. 4 ವರ್ಷದ ಬಳಿಕ 2018-19ರಲ್ಲಿ ತೆರಿಗೆ ಪರಿಷ್ಕರಣೆಯಾಗಿದೆ.

Advertisement

ಈ ಸಂದರ್ಭ ಹಳೆಯ ತೆರಿಗೆಯ ಮೇಲೆ ಶೇ. 5ರಿಂದ ಶೇ. 10ರಷ್ಟು ಏರಿಕೆಯಾಗಿದೆ. ಇದರಿಂದಾಗಿ ಈ ಬಾರಿ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗಿದೆ.

ಸಚಿವರಿಂದ ಅಭಿನಂದನ ಪತ್ರ
ಉತ್ತಮ ತೆರಿಗೆ ಸಂಗ್ರಹಕ್ಕಾಗಿ ಉಡುಪಿ  ಜಿ.ಪಂ.ಗೆ ಹಿಂದಿನ ಸರಕಾರದ ಗ್ರಾಮೀಣಾಭಿ ವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಬೈರೇಗೌಡ ಅವರಿಂದ ಅಭಿನಂದನ ಪತ್ರ ದೊರಕಿದೆ.

ಕಾರ್ಕಳದಲ್ಲಿ ದಾಖಲೆ
ತೆರಿಗೆ ಸಂಗ್ರಹ
ಕಾರ್ಕಳ ತಾಲೂಕು ತೆರಿಗೆ ಸಂಗ್ರಹಣೆಯಲ್ಲಿ ಉತ್ತಮ ಸಾಧನೆ ಮಾಡಿದೆ. 34 ಗ್ರಾ.ಪಂ.ಗಳಿಂದ 3.17 ಕೋ. ರೂ. ತೆರಿಗೆ ಸಂಗ್ರಹ ಸಾಧಿಸುವ ಮೂಲಕ 10ರಲ್ಲಿ 8 ಅಂಕ ಪಡೆದಿದೆ.

ರಾಜ್ಯದಲ್ಲೂ ತೆರಿಗೆ ಹೆಚ್ಚಳ
ರಾಜ್ಯ ಮಟ್ಟದಲ್ಲಿ 2017-18ನೇ ಸಾಲಿನಲ್ಲಿ 322 ಕೋ.ರೂ. ತೆರಿಗೆ ಸಂಗ್ರಹವಾಗಿತ್ತು. 2018-19ನೇ ಸಾಲಿನಲ್ಲಿ 483 ಕೋ.ರೂ. ಸಂಗ್ರಹವಾಗಿದೆ.

ಗ್ರಾ.ಪಂ. ವ್ಯಾಪ್ತಿಯಲ್ಲಿ ಜನರು ನಿಗದಿ ಸಮಯದೊಳಗೆ ಪಾವತಿ ಮಾಡುತ್ತಿದ್ದಾರೆ. ಪಂಚತಂತ್ರಾಂಶದಲ್ಲಿ ಸಮರ್ಪಕ ಮಾಹಿತಿ ದಾಖಲಾತಿ ಸೇರ್ಪಡೆ ಮತ್ತು ನೂತನ ತೆರಿಗೆ ಪರಿಷ್ಕರಣೆಯಿಂದ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗಿದೆ.
-ಶ್ರೀನಿವಾಸ್‌ ರಾವ್‌
ಮುಖ್ಯಯೋಜನಾಧಿಕಾರಿ, ಉಡುಪಿ ಜಿ.ಪಂ.

Advertisement

Udayavani is now on Telegram. Click here to join our channel and stay updated with the latest news.

Next