ಬೆಳ್ತಂಗಡಿ: ಪದವಿ ವಿದ್ಯಾರ್ಹತೆ ಮತ್ತು ಸೇವಾನುಭವ ಪಡೆದಿರುವ ಸೇವಾನಿರತ ಪ್ರಾಥಮಿಕ ಶಾಲಾ ಸಹ ಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (6-8) ಎಂದು ಭಡ್ತಿ ನೀಡಬೇಕು ಆಗ್ರಹಿಸಿ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ವೇದಿಕೆ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಮೂಲಕ ಮನವಿ ನೀಡಿ ರಾಜ್ಯ ಸರಕಾರವನ್ನು ಆಗ್ರಹಿಸಲಾಯಿತು.
ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ಚಂದ್ರಹಾಸ ಪೆರಿಯೊಟ್ಟು ಹಾಗೂ ಕಾರ್ಯದರ್ಶಿ ರಾಜೇಶ್ ನೆಲ್ಯಾಡಿ ಅವರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ನಾರಾಯಣ ನಾಯ್ಕ ಅವರಿಗೆ ಮನವಿ ನೀಡಿದರು.
ಸರಕಾರಿ ಶಾಲೆಗಳ 1ರಿಂದ 7ನೇ ತರಗತಿಗೆ ನೇಮಕವಾದ ಶಿಕ್ಷಕರು 2015ರಲ್ಲಿ 8ನೇ ತರಗತಿ ಪ್ರಾರಂಭವಾದ ದಿನಗಳಿಂದಲೂ 6-8ನೇ ತರಗತಿಗಳನ್ನು ಬೋಧಿಸುತ್ತಾ ಬಂದಿದ್ದಾರೆ. ರಾಜ್ಯದಲ್ಲಿ 82 ಸಾವಿರಕ್ಕಿಂತಲೂ ಅಧಿಕ ಶಿಕ್ಷಕರು ಈ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಸರಕಾರವು ಅವರನ್ನು ಮುಂಭಡ್ತಿಗೆ ಪರಿಗಣಿಸದೇ ಕಳೆದ 2 ಬಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರು (6-8) ಹುದ್ದೆಗಳನ್ನು ನೇರ ನೇಮಕಾತಿ ಮಾಡಿದ್ದು, ಪ್ರಸ್ತುತ ಮತ್ತೆ 3ನೇ ಬಾರಿಗೆ ನೇಮಕಾತಿ ಪ್ರಾರಂಭಗೊಂಡಿದೆ. ಈ ಕುರಿತು ಸಚಿವರು ಹಾಗೂ ಶಿಕ್ಷಣ ಇಲಾಖೆಯ ಮುಖ್ಯಸ್ಥರಿಗೆ ತಿಳಿಸಿರುವ ಜತೆಗೆ
2018ರ ಫೆ. 5ರಂದು ಫ್ರೀಡಂ ಪಾರ್ಕ್‌ನಲ್ಲಿ 25 ಸಾವಿರಕ್ಕೂ ಅಧಿಕ ಶಿಕ್ಷಕರು ಉಪವಾಸ ಸತ್ಯಾಗ್ರಹವನ್ನೂ ಮಾಡಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಮನವಿ ನೀಡುವ ವೇಳೆ ಕಚೇರಿಯ ಶಿಕ್ಷಣ ಸಂಯೋಜಕರಾದ ರಮೇಶ್, ಸುಭಾಸ್ ಜಾಧವ್, ದೈಹಿಕ ಶಿಕ್ಷಣ ಸಂಯೋಜಕ ಭುವನೇಶ್, ಸರಕಾರಿ ನೌಕರರ ಸಂಘದ ಸಂಘಟನ ಕಾರ್ಯದರ್ಶಿ ಜಯರಾಜ್ ಜೈನ್, ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಮಹಮ್ಮದ್ ರಿಯಾಜ್, ತಾಲೂಕು ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಸುರೇಶ್ ಮಾಚಾರ್ ಮೊದಲಾದವರಿದ್ದರು. ಪದವೀಧರ ಶಿಕ್ಷಕರ ವೇದಿಕೆಯ ಸದಸ್ಯ ದೇವುದಾಸ್ ನಾಯಕ್ ಸ್ವಾಗತಿಸಿ, ವಂದಿಸಿದರು.
ಎಚ್ಚರಿಕೆ
ಅರ್ಹ ಪದವೀಧರ ಶಿಕ್ಷಕರನ್ನು ಪ್ರಾಥಮಿಕ ಪದವೀಧರ ಶಿಕ್ಷಕರು (6-8) ಎಂದು ಪರಿಗಣಿಸಿ ಭಡ್ತಿ ನೀಡಬೇಕು. ಇಲ್ಲವಾದಲ್ಲಿ ಹೊಸ ವೃಂದ ನಿಯಮಗಳಂತೆ 1ರಿಂದ 5ನೇ ತರಗತಿಯವರೆಗೆ ಮಾತ್ರ ಬೋಧಿಸುತ್ತೇವೆ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.