Advertisement

ಪದವೀಧರ ಕ್ಷೇತ್ರ ಚುನಾವಣೆ; ದಕ್ಷಿಣದ ಸೋಲು- ಬಿಜೆಪಿಗೆ ಎಚ್ಚರಿಕೆ ಗಂಟೆ

04:01 PM Jun 17, 2022 | Team Udayavani |

ಮೈಸೂರು: ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣಾ ಫಲಿತಾಂಶವು ರಾಜ್ಯದ ಆಡಳಿತಾರೂಢ ಬಿಜೆಪಿಗೆ ಎಚ್ಚರಿಕೆ ಗಂಟೆಯಾಗಿದ್ದರೆ, ಪ್ರತಿಪಕ್ಷ ಕಾಂಗ್ರೆಸ್‌ ಪಾಳಯದಲ್ಲಿ ಉತ್ಸಾಹ ಗರಿಗೆದರಿದೆ. ಕಾಂಗ್ರೆಸ್‌ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಜಯದ ನಗೆ ಬೀರಿ ದಾಖಲೆ ನಿರ್ಮಿಸಿದೆ.

Advertisement

ಆಡಳಿತ ಪಕ್ಷ ಬಿಜೆಪಿ ಮುಂದಿನ ಅಸೆಂಬ್ಲಿ ಚುನಾವಣೆಗೆ ಈಗಲೇ ರಣಕಹಳೆ ಊದಿದಂತೆ ಅಖಾಡಕ್ಕೆ ಇಳಿದಿತ್ತು. ಹಳೇ ಮೈಸೂರು ಭಾಗದಲ್ಲಿ ದಕ್ಷಿಣ ಪದವೀಧರ ಕ್ಷೇತ್ರ ಗೆದ್ದು ಮತ್ತಷ್ಟು ಆಕ್ರಮಣಕಾರಿಯಾಗಿ ಮುನ್ನುಗ್ಗಲು ಹೊರಟಿತ್ತು. ಈ ಚುನಾವಣೆಯ ಸೋಲು ಬಿಜೆಪಿಯ ಉತ್ಸಾಹಕ್ಕೆ ತಣ್ಣಿರೆರಚಿದೆ.

ಇತ್ತೀಚೆಗೆ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಸೋತಿತ್ತು. ಈಗ ಪದವೀಧರ ಕ್ಷೇತ್ರದಲ್ಲೂ ಮತದಾರ ಬಿಜೆಪಿಗೆ ಒಲಿದಿಲ್ಲ. ಅಸೆಂಬ್ಲಿ ಚುನಾವಣೆಗೆ ಇನ್ನು ಒಂದು ವರ್ಷವೂ ಇಲ್ಲದಿರುವಾಗ ಈ ಎರಡು ಚುನಾವಣೆಗಳಲ್ಲಿ ಸೋತಿರುವುದು ಬಿಜೆಪಿಗೆ ಹಿನ್ನಡೆ ತಂದಿದೆ.

ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ರಾಜ್ಯದಲ್ಲಿ 150 ಸ್ಥಾನ ಗೆಲ್ಲುವ ಗುರಿ ಹೊಂದಿರುವ ಬಿಜೆಪಿ ಹಳೇ ಮೈಸೂರು ಪ್ರಾಂತ್ಯದ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುವ ಕಾರ್ಯತಂತ್ರ ರೂಪಿಸಿದೆ. ಈ ನಾಲ್ಕು ಜಿಲ್ಲೆಗಳ ಹೆಚ್ಚಿನ ವಿಧಾನಸಭಾ ಕ್ಷೇತ್ರಗಳಲ್ಲಿ ಕಮಲ ಅರಳಿಸುವ ಕಸರತ್ತು ನಡೆಸಿದೆ. ಇಂತಹ ವೇಳೆಯಲ್ಲಿ ಈ ನಾಲ್ಕು ಜಿಲ್ಲೆಗಳನ್ನು ಒಳಗೊಂಡ ಪದವೀಧರ ಕ್ಷೇತ್ರದಲ್ಲೇ ಸೋಲು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಶಿಕ್ಷಿತರ ಈ ಕ್ಷೇತ್ರದಲ್ಲಿ ಆಗಿರುವ ಸೋಲು ಬಿಜೆಪಿಗೆ ಎಚ್ಚರಿಕೆ ಗಂಟೆಯಾಗಿದೆ.

ಬಿಜೆಪಿಯ ಈ ಸೋಲು ಪಕ್ಷದಲ್ಲಿ ಚರ್ಚೆಗೆ ನಾಂದಿ ಹಾಡಿದೆ. ಮೈಸೂರು ಭಾಗದಲ್ಲಿ ಬಿಜೆಪಿಯಲ್ಲಿ ಬಣ ರಾಜಕಾರಣ ಬಲವಾಗಿಯೇ ಇದೆ. ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರಿಗೆ ನಿಷ್ಠಾವಂತರಾಗಿರುವ ಒಂದು ಗುಂಪು ಇದ್ದರೆ ಮತ್ತೂಂದು ಗುಂಪು ಆರ್‌ಎಸ್‌ಎಸ್‌ ಹಿನ್ನೆಲೆಯ ಕಟ್ಟಾ ಕಾರ್ಯಕರ್ತರಾಗಿದ್ದಾರೆ. ಬಿಜೆಪಿಯಿಂದ ಕಣಕ್ಕಿಳಿದು ಸತತ ಎರಡನೇ ಬಾರಿಗೆ ಪರಾಭವಗೊಂಡ ಮೈ.ವಿ.ರವಿಶಂಕರ್‌ ಆರ್‌ಎಸ್‌ಎಸ್‌ ಹಿನ್ನೆಲೆಯ ಪಕ್ಷದ ತಳಮಟ್ಟದ ಸಂಘಟನೆಯಿಂದ ಬೆಳೆದು ಬಂದವರಾಗಿದ್ದಾರೆ.

Advertisement

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರ ನಿಕಟವರ್ತಿಯಾಗಿದ್ದಾರೆ. ಸ್ಥಳೀಯ ಸಂಸ್ಥೆಗಳಿಂದ ಇತ್ತೀಚೆಗೆ ನಡೆದ ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣವೇನೆಂಬ ಬಗ್ಗೆ ಆ ಪಕ್ಷದ ವೇದಿಕೆಯಲ್ಲಿ ಚರ್ಚೆಯೇ ಆಗಲಿಲ್ಲ. ಆತ್ಮಾವಲೋಕನ ಸಭೆಯೇ ನಡೆಯಲಿಲ್ಲ. ಸೋಲಿನಿಂದ ಪಾಠವನ್ನೂ ಕಲಿಯಲಿಲ್ಲ. ರವಿಶಂಕರ್‌ ಕಳೆದ ಬಾರಿ ಅತ್ಯಲ್ಪ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಈ ಬಾರಿ 12 ಸಾವಿರ ಮತಗಳ ಅಂತರದಿಂದ ಸೋತಿರುವ ಬಗ್ಗೆ ಬಿಜೆಪಿ ತನ್ನ ಬೈಠಕ್‌ನಲ್ಲಿ ಚರ್ಚಿಸುವಂತೆ ಮಾಡಿದೆ.

ಮೈಸೂರು ಭಾಗದಲ್ಲಿ ಬಿಜೆಪಿಯಲ್ಲಿ ವಲಸಿಗರಲ್ಲಿ ಕೆಲವು ಪ್ರಮುಖ ನಾಯಕರನ್ನು ಕಡೆಗಣಿಸಲಾಗಿದೆ. ಇದು ಕೂಡ ಸೋಲಿಗೆ ಮತ್ತಷ್ಟು ಕಾರಣವಾಗಿದೆ ಎಂಬ ಚರ್ಚೆ ಶುರುವಾಗಿದೆ. ಬಿಜೆಪಿ ಸಂಘಟನಾತ್ಮಕವಾಗಿ ಪ್ರಚಾರವೇನೋ ನಡೆಸಿತ್ತು. ಆದರೆ, ಪಕ್ಷದ ಬಣ ರಾಜಕಾರಣದ ಒಳೇಟು ಬಿದ್ದಿರುವುದನ್ನು ಕಾಣಬಹುದು. ಚುನಾವಣಾ ಪ್ರಚಾರದ ವೇಳೆ ಬಿಜೆಪಿಯ ಕೆಲವು ನಾಯಕರು ನಾಲಿಗೆಯನ್ನು ಹರಿಬಿಟ್ಟು ಮಾತನಾಡಿದ್ದು ಕೂಡ ಆ ಪಕ್ಷಕ್ಕೆ ದುಬಾರಿಯಾಗಿರುವುದನ್ನು ತಳ್ಳಿ ಹಾಕುವಂತಿಲ್ಲ.

ಪ್ರಧಾನಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಜೂ.20ರಂದು ಮೈಸೂರಿಗೆ ಆಗಮಿಸಲಿದ್ದಾರೆ. ಮೋದಿ ಅವರು ಮೈಸೂರಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಅವರಿಗೆ ಪದವೀಧರ ಕ್ಷೇತ್ರದ ಗೆಲುವನ್ನು ಉಡುಗೊರೆಯಾಗಿ ನೀಡೋಣ ಎಂದು ಬಿಜೆಪಿ ನಾಯಕರು ಮತಯಾಚಿಸಿದ್ದರು. ಆದರೆ, ಈಗ ಸೋಲು ಅವರನ್ನು ಕಂಗೆಡಿಸಿದೆ.

*ಕೂಡ್ಲಿ ಗುರುರಾಜ

Advertisement

Udayavani is now on Telegram. Click here to join our channel and stay updated with the latest news.

Next