ಹುಣಸೂರು: ತಾಲೂಕಿನ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದಲ್ಲಿ ನಿರ್ಮಾಣ ಮಾಡುತ್ತಿರುವ ಮನೆಗಳ ಕಾಮಗಾರಿಯನ್ನು ಶಾಸಕ ಎಚ್.ಪಿಮಂಜುನಾಥ್ ಹಾಗೂ ಮೈಸೂರು ಜಿ.ಪಂ. ಸಿಇಓ ಪೂರ್ಣಿಮಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ನಾಲ್ಕನೇ ಬ್ಲಾಕ್‌ನಲ್ಲಿ ಶನಿವಾರ ಮಧ್ಯಾಹ್ನ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲನೆ ನಡೆಸಿ ಕಾಮಗಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಇಒ ಪೂರ್ಣಿಮರವರು ನಂತರ ಗಿರಿಜನ ಆಶ್ರಮ ಶಾಲಾ ಆವರಣದಲ್ಲಿ ಪಂಚಾಯಿತಿ ಪಿಡಿಒಗಳು ಹಾಗೂ ವಸತಿಯೋಜನೆಯ ಫಲಾನುಭವಿಗಳ ಸಭೆಯಲ್ಲಿ ಮಾತನಾಡಿದ ಮನೆಗಳ ಕಾಮಗಾರಿ ಮುಗಿದ ತಕ್ಷಣವೇ ಫಲಾನುಭವಿಗಳನ್ನು ಅಲೆದಾಡಿಸದೆ ಸಕಾಲದಲ್ಲಿ ಜಿಪಿಎಸ್ ಮಾಡಿಕೊಡಬೇಕೆಂದು ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ಖಡಕ್ ಸೂಚನೆ ನೀಡಿದರು. ಈ ಯೋಚನೆಯು ವಿಶಿಷ್ಟ ರೀತಿಯಲ್ಲಿ ಕಾರ್ಯರೂಪ ಗೊಳ್ಳುತ್ತಿರುವುದರಿಂದ ಮನೆ ನಿರ್ಮಾಣ ಲೈಸನ್ಸ್ ಶುಲ್ಕವನ್ನು ನೂರು ಮಾತ್ರ ಪಡೆಯಬೇಕು, ಜೊತೆಗೆ ಶೌಚಾಲಯ ನಿರ್ಮಾಣದ ಗುಂಡಿಯ ಸಾಮಗ್ರಿಗಳ ಖರೀದಿಗೆ ಶೇ.
25 ರ ಅನುದಾನವನ್ನು ನೀಡಬೇಕೆಂದು ಸೂಚಿಸಿದರು.
ಸಾಲಕ್ಕೆ ವಜಾ ಮಾಡಬೇಡಿ: ಬ್ಯಾಂಕ್ ಅಧಿಕಾರಿಗಳು ಸಹ ವಸತಿ ಯೋಜನೆಯ ಹಣವನ್ನು ಬೇರೆ ಯಾವುದೇ ಸಾಲ ಸೌಲಭ್ಯಕ್ಕೆ ಜಮಾ ಮಾಡಿಕೊಳ್ಳದೆ ಫಲಾನುಭವಿಗಳ ಮನೆ ನಿರ್ಮಾಣ ಕಾರ್ಯಕ್ಕೆ ಸಹಕರಿಸಬೇಕೆಂದು ಸ್ಥಳದಲ್ಲಿದ್ದ ಲೀಡ್ ಬ್ಯಾಂಕ್ ವ್ಯವಸ್ಥಾಪಕ ದಿನೇಶ್ ಹಾಗೂ ಗುರುಪುರ ಎಸ್.ಬಿ.ಐ.ವ್ಯವಸ್ಥಾಪಕರಿಗೆ ಸೂಚಿಸಿದರು.
ಈ ವೇಳೆ ಮಾತನಾಡಿದ ಶಾಸಕ ಮಂಜುನಾಥ್ ಹುಣಸೂರು ತಾಲೂಕಿನಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆವತಿಯಿಂದ ೨೮ ಹಾಡಿಗಳ ೫೩೦ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲಾಗುತ್ತಿದ್ದು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ರಾಜೀವಗಾಂಧಿ ವಸತಿ ನಿಗಮದ ವತಿಯಿಂದ ಪ್ರತಿ ಮನೆಗೆ ೩.೭೫ ಲಕ್ಷರೂ ನೀಡುತ್ತಿದ್ದು, ರವಿಶಂಕರ್ ಗುರೂಜಿಯವರ ಆರ್ಟ್ ಆಫ್ ಲೀವಿಂಗ್‌ನ ವರಾಹ ಗ್ರೂಪ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಮನೆ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ನಾಗಾಪುರ ೪ನೇ ಘಟಕದಲ್ಲಿ ಪ್ರಾಯೋಗಿಕವಾಗಿ ನಾಲ್ಕು ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಈ ಮನೆಗಳು ಆದಿವಾಸಿಗಳಿಗೆ ಒಪ್ಪಿಗೆ ಆದಲ್ಲಿ ಮಾತ್ರ ಎಲ್ಲಾ ಮನೆಗಳನ್ನು ಫಲಾನುಭವಿಗಳು ಕಂಪನಿಯವರೊಂದಿಗೆ ಒಡಂಬಡಿಕೆ ಮಾಡಿಕೊಂಡು ನಿರ್ಮಾಣ ಮಾಡಲಾಗುತ್ತದೆ.
ಈ ಯೋಜನೆಯಡಿ ನಾಲ್ಕು ಹಂತದಲ್ಲಿ ಅನುದಾನ ಬಿಡುಗಡೆಯಾಗಲಿದ್ದು, ಗಿರಿಜನರು ತಾವೇ ಮುಂದೆ ನಿಂತು ಮನೆ ನಿರ್ಮಾಣಕ್ಕೆ ಮುಂದಾದಲ್ಲಿ ಅಧಿಕಾರಿಗಳು ಸಹಕಾರ ನೀಡಲಿದ್ದಾರೆಂದರು. ಯೋಜನೆಯು ಕಾರ್ಯಗತಗೊಳ್ಳಲು ಜಿಲ್ಲಾ ಪಂಚಾಯತ್, ತಾಲೂಕು ಆಡಳಿತ, ಗ್ರಾಮ ಪಂಚಾಯತ್, ಸ್ಥಳೀಯ ಬ್ಯಾಂಕುಗಳು, ಫಲಾನುಭವಿಗಳು ಒಟ್ಟಾಗಿ ಸೇರಿ ಕಾರ್ಯಪ್ರವೃತ್ತರಾದಾಗ ಮಾತ್ರ ಈ ಯೋಜನೆ ಕಾರ್ಯಗತವಾಗಲು ಸಾಧ್ಯವಾಗಲಿದೆಯಾದ್ದರಿಂದ ಎಲ್ಲರೂ ಸಕಾಲದಲ್ಲಿ ತಮ್ಮ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕೆಂದು ಸಲಹೆ ನೀಡಿದರು.
ಈ ವೇಳೆ ತಾ.ಪಂ.ಇ.ಓ. ಮನು ಬಿ.ಕೆ, ತಾಲೂಕು ಪರಿಶಿಷ್ಟ ಕಲ್ಯಾಣಾಧಿಕಾರಿ ಬಸವರಾಜು, ಲೀಡ್ ಬ್ಯಾಂಕ್ ವ್ಯವಸ್ಥಾಪಕ ದಿನೇಶ್, ಜಿ.ಪಂ ಎಇಇ ನರಸಿಂಹಯ್ಯ, ವಸತಿ ನಿಗಮದ ನೋಡಲ್ ಅಧಿಕಾರಿ ಲೋಕೇಶ್ ಗುರುಪುರ ಗ್ರಾ.ಪಂ.ಅಧ್ಯಕ್ಷೆ ರಾಧನಾಗನಾಯಕ, ಮಾಜಿ ಅಧ್ಯಕ್ಷ ಪ್ರಶಾಂತ್, ಕಿರಂಗೂರು ಗ್ರಾ.ಪಂ.ಅಧ್ಯಕ್ಷೆ ನಿರ್ವಾಣಿ, ಆದಿವಾಸಿ ಮುಖಂಡರಾದ ಜೆ.ಟಿ.ರಾಜಪ್ಪ, ಚಂದ್ರು, ಶಿವಣ್ಣ, ವಸಂತ, ಕಲ್ಕುಣಿಕೆ ರಾಘು, ಸೇರಿದಂತೆ ಅನೇಕರಿದ್ದರು.