Advertisement

ರೈತರ ಬೆಳೆ ವಿಮೆಗೆ ಜಿಪಿಎಸ್‌ ಧೋಖಾ?

03:05 PM Jul 09, 2020 | mahesh |

ಹುಬ್ಬಳ್ಳಿ: ಸಂಕಷ್ಟ ಕಾಲಕ್ಕೆ ಅನ್ನದಾತರಿಗೆ ನೆರವಾಗಲಿ ಎಂಬ ಉದ್ದೇಶದಿಂದ ಜಾರಿಗೆ ಬಂದ ಬೆಳೆ ವಿಮೆ ಯೋಜನೆ ರೈತರ ನೆಮ್ಮದಿ ಕದಡಿದೆ. ಇದು ಸಾಲದು ಎನ್ನುವಂತೆ ನಿಖರತೆ ಪ್ರತೀಕ ಎನ್ನಲಾದ ಜಿಪಿಎಸ್‌ ತಂತ್ರಜ್ಞಾನ ಸಹ ರೈತರ ಪಾಲಿಗೆ ಶತ್ರುವಾಗಿ ಕಾಡತೊಡಗಿದೆ. ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಬೆಳೆ ಹಾನಿಗೀಡಾದರೆ, ಅದನ್ನೇ ನಂಬಿಕೊಂಡು ವರ್ಷದ ಜೀವನ ಕಳೆಯುವ ರೈತರಿಗೆ ನೆರವು ನೀಡುವ ಬಹುದೊಡ್ಡ ಪ್ರಚಾರದೊಂದಿಗೆ ಅಸ್ತಿತ್ವಕ್ಕೆ ಬಂದಿರುವ ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆ, ರೈತರನ್ನು ಹಲವು ರೀತಿಯಲ್ಲಿ ಕಾಡತೊಡಗಿದೆ. ಬಹುತೇಕ ರೈತರಿಗೆ 2019-20ನೇ ಸಾಲಿನ ಬೆಳೆ ವಿಮೆಯ ನಯಾ ಪೈಸೆ ಬಂದಿಲ್ಲ.

Advertisement

2019-20ನೇ ಸಾಲಿನ ಮುಂಗಾರು, ಹಿಂಗಾರು ಬೆಳೆ ವಿಮೆಗೆ ರೈತರು ಕಂತುಗಳನ್ನು ಪಾವತಿಸಿದ್ದು, ಬೆಳೆ ನಷ್ಟದಿಂದ ಇಂದು-ನಾಳೆ ಎಂದು ಪರಿಹಾರಕ್ಕೆ ಎದುರು ನೋಡುತ್ತಿದ್ದಾರೆ. ಆದರೆ, ಪರಿಹಾರವಂತೂ ಬಂದಿಲ್ಲ. ಬದಲಾಗಿ ಸರಕಾರ, ವಿಮಾ ಕಂಪೆನಿಗಳು 2020-21ನೇ ಸಾಲಿನ ಮುಂಗಾರು ಹಂಗಾಮಿಗೆ ವಿಮೆ ಕಂತು ಪಾವತಿಸುವಂತೆ ಕೇಳತೊಡಗಿವೆ. ಹಿಂದಿನ ವರ್ಷದ ಪರಿಹಾರವೇ ಇಲ್ಲದೆ, ಕೆಲವೊಂದು ರೈತರು ವಿಮಾ ಕಂತು ಪಾವತಿಸಿದ್ದರೆ; ಇನ್ನಷ್ಟು ರೈತರು ಏನು ಮಾಡಬೇಕೆಂಬ ಗೊಂದಲಕ್ಕೆ ಸಿಲುಕಿದ್ದಾರೆ.

ಜಿಪಿಎಸ್‌ ಗೊಂದಲ: ಬೆಳೆ ವಿಮೆ ವಿಚಾರದಲ್ಲಿ ಈ ಹಿಂದೆ ರೈತರು ಫಾರಂಗಳನ್ನು ಭರ್ತಿ ಮಾಡಿ ಇಂತಹ ಬೆಳೆಯನ್ನು ಇಂತಿಷ್ಟು ಎಕರೆಯಲ್ಲಿ ಬಿತ್ತನೆ ಮಾಡಿದ್ದಾಗಿ ಮಾಹಿತಿ ನೀಡಬೇಕಾಗಿತ್ತು. ಫಾರಂ-1 ಮತ್ತು ಫಾರಂ-3ಗಳನ್ನು ರೈತರು ಸಂಬಂಧಿಸಿದವರಿಗೆ ನೀಡುತ್ತಿದ್ದರು. ಇದರಿಂದ ಸುಳ್ಳು ಮಾಹಿತಿ ಸಲ್ಲಿಕೆಯಾಗಬಹುದೆಂದು ನಿಖರ ಮಾಹಿತಿಗೆ ಜಿಪಿಎಸ್‌ ಸಮೀಕ್ಷೆ ಕೈಗೊಳ್ಳಲಾಗಿತ್ತು. ಅದೇ ಜಿಪಿಎಸ್‌ ರೈತರ ಪಾಲಿಗೆ ಶತ್ರುವಾಗಿ ಕಾಡತೊಡಗಿದೆ. ರೈತರ ಹೊಲದಲ್ಲಿ ಬಿತ್ತದ ಬೆಳೆಯನ್ನು ಬಿತ್ತನೆಯಾಗಿದೆ ಎಂದು ಜಿಪಿಎಸ್‌ ತೋರಿಸತೊಡಗಿದೆ.

ಧಾರವಾಡ ಜಿಲ್ಲೆಯಲ್ಲಿ ರೈತರೊಬ್ಬರು ಸುಮಾರು 10.5 ಎಕರೆಯಷ್ಟು ಹೊಲದಲ್ಲಿ ಮೆಣಸಿನಕಾಯಿ ಬೆಳೆ ಬಿತ್ತನೆ ಮಾಡಿದ್ದರು. ಜಿಪಿಎಸ್‌ನಲ್ಲಿ ಹತ್ತಿ ಬಿತ್ತನೆ ಎಂದು
ತೋರಿಸಿದೆ. ಅದೇ ರೀತಿ ಗದಗ ಜಿಲ್ಲೆಯಲ್ಲಿ ರೈತರೊಬ್ಬರ 5.5 ಎಕರೆಯಷ್ಟು ಹೊಲದಲ್ಲಿ ಕಡಲೆ ಬಿತ್ತನೆಯಾಗಿತ್ತು. ಜಿಪಿಎಸ್‌ ನಲ್ಲಿ ಜೋಳ ಎಂದು ತೋರಿಸಿದೆ. ಇದು ಕೇವಲ ಧಾರವಾಡ, ಗದಗ ಜಿಲ್ಲೆಯ ರೈತರದಷ್ಟೇ ಅಲ್ಲ. ರಾಜ್ಯಾದ್ಯಂತ ಅನೇಕ ರೈತರ ಗೋಳು ಇದೇ ಆಗಿದೆ. ಜಿಪಿಎಸ್‌ನಿಂದಾಗಿ ಆಗಿರುವ ಆವಾಂತರ ಅರಿತು ಹಲವು ರೈತರು ಆಕ್ಷೇಪ ಸಲ್ಲಿಸಿದ್ದು, ನಿಮ್ಮ ಆಕ್ಷೇಪ ಸಲ್ಲಿಕೆಯಾಗಿದೆ ಎಂಬ ಮಾಹಿತಿ ತೋರಿಸುವುದು ಬಿಟ್ಟರೆ ಯಾವುದೇ ಕ್ರಮ ಆಗಿಲ್ಲ.

ಮಿಸ್‌ಮ್ಯಾಚ್‌ ನೆಪ: 2019-20ನೇ ಸಾಲಿನ ಮುಂಗಾರು, ಹಿಂಗಾರು ಹಂಗಾಮಿನ ಬೆಳೆ ವಿಮೆ ಪರಿಹಾರ ಬಾರದಿರುವುದಕ್ಕೆ, ಹೊಲದಲ್ಲಿ ಇರುವ ಬೆಳೆಗೂ, ಜಿಪಿಎಸ್‌ ನಲ್ಲಿ ತೋರಿಸುವ ಬೆಳೆಗೂ ವ್ಯತ್ಯಾಸವಿದ್ದು, ಮಿಸ್‌ಮ್ಯಾಚ್‌ ಆಗುತ್ತಿದೆ. ಅದನ್ನು ಸರಿಪಡಿಸಬೇಕಾಗಿದೆ ಎಂಬುದು ಕಂಪೆನಿಗಳ ಸಬೂಬು.

Advertisement

ಜಿಪಿಎಸ್‌ನಿಂದಾದ ತಪ್ಪಿಗೆ ನಾವೇಕೆ ಪರಿತಪಿಸಬೇಕು. ಮಿಸ್‌ಮ್ಯಾಚ್‌ಗೆ ಆಕ್ಷೇಪ ಸಲ್ಲಿಸಿದ್ದನ್ನು ಸರಿಪಡಿಸುವ ಕ್ರಮ ಆಗಿಲ್ಲ. ಶೇ.99 ರೈತರದ್ದು ಮಿಸ್‌ಮ್ಯಾಚ್‌ ಆಗಿದೆ ಎಂದು ಭಾವಿಸಿದರೂ, ಉಳಿದ ಶೇ.1 ರೈತರಿಗಾದರೂ ವಿಮಾ ಪರಿಹಾರ ನೀಡಬೇಕಲ್ಲ, ಅದನ್ನೇಕೆ ನೀಡುತ್ತಿಲ್ಲ ಎಂಬುದು ರೈತರ ಪ್ರಶ್ನೆ.

ಮೆಣಸಿನಕಾಯಿಗೆ ಪ್ರತಿ ಎಕರೆಗೆ 1,400ರೂ.ನಂತೆ ಹತ್ತಿ, ಶೇಂಗಾ ಇನ್ನಿತರ ಬೆಳೆಗಳಿಗೆ ಪ್ರತಿ ಎಕರೆಗೆ 800-900ರೂ. ವರೆಗೆ ವಿಮಾ ಕಂತು ಪಾವತಿಸಿದ್ದೇವೆ. ಪರಿಹಾರದ ಹಣ ಬರುವುದಿರಲಿ, ಕಟ್ಟಿದ ಕಂತುಗಳ ಹಣವೂ ಇಲ್ಲವಾಗಿದೆ. ಇದೀಗ ಮತ್ತೆ 2020-21ನೇ ಸಾಲಿನ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಕಂತು ಪಾವತಿ ಎಂದು ಹೇಳುತ್ತಿದ್ದಾರೆ.

ಪರಿಹಾರ ಬಾರದಿರುವುದು, ಜಿಪಿಎಸ್‌ ಆವಾಂತರ ಬಗ್ಗೆ ಜನಪ್ರತಿನಿಧಿಗಳು, ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಅಧಿಕಾರಿಗಳಿಗೆ ಹೇಳಿದರೂ ಯಾರಿಂದಲೂ ಸೂಕ್ತ ಸ್ಪಂದನೆ ಇಲ್ಲವಾಗಿದೆ ಎಂಬುದು ಅನ್ನದಾತರ ನೋವು.

ಹಿಂದೆ ಬೆಳೆ ವಿಮಾ ಕಂಪೆನಿಯೊಂದು ರೈತರ ಅಧಿಕೃತ ಸಹಿ ಇಲ್ಲದೆಯೇ ಫಾರಂಗಳನ್ನು ತಾನೇ ಭರ್ತಿ ಮಾಡಿ ಸಲ್ಲಿಕೆ ಮಾಡಿಕೊಂಡಿತ್ತು. ಅದನ್ನು ಪತ್ತೆ ಮಾಡಿ ಹೋರಾಟ ಮಾಡಿದಾಗ, ತಪ್ಪಾಗಿದ್ದನ್ನು ಒಪ್ಪಿಕೊಂಡು ಸರಿಪಡಿಸುವ ಭರವಸೆ ನೀಡಿತ್ತು. ನಂತರದಲ್ಲಿ ಇಂತಹ ಗೊಂದಲ ಸೃಷ್ಟಿ ಬೇಡ ಎಂದು ಆನ್‌ಲೈನ್‌ ವ್ಯವಸ್ಥೆ ಜಾರಿಗೊಳಿಸಲಾಯಿತು. ಇದೀಗ ಜಿಪಿಎಸ್‌ನಿಂದಲೂ ರೈತರು ಬಿತ್ತನೆ ಮಾಡದ ಬೆಳೆಯನ್ನು ಬಿತ್ತನೆ ಮಾಡಲಾಗಿದೆ ಎಂದು ತೋರಿಸಲಾಗುತ್ತಿದೆ. ಬೆಳೆ
ವಿಮೆ ರೈತರ ಪಾಲಿಗೆ ಜೂಜಾಟವಾದಂತಾಗಿದೆ.
ವಿಕಾಸ ಸೊಪ್ಪಿನ, ಆಮ್‌ಆದ್ಮಿ ಪಕ್ಷದ ಮುಖಂಡ

ಇಲ್ಲದ ಬೆಳೆಯನ್ನು ಇದೆ ಎಂದು ತೋರಿಸುವ ಜಿಪಿಎಸ್‌ನೊಂದಿಗೆ ರೈತರಿಗೆ ನಾಮ ಹಾಕುವ ಹುನ್ನಾರಕ್ಕೇನಾದರೂ ವಿಮಾ ಕಂಪೆನಿ ಮುಂದಾಗಿದೆಯೇ? ಕಂಪೆನಿ, ಸರಕಾರದ ನಡುವೆ ಒಳ ಒಪ್ಪಂದ ಆಗಿದೆಯೇ ಎಂಬ ಅನುಮಾನ ಬರುತ್ತಿದೆ. ರೈತರು ವಿಮಾ ಕಂತು ಪಾವತಿಸಿ ಬೆಳೆ ನಷ್ಟ ಅನುಭವಿಸಿದರೂ ಯಾಕೆ ಪರಿಹಾರ ನೀಡುತ್ತಿಲ್ಲ. ನನ್ನ ಹೊಲದಲ್ಲಿ ಮೆಣಸಿನಕಾಯಿ ಬಿತ್ತನೆ ಮಾಡಿದ್ದರೆ, ಹತ್ತಿ ಎಂದು ತೋರಿಸಿ ಇದುವರೆಗೂ ನಯಾ ಪೈಸೆ ಪರಿಹಾರ ನೀಡಿಲ್ಲ.
ಸುಭಾಸ ಬೂದಿಹಾಳ, ಕೋಳಿವಾಡ ರೈತ

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next