Advertisement

ಸೈಕಲ್‌ ಮೇಲೊಂದು ಭಾವನಾತ್ಮಕ ಪಯಣ

11:49 AM Apr 08, 2019 | Nagendra Trasi |

ಮನೆಯಲ್ಲಿರುವ ಹಳೆ ವಸ್ತುಗಳು, ಹಿರಿಯರನ್ನ ಗೌರವದಿಂದ ಕಾಣಬೇಕು. ಏಕೆಂದರೆ, ಎರಡಕ್ಕೂ ಅದರದ್ದೇ ಆದ ಮಹತ್ವವಿರುತ್ತದೆ. ಅರ್ಥ ಮಾಡಿಕೊಂಡವರಿಗಷ್ಟೇ ಅದರ ಮೌಲ್ಯ ಗೊತ್ತಿರುತ್ತದೆ. ಕಾಲ ಬದಲಾದರೂ ಕೆಲವು ವ್ಯಕ್ತಿಗಳು, ವಸ್ತುಗಳ ಮಹತ್ವ ಬದಲಾಗುವುದಿಲ್ಲ. ಇದು ಈ ವಾರ ತೆರೆಗೆ ಬಂದಿರುವ “ಗೌಡ್ರು ಸೈಕಲ್‌’ ಚಿತ್ರದ ಸಂದೇಶ.

Advertisement

ಮಂಡ್ಯ ಸೊಗಡಿರುವ ಹಳ್ಳಿಯೊಂದರಲ್ಲಿ ಗೌರವಯುತವಾಗಿ ಜೀವನ ನಡೆಸಿಕೊಂಡು ಬರುತ್ತಿರುವ ಕೆಂಪೇಗೌಡರು ಅನೇಕರಿಗೆ ಮಾದರಿಯಾಗಿರುವ ಹಿರಿಯ ಜೀವ. ಅದೇ ಗೌಡರಿಗೆ ತಮ್ಮ ಬಳಿಯಿರುವ ಹಳೆಯ ಸೈಕಲ್‌ ಮೇಲೆ ಅದೇನೊ ಮೋಹ. ಆದರೆ ಊರಿನಲ್ಲಿರುವ ಅನೇಕರಿಗೆ ಗೌಡರ ಸೈಕಲ್‌ ಅಂದ್ರೆ ಅದೇನೋ ಅಸಡ್ಡೆ. ಕೆಲವರ ಕಣ್ಣಿಗೆ ಗೌಡ್ರ ಸೈಕಲ್‌ ಗುಜರಿ ಅಂಗಡಿ ಸೇರಬಹುದಾದ ವಸ್ತು.

ಹೀಗಿರುವಾಗಲೇ ಒಮ್ಮೆ “ಗೌಡ್ರು ಸೈಕಲ್‌’ ಕಳುವಾಗಿ ಹೋಗುತ್ತದೆ. ತನ್ನ ಜೀವ ಮತ್ತು ಜೀವನದ ಭಾಗ ಎಂದೇ ಭಾವಿಸಿರುವ ಸೈಕಲ್‌ ಕಳುವಾಗಿದ್ದರಿಂದ ಗೌಡರು ಏನು ಮಾಡುತ್ತಾರೆ? ಅಷ್ಟಕ್ಕೂ ಗೌಡರು ತಮ್ಮ ಸೈಕಲ್‌ ಮೇಲೆ ಅಷ್ಟೊಂದು ಪ್ರೀತಿಯನ್ನು ಇಟ್ಟುಕೊಂಡಿರುವುದು ಯಾಕೆ? ಕೊನೆಗೆ ಗೌಡರ ಸೈಕಲ್‌ ಅವರ ಕೈ ಸೇರುತ್ತಾ ಅಥವಾ ಗುಜರಿ ಅಂಗಡಿ ಸೇರುತ್ತಾ ಅನ್ನೋದೇ “ಗೌಡ್ರು ಸೈಕಲ್‌’ ಚಿತ್ರದ ಕಥೆ.

ಚಿತ್ರದ ಹೆಸರೇ ಹೇಳುವಂತೆ ಹಳ್ಳಿಯ ಗೌಡ್ರು ಮತ್ತು ಸೈಕಲ್‌ ಎರಡರ ಸುತ್ತ ಚಿತ್ರದ ಕಥೆ ನಡೆಯುತ್ತದೆ. ಇದರ ಜೊತೆ ಇಂದಿನ ಹುಡುಗರ ಪ್ರೀತಿ-ಪ್ರೇಮ, ಹುಡುಗಾಟ, ಗುದ್ದಾಟ ಎಲ್ಲವೂ ಚಿತ್ರದಲ್ಲಿ ಮೇಳೈಸಿದೆ. ಒಂದು ಕಮರ್ಷಿಯಲ್‌ ಚಿತ್ರದಲ್ಲಿ ಏನೇನು ಇರಬೇಕೊ ಅದೆಲ್ಲವನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಆದರೆ “ಗೌಡ್ರು ಸೈಕಲ್‌’ ಪಕ್ಕಾ ಹಳ್ಳಿಯ ಸೊಗಡಿನ ಕಥೆಯಾಗಿರುವುದರಿಂದ ಮತ್ತು ಭಾವನಾತ್ಮಕ ಅಂಶಗಳಿಗೆ ಚಿತ್ರದಲ್ಲಿ ಹೆಚ್ಚು ಒತ್ತುಕೊಟ್ಟಿರುವುದರಿಂದ ಚಿತ್ರ ಅಲ್ಲಲ್ಲಿ ಕೆಲವೊಮ್ಮೆ ನೋಡುಗರಿಗೆ ತೀರಾ ಗಂಭಿರವಾಗಿ ಕಾಣಿಸುತ್ತದೆ.

ಚಿತ್ರದ ಕಥಾವಸ್ತು ಚೆನ್ನಾಗಿದ್ದರೂ, ಕೆಲವೊಂದು ಸನ್ನಿವೇಶಗಳು ನಿರೂಪಣೆಯ ವೇಗಕ್ಕೆ ಕಡಿವಾಣ ಹಾಕುತ್ತವೆ. ಚಿತ್ರದ ಬಹುತೇಕ ಕಲಾವಿದರು ತಮ್ಮ ಪಾತ್ರವನ್ನ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಚಿತ್ರದ ಕೆಲವು ತಪ್ಪುಗಳನ್ನು ಸಂಭಾಷಣೆ ಮತ್ತಿತರ ಸಂಗತಿಗಳು ಮರೆಮಾಚಿಸುತ್ತವೆ. ಚಿತ್ರದ ಛಾಯಾಗ್ರಹಣ ಹಳ್ಳಿಯ ಸೊಗಡನ್ನು ಅಂದವಾಗಿ ಕಟ್ಟಿಕೊಟ್ಟಿದೆ. ಸಂಕಲನ ಕಾರ್ಯ ಪರವಾಗಿಲ್ಲ ಎನ್ನಬಹುದು.

Advertisement

ಉಳಿದಂತೆ ಚಿತ್ರದಲ್ಲಿ ಒಂದೆರಡು ಹಾಡುಗಳು ತಲೆದೂಗುವಂತಿದೆ. ಹಿನ್ನೆಲೆ ಸಂಗೀತಕ್ಕೆ ನಿರ್ದೇಶಕರು ಇನ್ನಷ್ಟು ಗಮನ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು. ಕೆಲವೊಂದು ಒಪ್ಪಬಹುದಾದ ತಪ್ಪುಗಳನ್ನು ಬದಿಗಿಟ್ಟು ನೋಡಿದರೆ, “ಗೌಡ್ರು ಸೈಕಲ್‌’ ಒಂದೊಳ್ಳೆ ಪ್ರಯತ್ನ ಎನ್ನಲು ಅಡ್ಡಿಯಿಲ್ಲ. ಹಳ್ಳಿಯ ಸೊಗಡನ್ನು ತೆರೆಮೇಲೆ ನೋಡಲು ಇಷ್ಟಪಡುವವರು “ಗೌಡ್ರು ಸೈಕಲ್‌’ನಲ್ಲಿ ಒಂದು ರೌಂಡ್‌ ಹಾಕಿ ಬರಬಹುದು.

ಚಿತ್ರ: ಗೌಡ್ರು ಸೈಕಲ್‌
*ನಿರ್ಮಾಣ: ಸವಿತಾ ರಾಜೇಶ್‌ ಚೌಟ
* ನಿರ್ದೇಶನ: ಪ್ರಶಾಂತ್‌ ಕೆ. ಎಳ್ಳಂಪಳ್ಳಿ
* ತಾರಾಗಣ: ಶಶಿಕಾಂತ್‌, ಬಿಂಬಶ್ರೀ, ಕೃಷ್ಣಮೂರ್ತಿ ಕವತ್ತಾರ್‌, ರಾಮಸ್ವಾಮಿ, ಎಂ.ಕೆ ಮಠ, ಆರ್ಯಹರ್ಷ ಶೆಟ್ಟಿ ಮತ್ತಿತರರು.

*ಜಿಎಸ್‌ಕೆ

Advertisement

Udayavani is now on Telegram. Click here to join our channel and stay updated with the latest news.

Next