ಕನ್ನಡ ಚಿತ್ರರಂಗದಲ್ಲಿ ಬಸ್, ರೈಲು, ಕಾರ್ ಹೀಗೆ ಹಲವು ವಾಹನಗಳ ಮೇಲೆ ಸಿನಿಮಾಗಳು ಬಂದಿದ್ದನ್ನು ನೋಡಿದ್ದೀರಿ. ಈಗ ಬಡವರ ಐರಾವತ ಎಂದೇ ಕರೆಸಿಕೊಳ್ಳುವ ಸೈಕಲ್ ಮೇಲೆ ಸಿನಿಮಾವೊಂದು ತಯಾರಾಗುತ್ತಿದೆ. ಅಂದಹಾಗೆ, ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ ಈ ಚಿತ್ರದ ಹೆಸರು “ಗೌಡ್ರು ಸೈಕಲ್’. ಸುಮಾರು ಹತ್ತು ವರ್ಷಗಳ ಹಿಂದೆ ಸೆಟ್ ಬಾಯ್ ಆಗಿ, ನಂತರ ಕನ್ನಡದ ಹಲವು ನಿರ್ದೇಶಕರ ಜೊತೆ ಸಹಾಯಕ ನಿರ್ದೇಶಕನಾಗಿ, ಸಹ ನಿರ್ದೇಶಕನಾಗಿ ಅನುಭವ ಪಡೆದುಕೊಂಡಿರುವ ಪ್ರಶಾಂತ್. ಕೆ ಎಳ್ಳಂಪಳ್ಳಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಹಳ್ಳಿಯೊಂದರ ಗೌಡರ ಬಳಿ ಹಳೆಯದಾದ ಸೈಕಲ್‌ವೊಂದು ಇರುತ್ತದೆ. ತನ್ನ ಜೀವನದ ಜೊತೆ ಜೊತೆಯಲ್ಲೇ ಆ ಸೈಕಲ್ ಅನ್ನು ಗೌಡರು ಜೋಪಾನವಾಗಿ ಕಾಪಾಡಿಕೊಂಡು ಬಂದಿರುತ್ತಾರೆ. ತನ್ನ ಎಲ್ಲಾ ಕಷ್ಟ-ಸುಖದಲ್ಲೂ ಜೊತೆಯಲ್ಲಿದ್ದ ಸೈಕಲ್ ಅನ್ನು ಕಾಲಾಂತರದಲ್ಲಿ ಅವರ ಜೊತೆಗಿದ್ದವರು ಅಸಡ್ಡೆಯಿಂದ ನೋಡಲು ಶುರು ಮಾಡುತ್ತಾರೆ. ಅಲ್ಲದೆ ‘ಗೌಡ್ರು ಸೈಕಲ್’ ಅನ್ನು ಇಂದಿನ ಜನರೇಷನ್‌ಗೆ ತಕ್ಕಂತೆ ನವೀಕರಿಸಲು ಮುಂದಾಗುತ್ತಾರೆ. ಆಗ ಏನೇನು ಘಟನಾವಳಿಗಳು ನಡೆಯುತ್ತವೆ ಎನ್ನುವುದೇ “ಗೌಡ್ರು ಸೈಕಲ್’ ಚಿತ್ರದ ಕಥಾ ಹಂದರ.
ಮನೆಯಲ್ಲಿ ಹೆತ್ತ ತಂದೆ-ತಾಯಿಗಳಿಗೆ ವಯಸ್ಸಾಗಿದೆ ಎಂದು ಬದಲಾವಣೆ ಮಾಡುವುದಕ್ಕೆ ಆಗೋದಿಲ್ಲ. ಹಾಗೆಯೇ ಕೆಲವೊಂದು ವಸ್ತುಗಳು ಎಷ್ಟೇ ಹಳೆಯದಾದರೂ ಅವಗಳ ಜೊತೆಗೆ ಭಾವನಾತ್ಮಕ ನಂಟು ಇರುತ್ತದೆ. ಹಳೆಯದಾಯಿತು ಎಂದು ಯಾವುದೇ ವ್ಯಕ್ತಿ, ವಸ್ತುಗಳನ್ನು ಕಡೆಗಣಿಸಬೇಡಿ. ಹಾಗೆ ಮಾಡಿದರೆ ಅದರಿಂದ ಏನೆಲ್ಲಾ ಅನಾಹುತಗಳು ಆಗುತ್ತವೆ ಎಂಬುದನ್ನು ಚಿತ್ರದಲ್ಲಿ ಸಂದೇಶವಾಗಿ ಹೇಳಲಾಗಿದೆ ಎನ್ನುತ್ತದೆ ಚಿತ್ರತಂಡ.
ಇನ್ನು “ಗೌಡ್ರು ಸೈಕಲ್’ ಚಿತ್ರಕ್ಕಾಗಿ ಚಿತ್ರತಂಡ ಯಾರು ನೋಡಿರದ ವಿಶೇಷವಾದ ಸೈಕಲ್‌ನ್ನು ವಿನ್ಯಾಸ ಮಾಡಿಸಿದೆ. ಚಿತ್ರದಲ್ಲಿ ನವನಟ ಶಶಿಕಾಂತ್ ನಾಯಕನಾಗಿ, ಬಿಂಬಶ್ರೀ ನೀನಾಸಂ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಕೃಷ್ಣಮೂರ್ತಿ, ರಾಮಸ್ವಾಮಿ, ಎಂ.ಕೆ ಮಠ, ಆರ್ಯಹರ್ಷ ಶೆಟ್ಟಿ ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಹಾಡುಗಳಿಗೆ ಸಾಯಿ ಸರ್ವೇಶ್ ಸಾಹಿತ್ಯ – ಸಂಗೀತ ನೀಡಿದ್ದಾರೆ. ಪೂರ್ಣಚಂದ್ರ ಬೈಕಾಡಿ ಛಾಯಾಗ್ರಹಣ ಕಾರ್ಯ ನಿರ್ವಹಿಸಿದ್ದಾರೆ. ಸವಿತಾ ರಾಜೇಶ್ ಚೌಟ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮಂಡ್ಯ, ಚಿಕ್ಕ ಅರಸಿನಕೆರೆ, ದೊಡ್ಡ ಅರಸಿನಕರೆ ಸುತ್ತಮುತ್ತ ಸುಮಾರು ಮೂವತ್ತು ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಸದ್ಯ ತೆರೆಗೆ ಬರಲು ತಯಾರಿ ನಡೆಸುತ್ತಿರುವ “ಗೌಡ್ರು ಸೈಕಲ್’ ಚಿತ್ರತಂಡ ಚಿತ್ರದ ಪ್ರಮೋಷನ್ ಕಾರ್ಯಗಳಿಗೆ ಚಾಲನೆ ನೀಡಿದೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ ಚಿನ್ನೇಗೌಡ ಚಿತ್ರದ ಪ್ರಮೋಷನಲ್ ಗೀತೆ ಮತ್ತು ಟ್ರೇಲರ್‌ನ್ನು ಬಿಡುಗಡೆ ಮಾಡಿದ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.