ನವದೆಹಲಿ: ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳ ನೇಮಕ ಸಂಬಂಧ ಇರುವ ಕೊಲಿಜಿಯಂನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ಇರಬೇಕು ಎಂಬ ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ಸಚಿವ ಕಿರಣ್ ರಿಜಿಜು ಅವರ ಪತ್ರ ಆಡಳಿತ ಹಾಗೂ ಪ್ರತಿಪಕ್ಷಗಳ ತಿಕ್ಕಾಟಕ್ಕೆ ಕಾರಣವಾಗಿದೆ.
ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕದಲ್ಲಿ ಆಯಾ ರಾಜ್ಯಗಳ ಸರ್ಕಾರಗಳ ಪ್ರತಿನಿಧಿ ಮತ್ತು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇಮಕ ವೇಳೆ ಕೇಂದ್ರದ ಪ್ರತಿನಿಧಿ ಇರಬೇಕು ಎಂಬುದು ರಿಜಿಜು ಅವರ ಪತ್ರದ ಸಾರಾಂಶ. ಇದಕ್ಕೆ ಕಾಂಗ್ರೆಸ್ ಮತ್ತು ಆಪ್ ತೀವ್ರ ವಿರೋಧ ವಕ್ತಪಡಿಸಿವೆ. “ನ್ಯಾಯಾಂಗಕ್ಕೆ ವಿಷದ ಗುಳಿಗೆ ನೀಡಲು ಕೇಂದ್ರ ಸರ್ಕಾರ ಪ್ರಯತ್ನ ಮಾಡುತ್ತಿದೆ’ ಎಂದು ಕಾಂಗ್ರೆಸ್ ದೂರಿದೆ.
ರಿಜಿಜು ಅವರು, ಸುಪ್ರೀಂಕೋರ್ಟ್ ಮುಖ್ಯ ನ್ಯಾ. ಡಿ.ವೈ. ಚಂದ್ರಚೂಡ್ ಅವರಿಗೆ ಪತ್ರ ಬರೆದು, ಈ ಹಿಂದಿನ ತೀರ್ಪಿನ ಬಗ್ಗೆ ಉಲ್ಲೇಖೀಸಿದ್ದಾರೆ. ಜತೆಗೆ ಕೊಲಿಜಿಯಂ ಪ್ರಕ್ರಿಯೆಯಲ್ಲಿ ಸುಧಾರಣೆಯಾಗಬೇಕು ಎಂಬ ಬಗ್ಗೆ ಪ್ರಸ್ತಾಪಿಸಿದ್ದಾರೆ.
ರಿಜಿಜು ಪತ್ರದಲ್ಲಿ ಏನಿದೆ?:
ಕೊಲಿಜಿಯಂನಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವತೆ ಹೊಂದುವ ನಿಟ್ಟಿನಲ್ಲಿ ಸರ್ಕಾರದ ಪ್ರತಿನಿಧಿಗಳು ಇರುವ ಕ್ರಮ ಅಗತ್ಯ ಎಂದು ಪತ್ರದಲ್ಲಿ ಸಲಹೆ ಮಾಡಿದ್ದಾರೆ. ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಕೊಲಿಜಿಯಂ ನಡುವೆ ಇರಬೇಕಾದ ನಿಯಮಗಳ ಬಗ್ಗೆ ಒಪ್ಪಂದ (ಮೆಮೊರಾಂಡಂ ಆಫ್ ಪ್ರೊಸೀಜರ್) ಇನ್ನೂ ಅಂತಿಮಗೊಂಡಿಲ್ಲ ಎಂದು ಮನವರಿಕೆ ಮಾಡಿದ್ದಾರೆ.
Related Articles
ಅದು ಇನ್ನೂ ಪರಿಶೀಲನೆಯ ಹಂತದಲ್ಲಿದೆ. ಈ ಹಿನ್ನೆಲೆಯಲ್ಲಿ ಅದನ್ನು ಪರಿಶೀಲನೆ ಮಾಡುವ ನಿಟ್ಟಿನಲ್ಲಿ ಕೊಲಿಜಿಯಂ (ನ್ಯಾಯಮೂರ್ತಿಗಳ ಉನ್ನತಾಧಿಕಾರದ ಸಮಿತಿ)ಯಲ್ಲಿ ರಾಜ್ಯ ಹಾಗೂ ಕೇಂದ್ರದ ಪ್ರತಿನಿಧಿಗಳು ಇರಬೇಕು. ಎಲ್ಲರೂ ಒಟ್ಟಾಗಿ ನೀಡುವ ಸಲಹೆಯನ್ನು ಪರಿಗಣಿಸಬೇಕು ಎಂದು ಸಚಿವರು ಸಲಹೆ ಮಾಡಿದ್ದಾರೆ. ಸಾಂವಿಧಾನಿಕ ಪೀಠ ಮೆಮೊರಾಂಡಂ ಆಫ್ ಪ್ರೊಸೀಜರ್ ಅನ್ನು ಅಂತಿಮ ಪಡಿಸುವ ನಿಟ್ಟಿನಲ್ಲಿ ಸರ್ಕಾರದ ಪ್ರತಿಕ್ರಿಯೆ ಬಯಸಿದ್ದ ಹಿನ್ನೆಲೆಯಲ್ಲಿ ಈ ಪತ್ರ ಬರೆಯಲಾಗಿದೆ ಎಂದು ಕಾನೂನು ಸಚಿವರು ಹೇಳಿದ್ದಾರೆ.
ಪ್ರತಿಪಕ್ಷಗಳ ಆಕ್ರೋಶ:
ಸಚಿವ ರಿಜಿಜು ಪತ್ರಕ್ಕೆ ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಜೈರಾಂ ರಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯಾಂಗವನ್ನು ಸಂಪೂರ್ಣ ಕೈವಶ ಮಾಡಲು ಕೇಂದ್ರ ಸರ್ಕಾರದ ಮುಂದಾಗಿದೆ. ಸಚಿವ ರಿಜಿಜು ಪತ್ರದಲ್ಲಿ ಮಾಡಿರುವ ಸಲಹೆ ನ್ಯಾಯಾಂಗ ವ್ಯವಸ್ಥೆಗೆ ವಿಷದ ಗುಳಿಗೆ ನೀಡುವಂತೆ ಇದೆ ಎಂದು ಟ್ವೀಟ್‌ನಲ್ಲಿ ಟೀಕಿಸಿದ್ದಾರೆ. ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಕಾನೂನು ಸಚಿವರು ಎಲ್ಲರೂ ಸಂಘಟಿತರಾಗಿ ನ್ಯಾಯಾಂಗದ ಮೇಲೆ ದಾಳಿ ನಡೆಸುತ್ತಿದ್ದಾರೆ. ಕೊಲಿಜಿಯಂ ವ್ಯವಸ್ಥೆ ಸುಧಾರಣೆಯಾಗಬೇಕಾಗಿದೆ ನಿಜ. ಆದರೆ, ಸರ್ಕಾರ ನ್ಯಾಯಾಂಗದ ಮೇಲೆ ಪೂರ್ಣ ನಿಯಂತ್ರಣ ಸಾಧಿಸಲು ಮುಂದಾಗಿದೆ ಎಂದು ಜೈರಾಂ ರಮೇಶ್ ಟೀಕಿಸಿದ್ದಾರೆ.
ಅಪಾಯಕಾರಿ:
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರದ ಪ್ರಸ್ತಾಪಕ್ಕೆ ಅಕ್ಷೇಪಿಸಿದ್ದು “ಇದು ಸಂಪೂರ್ಣವಾಗಿ ಅಪಾಯಕಾರಿಯಾಗಿದೆ. ನ್ಯಾಯಾಂಗ ನೇಮಕದಲ್ಲಿ ಸರ್ಕಾರದ ಹಸ್ತಕ್ಷೇಪ ಇರಲೇಬಾರದು’ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಅದಕ್ಕೆ ತಿರುಗೇಟು ನೀಡಿರುವ ಸಚಿವ ರಿಜಿಜು “ಕೋರ್ಟ್ ನಿರ್ದೇಶನವನ್ನು ನೀವು ಪಾಲಿಸುವ ವಿಶ್ವಾಸವಿದೆ. ಸುಪ್ರೀಂಕೋರ್ಟ್ ಸೂಚನೆಯಂತೆ ಈ ಪತ್ರ ಬರೆಯಲಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.