Advertisement

ಇನ್ನು 6 ತಿಂಗಳಲ್ಲಿ ಫಾಸ್ಟ್ಯಾಗ್ ಗೆ ವಿದಾಯ? ಕೇಂದ್ರ ಸಾರಿಗೆ ಸಚಿವ ಗಡ್ಕರಿ ಸುಳಿವು

10:54 AM Aug 04, 2022 | Team Udayavani |

ನವದೆಹಲಿ: ಮುಂದಿನ 6 ತಿಂಗಳಲ್ಲಿ ಫಾಸ್ಟಾಗ್‌ ವ್ಯವಸ್ಥೆ ಕೊನೆಯಾಗಲಿದೆಯೇ? ರಾಜ್ಯಸಭೆಯಲ್ಲಿ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ಆಡಿರುವ ಮಾತು ಇಂಥದ್ದೊಂದು ಸುಳಿವು ನೀಡಿದೆ.

Advertisement

ನಾವು ಫಾಸ್ಟ್ಯಾಗ್ ಬದಲು ಜಿಪಿಎಸ್‌ ವ್ಯವಸ್ಥೆ ಪರಿಚಯಿಸುವ ಕುರಿತು ಚಿಂತನೆ ನಡೆಸಿದ್ದೇವೆ. ನಮ್ಮ ಮುಂದೆ 2 ಆಯ್ಕೆಗಳಿವೆ.

ಒಂದನೆಯದು, ಉಪಗ್ರಹ ಆಧಾರಿತ ಟೋಲ್‌ ವ್ಯವಸ್ಥೆ. ಇಲ್ಲಿ ಕಾರಿನಲ್ಲೇ ಜಿಪಿಎಸ್‌ ಅಳವಡಿಸಲಾಗುತ್ತದೆ. ಕಾರು ಟೋಲ್‌ ಪ್ಲಾಜಾ ದಾಟಿದ ತಕ್ಷಣ ಬ್ಯಾಂಕ್‌ ಖಾತೆಯಿಂದ ಟೋಲ್‌ ಮೊತ್ತ ಕಡಿತಗೊಳ್ಳುತ್ತದೆ.

ಇನ್ನೊಂದು, ನಂಬರ್‌ ಪ್ಲೇಟ್‌ ತಂತ್ರಜ್ಞಾನ. ಇಲ್ಲಿ ಟೋಲ್‌ ಪ್ಲಾಜಾಗಳ ಅಗತ್ಯವಿರುವುದಿಲ್ಲ. ನಂಬರ್‌ಪ್ಲೇಟ್‌ನ ಫೋಟೋ ಸೆರೆಯಾದೊಡನೆ, ಅತ್ಯಾಧುನಿಕ ಕಂಪ್ಯೂಟರೀಕೃತ ಡಿಜಿಟಲ್‌ ವ್ಯವಸ್ಥೆಯ ಮೂಲಕ ಹಣ ಕಡಿತಗೊಳ್ಳುತ್ತದೆ.

ಹೀಗಾದಾಗ ಟೋಲ್‌ನಲ್ಲಿ ಕ್ಯೂ ನಿಂತು ಕಾಯುವ ಅಗತ್ಯವಿರುವುದಿಲ್ಲ ಎಂದು ಗಡ್ಕರಿ ಹೇಳಿದ್ದಾರೆ.

Advertisement

ಆದರೆ, ಇದೆಲ್ಲವೂ ಸಂಸತ್‌ನಲ್ಲಿ ಮಸೂದೆ ಮಂಡಿಸಿ ಅಂಗೀಕಾರ ಪಡೆದ ಬಳಿಕವಷ್ಟೇ ಜಾರಿಗೆ ಬರಲಿದೆ ಎಂದೂ ತಿಳಿಸಿದ್ದಾರೆ.

ನಾನೇ ಟೋಲ್‌ ಪಿತಾಮಹ:
ಸಿಟಿ ವ್ಯಾಪ್ತಿಯೊಳಗೆ ಟೋಲ್‌ ಪ್ಲಾಜಾ ನಿರ್ಮಿಸಿರುವ ಕಾರಣ ಸ್ಥಳೀಯರು ಕೂಡ ಟೋಲ್‌ ಪಾವತಿಸಬೇಕಾದ ಸ್ಥಿತಿಯಿದೆ ಎಂಬ ಪ್ರತಿಪಕ್ಷ ನಾಯಕರ ಕಳವಳಕ್ಕೆ ಉತ್ತರಿಸಿದ ಗಡ್ಕರಿ, ಆದಷ್ಟು ಬೇಗೆ ಈ ಸಮಸ್ಯೆ ಪರಿಹರಿಸುವುದಾಗಿ ಹೇಳಿದ್ದಾರೆ.

ಜತೆಗೆ, ನಾನು ದೇಶದ “ಎಕ್ಸ್‌ಪ್ರೆಸ್‌ವೇ ಟೋಲ್‌ ಟ್ಯಾಕ್ಸ್‌ನ ಪಿತಾಮಹ’. 90ರ ದಶಕದಲ್ಲಿ ಸಚಿವನಾಗಿದ್ದಾಗ ಮಹಾರಾಷ್ಟ್ರದಲ್ಲಿ ಅಂಥ ಮೊದಲ ಹೆದ್ದಾರಿ ನಿರ್ಮಿಸಿದ್ದೇ ನಾನು ಎಂದೂ ತಿಳಿಸಿದ್ದಾರೆ.

ಇದೇ ವೇಳೆ, 3 ವರ್ಷಗಳಲ್ಲಿ ದೇಶದಲ್ಲಿ 26 ಪರಿಸರ ಸ್ನೇಹಿ ಎಕ್ಸ್‌ಪ್ರೆಸ್‌ವೇ ನಿರ್ಮಾಣವಾಗಲಿದೆ. ಇವು ನಿರ್ಮಾಣವಾದರೆ ಪ್ರಯಾಣದ ಅವಧಿ ಗಣನೀಯವಾಗಿ ಇಳಿಕೆಯಾಗಲಿದೆ. ಚೆನ್ನೈನಿಂದ ಬೆಂಗಳೂರಿಗೆ 2 ಗಂಟೆಗಳಲ್ಲಿ, ದೆಹಲಿಯಿಂದ ಮುಂಬೈಗೆ 12 ಗಂಟೆಗಳಲ್ಲಿ ತಲುಪಬಹುದು ಎಂದೂ ಗಡ್ಕರಿ ಹೇಳಿದ್ದಾರೆ.

ವಿಧೇಯಕ ವಾಪಸ್‌:
ಈ ನಡುವೆ, ದತ್ತಾಂಶ ಸುರಕ್ಷತಾ ವಿಧೇಯಕವನ್ನು ಸರ್ಕಾರ ಬುಧವಾರ ಲೋಕಸಭೆಯಿಂದ ವಾಪಸ್‌ ಪಡೆದಿದೆ. ವಿಧೇಯಕಕ್ಕೆ 81 ಬದಲಾವಣೆಗಳನ್ನು ತರುವಂತೆ ಸಂಸದೀಯ ಸಮಿತಿ ಸೂಚಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು, ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ ಖಂಡಿಸಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ನೇತೃತ್ವದಲ್ಲಿ ಪ್ರತಿಪಕ್ಷಗಳು ಲೋಕಸಭೆಯಲ್ಲಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರಿಂದ, ಕಲಾಪ ದಿನದ ಮಟ್ಟಿಗೆ ಮುಂದೂಡಲ್ಪಟ್ಟಿತು.

Advertisement

Udayavani is now on Telegram. Click here to join our channel and stay updated with the latest news.

Next