ಹೊಸದಿಲ್ಲಿ: ಸಂಸತ್ತಿನಲ್ಲಿ ವಿಪಕ್ಷಗಳ ಸಂಸದರ ಅಮಾನತಿಗೆ ಕಾಂಗ್ರೆಸ್ ಸೋಮವಾರ ಖಾರವಾಗಿ ಪ್ರತಿಕ್ರಿಯಿಸಿದ್ದು ಸರಕಾರವು ಸರ್ವಾಧಿಕಾರದ ತೀವ್ರ ಮಟ್ಟವನ್ನು ತಲುಪಿದೆ, ಯಾವುದೇ ಚರ್ಚೆಯಿಲ್ಲದೆ ಪ್ರಮುಖ ಶಾಸನಗಳನ್ನು “ಬುಲ್ಡೋಜ್” ಮಾಡಲು ಬಯಸುತ್ತಿರುವುದರಿಂದ ಭಿನ್ನಾಭಿಪ್ರಾಯವನ್ನು ಹತ್ತಿಕ್ಕುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: Suspended; ರಾಜ್ಯಸಭೆಯಿಂದ 45, ಲೋಕಸಭೆಯ 33 ವಿಪಕ್ಷ ಸಂಸದರು ಅಮಾನತು
ಲೋಕಸಭೆ ಮತ್ತು ರಾಜ್ಯಸಭೆಯಿಂದ ಪ್ರತಿಪಕ್ಷಗಳ ಸಂಸದರನ್ನು ಅಮಾನತುಗೊಳಿಸಿದ ಬೆನ್ನಲ್ಲೇ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಕ್ಸ್ ಪೋಸ್ಟ್ ಮೂಲಕ ಪ್ರತಿಕ್ರಿಯಿಸಿ, ಈ ನಿರಂಕುಶ ಸರಕಾರವು ಎಲ್ಲಾ ಪ್ರಜಾಪ್ರಭುತ್ವದ ಮಾನದಂಡಗಳನ್ನು ಕಸದ ಬುಟ್ಟಿಗೆ ಎಸೆಯುತ್ತಿದೆ ಮತ್ತು ಸಂಸತ್ತಿಗೆ ಶೂನ್ಯ ಹೊಣೆಗಾರಿಕೆಯನ್ನು ತೋರಿಸಿದೆ ಎಂದು ಬರೆದಿದ್ದಾರೆ.
ಹದಿಮೂರು ಸದಸ್ಯರನ್ನು ಈಗಾಗಲೇ ಅಮಾನತುಗೊಳಿಸಲಾಗಿತ್ತು, ನಮ್ಮ ಎರಡು ಸರಳ ಮತ್ತು ನಿಜವಾದ ಬೇಡಿಕೆಗಳಿದ್ದವು. ಸಂಸತ್ತಿನ ಭದ್ರತೆಯಲ್ಲಿ ಅಕ್ಷಮ್ಯ ಉಲ್ಲಂಘನೆಯ ಬಗ್ಗೆ ಕೇಂದ್ರ ಗೃಹ ಸಚಿವರು ಸಂಸತ್ತಿನ ಉಭಯ ಸದನಗಳಲ್ಲಿ ಹೇಳಿಕೆ ನೀಡಬೇಕು ಮತ್ತು ಅದರ ಬಗ್ಗೆ ವಿವರವಾದ ಚರ್ಚೆ ನಡೆಸಬೇಕು” ಎಂದು ಖರ್ಗೆ ಹೇಳಿದ್ದಾರೆ.
ಪ್ರಧಾನಿಯವರು ಪತ್ರಿಕೆಗಳಿಗೆ ಸಂದರ್ಶನ ನೀಡಬಹುದು ಮತ್ತು ಗೃಹ ಸಚಿವರು ಟಿವಿ ಚಾನೆಲ್‌ಗಳಿಗೆ ಸಂದರ್ಶನ ನೀಡಬಹುದು ”ಆದರೆ ಅವರು ಭಾರತದ ಜನರನ್ನು ಪ್ರತಿನಿಧಿಸುವ ಸಂಸತ್ತಿಗೆ ಶೂನ್ಯ ಹೊಣೆಗಾರಿಕೆಯನ್ನು ಹೊಂದಿದ್ದಾರೆ.
“ಪ್ರತಿಪಕ್ಷಗಳ ಕಡಿಮೆ ಉಪಸ್ಥಿತಿಯಲ್ಲಿ ಮೋದಿ ಸರಕಾರವು ಪ್ರಮುಖ ಬಾಕಿ ಇರುವ ಶಾಸನಗಳನ್ನು ಬುಲ್ಡೋಜ್ ಮಾಡಬಹುದು, ಯಾವುದೇ ಭಿನ್ನಾಭಿಪ್ರಾಯವನ್ನು ಯಾವುದೇ ಚರ್ಚೆಯಿಲ್ಲದೆ ಹತ್ತಿಕ್ಕಬಹುದು” ಎಂದು ರಾಜ್ಯಸಭೆಯ ವಿಪಕ್ಷದ ನಾಯಕರೂ ಆಗಿರುವ ಖರ್ಗೆ ಪ್ರತಿಕ್ರಿಯಿಸಿದ್ದಾರೆ.