Advertisement

ಉಚಿತ ಗರ್ಭನಿರೋಧಕ ಇಂಜೆಕ್ಷನ್‌

02:30 AM Jul 12, 2017 | Karthik A |

ಮುಂಬಯಿ: ಮಹಿಳೆಯರು ಗರ್ಭನಿರೋಧಕ ಇಂಜೆಕ್ಷನ್‌ ರೂಪದಲ್ಲಿ ಬಳಸುವ ಎಂಪಿಎ (ಮೆಡ್ರಾಸ್ಕಿ ಪ್ರೊಜೆಸ್ಟರನ್‌ ಅಸಿಟೇಟ್‌) ಇಂಜೆಕ್ಷನ್‌ ಇನ್ನು ಸರಕಾರಿ ಆಸ್ಪತ್ರೆಗಳಲ್ಲೂ ದೊರೆಯಲಿದೆ. ಮಹಾರಾಷ್ಟ್ರ ಸರಕಾರವು ರಾಜ್ಯದ ಎಲ್ಲ ವೈದ್ಯಕೀಯ ಕಾಲೇಜು, ಜಿಲ್ಲಾ ಆಸ್ಪತ್ರೆ ಮತ್ತು ಮಹಿಳಾ ಆಸ್ಪತ್ರೆಗಳಲ್ಲಿ ಈ ಇಂಜೆಕ್ಷನ್‌ ಅನ್ನು ಉಚಿತವಾಗಿ ನೀಡಲಿದೆ. ಈ ಮೂಲಕ ಮಹಾರಾಷ್ಟ್ರ ಮಹಿಳೆಯರಿಗೆ ಉಚಿತವಾಗಿ ಎಂಪಿಎ ಇಂಜೆಕ್ಷನ್‌ ಒದಗಿಸುವ ದೇಶದ ಮೊದಲ ರಾಜ್ಯವಾಗಿ ಮಾರ್ಪಟ್ಟಿದೆ.

Advertisement

ವಿಶ್ವ ಜನಸಂಖ್ಯಾ ದಿನಾಚರಣೆಯ ಒಂದು ದಿನ ಮೊದಲು ಅಂದರೆ ಸೋಮವಾರ ರಾಜ್ಯದಲ್ಲಿ ಅಂತರಾ ಯೋಜನೆ ಅಡಿಯಲ್ಲಿ ಎಂಪಿಎ ಇಂಜೆಕ್ಷನ್‌ ಯೋಜನೆಗೆ ಚಾಲನೆ ನೀಡಲಾಯಿತು. ಈ ಸಂದರ್ಭ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ| ದೀಪಕ್‌ ಸಾವಂತ್‌ ಅವರೂ ಉಪಸ್ಥಿತರಿದ್ದರು. ಸದ್ಯಕ್ಕೆ ಮುಂಬಯಿ, ಪುಣೆ, ರಾಯಗಡ್‌, ರತ್ನಗಿರಿ, ಔರಂಗಾಬಾದ್‌, ಅಹ್ಮದ್‌ನಗರ, ಬೀಡ್‌, ನಂದೂರ್‌ಬಾರ್‌, ಕೊಲ್ಲಾಪುರ ಜಿಲ್ಲೆ ಯಲ್ಲಿ ಎಂಪಿಎ ಇಂಜೆಕ್ಷನ್‌ ಉಪಲಬ್ಧವಿದ್ದು, ಉಳಿದಿರುವ  ಜಿಲ್ಲೆಗಳಿಗೆ 8 ದಿನಗಳಲ್ಲಿ ಇಂಜೆಕ್ಷನ್‌ ಪೂರೈಸಲಾಗುವುದು ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಪ್ರಸ್ತುತ ರಾಜ್ಯಾದ್ಯಂತ 33,000 ಎಂಪಿಎ ಇಂಜೆಕ್ಷನ್‌ಗಳ ದಾಸ್ತಾನು ಇದೆ. ಮಹಿಳೆಯರು ಒಮ್ಮೆ ಎಂಪಿಎ ಇಂಜೆಕ್ಷನ್‌ ಬಳಸಿದರೆ, ಅದು ಮುಂದಿನ 3 ತಿಂಗಳವರೆಗೆ ಪರಿಣಾಮಕಾರಿಯಾಗಿರುತ್ತದೆ. ಇದು ಮಹಿಳೆಯರಿಗೆ ಗರ್ಭ ನಿರೋಧಕ ಔಷಧಗಳಿಂದ ಮುಕ್ತಿ ನೀಡಲಿದೆ. ಬಾಣಂತಿ ಮಹಿಳೆಯರಿಗೂ ಇದು ಮಹತ್ವವಾದುದೆಂದು ಪರಿಗಣಿಸಲಾಗುತ್ತದೆ. ವಿಶ್ವಾದ್ಯಂತ 130 ದೇಶಗಳಲ್ಲಿ ಇದರ ಬಳಕೆಯಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next