Advertisement

ಜು. 15ಕ್ಕೆ “ಸ್ಕಿಲ್‌ ಕನೆಕ್ಟ್’ಜಾಲತಾಣ ಲೋಕಾರ್ಪಣೆ: ಸಚಿವ ಡಾ|ಅಶ್ವತ್ಥ ನಾರಾಯಣ

02:26 AM Jun 30, 2022 | Team Udayavani |

ಕುಂದಾಪುರ: ಉದ್ಯೋಗಾಕಾಂಕ್ಷಿಗಳು ಹಾಗೂ ಉದ್ಯೋಗದಾತರನ್ನು ಒಂದೇ ವೇದಿಕೆಯಡಿ ತರಲು ಹೆಚ್ಚು ಪರಿಣಾಮಕಾರಿಯಾಗಿ ರೂಪಿಸಿದ ಕೌಶಲಾಭಿವೃದ್ಧಿ ಇಲಾಖೆಯ ಪರಿಷ್ಕೃತ “ಸ್ಕಿಲ್‌ ಕನೆಕ್ಟ್ ಪೋರ್ಟಲ್‌’ ಅನ್ನು ವಿಶ್ವ ಯುವಜನ ಕೌಶಲಾಭಿವೃದ್ಧಿ ದಿನವಾದ ಜು. 15ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಕೌಶಲಾಭಿವೃದ್ಧಿ, ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್‌. ಅಶ್ವತ್ಥ ನಾರಾಯಣ ಹೇಳಿದರು.

Advertisement

ಅವರು ಬುಧವಾರ ಭಂಡಾರ್‌ಕಾರ್ಸ್‌ ಕಾಲೇಜಿನಲ್ಲಿ ಕೌಶಲಾಭಿವೃದ್ಧಿ ಇಲಾಖೆ ಏರ್ಪಡಿಸಿದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಅತ್ಯಂತ ಹೆಚ್ಚಿನ ಸಂಖ್ಯೆಯ ಪ್ರತಿಭಾವಂತರು ರಾಜ್ಯದಲ್ಲಿದ್ದಾರೆ. ಅವರ ಇಚ್ಛೆಯ ಶಿಕ್ಷಣ ಪಡೆದರೂ ಕನಸಿನ ಉದ್ಯೋಗ ಪಡೆಯಲು ಬೇಕಾದ ಮಾಹಿತಿಯ ಕೊರತೆಯಿದೆ. ಉದ್ಯೋಗಾ ಕಾಂಕ್ಷಿಗಳು, ಉದ್ಯೋಗದಾತರು, ಕೌಶಲಾಭಿವೃದ್ಧಿ ಮಾಹಿತಿಗಳು ಒಂದೇ ಕಡೆ ದೊರೆಯುವ ಸ್ಕಿಲ್‌ ಕನೆಕ್ಟ್ ಪೋರ್ಟಲ್‌ನಿಂದ ವರ್ಚುವಲ್‌ ಮೂಲಕ ಯುವ ಜನತೆಯು ತಮ್ಮಿಷ್ಟದ ಉದ್ಯೋಗ ಪಡೆಯಲು ಬೇಕಿರುವ ಅರ್ಹತೆ, ಕೌಶಲ, ಲಭ್ಯವಿರುವ ಉದ್ಯೋಗಗಳು ಮತ್ತು ಅಂತಹ ಉದ್ಯೋಗ ನೀಡುವ ಸಂಸ್ಥೆಗಳ ಸಂಪೂರ್ಣ ವಿವರಗಳನ್ನು ಸರಳ ರೀತಿಯಲ್ಲಿ ಪಡೆಯಬಹುದಾಗಿದೆ ಎಂದರು.

ಉದ್ಯೋಗ ಕೊರತೆ ಇಲ್ಲ;
ಸೇರುವವರ ಕೊರತೆ !
ರಾಜ್ಯದಲ್ಲಿ ಉದ್ಯೋಗಗಳಿಗೆ ಕೊರತೆ ಇಲ್ಲ, ಉದ್ಯೋಗಕ್ಕೆ ಸೇರುವವರ ಕೊರತೆ ಇದೆ. ಬೇರೆ ರಾಜ್ಯಗಳಿಂದ ಹೆಚ್ಚಿನ ಜನತೆ ಉದ್ಯೋಗ ಅರಸಿ ರಾಜ್ಯಕ್ಕೆ ಬರುತ್ತಿದ್ದಾರೆ. ಹೊರದೇಶಗಳಿಗೆ ಉದ್ಯೋಗಕ್ಕೆ ತೆರಳುವವರಿಗೆ ಉಡುಪಿ ಐಎಂಸಿ ಕೇಂದ್ರದಲ್ಲಿ ಮಾಹಿತಿ, ನೆರವು ನೀಡಲಾಗುತ್ತಿದೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯಡಿ ತಾಂತ್ರಿಕತೆಯ ಜ್ಞಾನಶಾಖೆಗಳಾದ ಡ್ಯಾಟಾ ಅನಾಲಿಟಿಕ್ಸ್‌, ಕೃತಕ ಬುದ್ಧಿಮತ್ತೆ, ಸೈಬರ್‌ ಸೆಕ್ಯುರಿಟಿ ಕಲಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಇದಕ್ಕಾಗಿ ನ್ಯಾಸ್ಕಾಂ ಜತೆ ಒಪ್ಪಂದ ಮಾಡಿಕೊಂಡಿರುವ ಮೊದಲ ರಾಜ್ಯ ಕರ್ನಾಟಕ. ಇನ್ಫೋಸಿಸ್‌ ಸ್ಪ್ರಿಂಗ್‌ ಬೋರ್ಡ್‌ ಜತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಅದರಲ್ಲಿ 5 ಸಾವಿರ ಆ್ಯಡ್‌ ಆನ್‌ ಕೋರ್ಸ್‌ಗಳಿವೆ. ಸರಕಾರಿ ಕಾಲೇಜುಗಳಿಗೆ ಐಟಿ ಸಂಸ್ಥೆಗಳಿಂದ 27 ಸಾವಿರ ಕಂಪ್ಯೂಟರ್‌ಗಳನ್ನು ಕೊಡಿಸಲಾಗಿದೆ ಎಂದರು.

Advertisement

2,000ಕ್ಕೂ ಹೆಚ್ಚು
ಉದ್ಯೋಗಾವಕಾಶ
ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಇಂದಿನ ಉದ್ಯೋಗ ಮೇಳದಲ್ಲಿ 2,000ಕ್ಕೂ ಅಧಿಕ ಮಂದಿಗೆ ಉದ್ಯೋಗ ನೀಡಲು ಸಾಧ್ಯವಿದ್ದು 2,800ಕ್ಕೂ ಹೆಚ್ಚು ಆನ್‌ಲೈನ್‌ ನೋಂದಣಿಯಾಗಿವೆ. 59ಕ್ಕೂ ಅಧಿ ಕ ಕಂಪೆನಿಗಳು ಭಾಗವಹಿಸಿದ್ದು, ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಕಂಪೆನಿಗಳು ಶೀಘ್ರದಲ್ಲಿ ನೇಮಕ ಆದೇಶ ನೀಡಬೇಕು ಎಂದರು.

ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್‌ ಮೆಂಡನ್‌ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ನಾಗರಿಕ ಆಹಾರ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್‌ ಕೊಡ್ಗಿ, ಪುರಸಭೆ ಉಪಾಧ್ಯಕ್ಷ ಸಂದೀಪ್‌ ಖಾರ್ವಿ, ಭಂಡಾರ್‌ಕಾರ್ಸ್‌ ಕಾಲೇಜಿನ ಆಡಳಿತ ಮಂಡಳಿ ವಿಶ್ವಸ್ತ ಶಾಂತಾರಾಮ ಪ್ರಭು, ಭಂಡಾರ್‌ಕಾರ್ಸ್‌ ಪಿಯು ಕಾಲೇಜಿನ ಪ್ರಾಂಶುಪಾಲ ಡಾ| ಜಿ.ಎಂ. ಗೊಂಡ ಉಪಸ್ಥಿತರಿದ್ದರು.

ಜಿಲ್ಲಾ ಕೌಶಲಾಭಿವೃದ್ಧಿ ಅಧಿ ಕಾರಿ ಜಗದೀಶ್‌ ಸ್ವಾಗತಿಸಿ, ಭಂಡಾರ್‌ಕಾರ್ಸ್‌ ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಎನ್‌.ಪಿ. ನಾರಾಯಣ ಶೆಟ್ಟಿ ವಂದಿಸಿದರು. ಅಕ್ಷಯ್‌ ಹೆಗ್ಡೆ ಮೊಳಹಳ್ಳಿ ನಿರೂಪಿಸಿದರು.

“ಸವಾಲುಗಳನ್ನು ಎದುರಿಸುವ ಶಕ್ತಿ ದೇಶಕ್ಕಿದೆ’
ಕುಂದಾಪುರ: ಭಾರತೀಯರು “ವಸುಧೈವ ಕುಟುಂಬಕಂ’ ಕಲ್ಪನೆಯೊಂದಿಗೆ ಶಾಂತಿಯುತವಾಗಿ ಬಾಳುತ್ತಿದ್ದು ನೂರಾರು ಸವಾಲುಗಳನ್ನು ಎದುರಿಸಿರುವ ದೇಶಕ್ಕೆ ಅಪಾರ ಶಕ್ತಿ ಇದೆ. ಉದಯಪುರದ ಘಟನೆ ಖಂಡನೀಯ.
ಹತ್ಯೆಕೋರರು ಪ್ರಧಾನಿಯವರಿಗೆ ಬೆದರಿಕೆಯೊಡ್ಡಿದ್ದಾರೆ. ಅದಕ್ಕೆ ಹೆದರುವವರು ನಾವಲ್ಲ. ಅವರಿಂದ ಪ್ರಧಾನಿಯವರ ಕಣ್ಣು ಹಾಗೂ ಕೂದಲು ಕೂಡ ಮುಟ್ಟಲು ಸಾಧ್ಯವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ| ಸಿ. ಅಶ್ವತ್ಥನಾರಾಯಣ್‌ ಹೇಳಿದರು.

ಕುಂದಾಪುರದಲ್ಲಿ ಬುಧವಾರ ಉದ್ಯೋಗಮೇಳದಲ್ಲಿ ಪಾಲ್ಗೊಂಡಿದ್ದ ಅವರು ಪತ್ರಕರ್ತರ ಜತೆ ಮಾತನಾಡಿ, ಅಮಾಯಕನ ಶಿರಚ್ಛೇದದ ಮೂಲಕ ತಮ್ಮ ಕೀಳು ಮನಸ್ಥಿತಿ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸಿದ್ದಾರೆ ಎಂದರು.

ನಾವು ನಮ್ಮ ಧರ್ಮದ ಪರವಾಗಿ ಒಳ್ಳೆಯ ಸಂದೇಶ ನೀಡಬೇಕು. ಪ್ರಜಾ ಪ್ರಭುತ್ವದಲ್ಲಿ ಎಲ್ಲ ಸಂಸ್ಕೃತಿ, ಧರ್ಮವನ್ನು ಕಾಪಾಡಿಕೊಂಡು, ಅನುಷ್ಠಾನಿಸಿಕೊಂಡು ಹೋಗಲು ಅವಕಾಶವಿದೆ. ಆದರೆ ಕಾನೂನನ್ನು ಕೈಗೆ ತೆಗೆದುಕೊಳ್ಳಲು ಅವಕಾಶವಿಲ್ಲ. ಇದನ್ನು ಯಾವ ಧರ್ಮವೂ ಹೇಳಿಲ್ಲ. ಅಧರ್ಮಿಗಳು, ಮೂಢರು ಕೃತ್ಯ ಎಸಗಿದ್ದಾರೆ. ಇಂತಹ ಕ್ರೌರ್ಯ ಮರುಕಳಿಸದಂತೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದರು.

ಸರಕಾರಿ ಮೆಡಿಕಲ್‌ ಕಾಲೇಜು
ಉಡುಪಿ ಜಿಲ್ಲೆಗೆ ಸರಕಾರಿ ಮೆಡಿಕಲ್‌ ಕಾಲೇಜು ಸ್ಥಾಪನೆಯ ಬಗ್ಗೆ ಹಂತ ಹಂತವಾಗಿ ಯೋಜನೆ ನಡೆಯುತ್ತಿದೆ. ಮುಖ್ಯಮಂತ್ರಿಗಳ ನಾಯಕತ್ವದಲ್ಲಿ ಉಡುಪಿ ಜಿಲ್ಲೆಯ ಬಗ್ಗೆ ವಿಶೇಷ ಯೋಜನೆ ರೂಪಿಸುತ್ತೇವೆ ಎಂದರು.

ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಬರಲು ಸರಕಾರಿ ಬಸ್‌ಗಳ ಕೊರತೆ ಕುರಿತು ಗಮನಕ್ಕೆ ತಂದಾಗ, ಸಂಬಂಧಪಟ್ಟವರ ಜತೆ ಮಾತನಾಡುವುದಾಗಿ ಹೇಳಿದರು. ಗೋಳಿಯಂಗಡಿಯಲ್ಲಿ ನೂತನ ಪದವಿ ಕಾಲೇಜು ಸ್ಥಾಪನೆಗೆ ಬೇಡಿಕೆ ಕುರಿತು ಗಮನ ಸೆಳೆದಾಗ, ಸದ್ಯ ಯಾವುದೇ ಹೊಸ ಕಾಲೇಜುಗಳ ರಚನೆ ಪ್ರಸ್ತಾವ ಸರಕಾರದ ಮುಂದೆ ಇಲ್ಲ. ಈಗ ಇರುವ ಕಾಲೇಜುಗಳ ಸ್ಥಿತಿಗತಿ ಸುಧಾರಣೆಗೆ ಒತ್ತು ನೀಡಲಾಗುವುದು ಎಂದರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next