ನವದೆಹಲಿ: ಈಗ ದೇಶದಲ್ಲಿ ಟೋಲ್ ಗೇಟ್‌ಗಳ ಮೂಲಕ ಶುಲ್ಕ ಸಂಗ್ರಹಿಸುವ ಕ್ರಮವಿದೆ. ಕೇವಲ ಇನ್ನು ಆರು ತಿಂಗಳಲ್ಲಿ ಈಗಿರುವ ಕ್ರಮವನ್ನು ಬದಲಿಸಿ, ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿ ಮಾಡಲಾಗುತ್ತದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಟೋಲ್ ಗೇಟ್‌ಗಳ ಕಾರಣಕ್ಕೆ ಉಂಟಾಗುವ ಟ್ರಾಫಿಕ್ ದಟ್ಟಣೆ ತಪ್ಪಿಸುವುದು, ಸಂಚಾರಿಗಳು ಹೆದ್ದಾರಿಯಲ್ಲಿ ಎಷ್ಟು ದೂರ ಸಂಚರಿಸಿದ್ದಾರೆ ಎನ್ನುವುದನ್ನು ಪತ್ತೆಹಚ್ಚಿ ನಿಖರವಾಗಿ ಶುಲ್ಕ ಸಂಗ್ರಹಿಸುವುದು ಇದರ ಹಿಂದಿನ ಉದ್ದೇಶ.
ಪ್ರಸ್ತುತ ಟೋಲ್‌ಗಳ ಮೂಲಕ 40,000 ಕೋಟಿ ರೂ. ಆದಾಯ ಬರುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ ಈ ಪ್ರಮಾಣ 1.40 ಲಕ್ಷ ಕೋಟಿ ರೂ.ಗಳಿಗೇರಲಿದೆ ಎಂದು ಗಡ್ಕರಿ ಹೇಳಿದ್ದಾರೆ.
ಈಗಿರುವ ಟೋಲ್ ಗೇಟ್‌ಗಳನ್ನು ತೆಗೆದು, ಆ ಜಾಗದಲ್ಲಿ ಸ್ವಯಂಚಾಲಿತವಾಗಿ ವಾಹನಗಳ ನೋಂದಣಿ ಸಂಖ್ಯೆಯನ್ನು ಗುರ್ತಿಸುವ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಇದರಿಂದ ಸಹಜವಾಗಿಯೇ ಎಷ್ಟು ದೂರ ಸಂಚಾರ ನಡೆಯುತ್ತದೆ ಎಂದು ಗೊತ್ತಾಗುತ್ತದೆ ಎಂದು ಗಡ್ಕರಿ ಹೇಳಿದ್ದಾರೆ.