ಶಿವಮೊಗ್ಗ: ಕೋವಿ ಡ್ಗೆ ಸಂಬಂಧಿಸಿದ ಎಲ್ಲಾ ಔಷಧಿಗಳ ಮೇಲಿನ ಜಿಎಸ್‌ಟಿ ರದ್ದುಗೊಳಿಸುವಂತೆ ಯುವ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಆಗ್ರಹಿಸಿದ್ದಾರೆ.
ಇಲ್ಲಿನ ಹರ್ಷ ದಿ ಫರ್ನ್ ಹೋಟೆಲ್ ಹಿಂಭಾಗದಲ್ಲಿರುವ ಅಲೆಮಾರಿ ಸಮುದಾಯದ ನಿವಾಸಿಗಳಿಗೆ ಆಹಾರ ಕಿಟ್ ವಿತರಣೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ಕೊರೋನಾ ವೈರಸ್ ವಿಶ್ವವನ್ನೇ ಕಾಡುತ್ತಿದೆ. ಜನರ ಬಳಿ ಹಣವಿಲ್ಲ. ಇಂತಹ ಸಂದರ್ಭದಲ್ಲೇ ಸರ್ಕಾರ ಔಷಧಿಗಳ ಮೇಲೂ ಜಿಎಸ್‌ಟಿ ತೆರಿಗೆ ವಸೂಲು ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ವಿಶ್ವದಲ್ಲೇ ಕೊರೋನಾಗೆ ವ್ಯಾಕ್ಸಿನ್ ಉತ್ಪಾದಿಸುತ್ತಿರುವುದು ಭಾರತದಲ್ಲಿ. ಆದರೆ, ಇಲ್ಲಿನ ಜನರಿಗೆ ವ್ಯಾಕ್ಸಿನ್ ಸಿಗುತ್ತಿಲ್ಲ. ಇಲ್ಲಿ ಉತ್ಪಾದನೆಯಾದ ವ್ಯಾಕ್ಸಿನ್ ಅನ್ನು ಬೇರೆ ದೇಶಗಳಿಗೆ ಮಾರಾಟ ಮಾಡಲಾಗುತ್ತಿದೆ. ಸರ್ಕಾರ ಜನರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿದರು.
ಈಗಾಗಲೇ ಕೊರೋನಾ 2ನೇ ಅಲೆ ದೇಶವನ್ನು ತತ್ತರಿಸುವಂತೆ ಮಾಡಿದೆ. 3ನೇ ಅಲೆ ಪ್ರಾರಂಭವಾಗಲಿದೆ. ಇಷ್ಟಾದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಕೂಡಲೇ ತಜ್ಞರೊಂದಿಗೆ ಸಮಾಲೋಚನೆ ನಡೆಸಬೇಕು. ಮೂರನೇ ಅಲೆ ನಿಯಂತ್ರಿಸಲು ಸಜ್ಜಾಗಬೇಕಿದೆ ಎಂದ ಅವರು, ಜನರ ಸಂಕಷ್ಟಕ್ಕೆ ಸ್ಪಂದಿಸುವುದು ಕಾಂಗ್ರೆಸ್ ಪರಂಪರೆ. ಹಾಗಾಗಿ ದೇಶಾದ್ಯಂತ ಹಸಿವಿನಿಂದ ಬಳಲುತ್ತಿರುವ ಜನರಿಗೆ ಆಹಾರ ಕಿಟ್ ವಿತರಣೆ, ರೋಗಿಗಳಿಗೆ ಆಂಬುಲೆನ್ಸ್ ಸೇವೆ ಒದಗಿಸುವು ಕೆಲಸ ಮಾಡಲಾಗುತ್ತಿದೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ತಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂತೆ ಕೆಲಸ ಮಾಡಲು ಪ್ರೇರೇಪಿಸಿದ ನಮ್ಮ ಹಿಂದಿರುವ ಶಕ್ತಿ ರಾಹುಲ್ ಗಾಂಧಿಯವರು. ಅವರು ಕಳೆದ ವರ್ಷ ಮಾರ್ಚ್ 1ರಂದು ಸಭೆ ನಡೆಸಿ, ಜನರ ಸಂಕಷ್ಟಕ್ಕೆ ನೆರವಾಗುವಂತೆ ಆದೇಶಿದ್ದರು. ಅದರಂತೆ ಕೆಲಸ ಮಾಡುತ್ತಿದ್ದೇವೆಂದರು.
ರಾಷ್ಟ್ರೀಯ ಕಾಂಗ್ರೆಸ್‌ನ ಕಾರ್ಯದರ್ಶಿ ಡಿ.ಎಂ. ಸಂದೀಪ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿಯ ಸಂಸದ ತೇಜಸ್ವಿ ಸೂರ್ಯ ಅವರು ಕೊರೋನಾ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದರೂ ಅಸಮರ್ಪಕ ನಿರ್ವಹಣೆ ಮಾಡುತ್ತಿದ್ದಾರೆ. ಶ್ರೀನಿವಾಸ್ ಅವರನ್ನು ನೋಡಿ ಕಲಿತುಕೊಳ್ಳಲಿ ಎಂದರು.
ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯರಾದ ಹೆಚ್.ಸಿ. ಯೋಗೀಶ್, ಯಮುನಾ ರಂಗೇಗೌಡ, ಯುವ ಮುಖಂಡರಾದ ಸಿ.ಜಿ. ಮಧುಸೂದನ್, ಕೆ. ಚೇತನ್, ಗಣೇಶ್, ಮೊಹಮ್ಮದ್ ನಿಹಾಲ್, ಆದರ್ಶ ಹುಂಚನಕಟ್ಟೆ, ಪ್ರದೀಪ್, ವಿನಾಯಕ್, ವಿನಯ್, ವಿಜಯ್ ಸೇರಿದಂತೆ ಹಲವರಿದ್ದರು.