ಬೆಂಗಳೂರು: ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ 6 ಲಕ್ಷ ಹೆಕ್ಟೇರ್ ಭೂಮಿ ಹಸ್ತಾಂತರವಾಗಲಿದ್ದು, ಈ ಪೈಕಿ ಸುಮಾರು 5 ಲಕ್ಷ ಹೆಕ್ಟೇರ್ ಅನ್ನು 15 ವರ್ಷಗಳಿಂದ ಸಾಗುವಳಿ ಮಾಡುತ್ತಿರುವವರಿಗೆ ಹಂಚಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಮೊದಲು ಡೀಮ್ಡ್ ಫಾರೆಸ್ಟ್ ಎಂದು ಗುರುತಿಸಿ ಅರಣ್ಯ ಇಲಾಖೆ ವಶದಲ್ಲಿದ್ದ 6 ಲಕ್ಷ ಹೆಕ್ಟೇರ್ ಭೂಮಿ ಈಗ ಕಂದಾಯ ಇಲಾಖೆಗೆ ಹಸ್ತಾಂತರ ವಾಗಲಿದೆ ಎಂದು ಹೇಳಿದರು.
ಇಲಾಖೆಯು ತನ್ನ ಅಗತ್ಯಕ್ಕೆ ಬೇಕಾದ ಭೂಮಿ ಯನ್ನು ಹೊರತುಪಡಿಸಿ ಉಳಿದ ಭೂಮಿಯನ್ನು ರೈತರಿಗೆ ಹಂಚಲಿದೆ. ಈ ಮೂಲಕ ಮೈಸೂರು, ಚಾಮರಾಜನಗರ, ಶಿವಮೊಗ್ಗ ಸಹಿತ ರಾಜ್ಯಾದ್ಯಂತ ಇರುವ ಬಗರ್ ಹುಕುಂ ಸಮಸ್ಯೆಗೆ ಶಾಶ್ವತ ತೆರೆ ಬೀಳಲಿದೆ ಎಂದು ತಿಳಿಸಿದರು.
ಕಂದಾಯ ಇಲಾಖೆಗೆ ಮರಳಿ ಬರುವ ಪೈಕಿ ಎಷ್ಟು ಪ್ರಮಾಣದ ಭೂಮಿ ಸರಕಾರದ ಅಗತ್ಯಕ್ಕೆ ಬೇಕು ಎಂದು ಗುರುತಿಸ ಲಾಗುತ್ತಿದ್ದು, ಆಸ್ಪತ್ರೆ ಸಹಿತ ಸಾರ್ವಜನಿಕ ಸೇವೆಯ ಕಟ್ಟಡಗಳಿಗೆ ಇದು ಬಳಕೆಯಾಗಲಿದೆ ಎಂದರು.
Related Articles
30 ವರ್ಷಗಳ ಗುತ್ತಿಗೆ
ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ 90 ಸಾವಿರ ಎಕರೆಗೂ ಹೆಚ್ಚು ಭೂಮಿ ಒತ್ತುವರಿ ಯಾಗಿದೆ. ಹೀಗೆ ಒತ್ತುವರಿಯಾದ ಜಮೀನನ್ನು ಒತ್ತುವರಿದಾರರಿಗೇ 30 ವರ್ಷಗಳ ಗುತ್ತಿಗೆ ಆಧಾರದ ಮೇಲೆ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ 12 ಸಾವಿರ ಎಕರೆ, ಹಾಸನದಲ್ಲಿ 30 ಸಾವಿರ ಎಕರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ 45 ಸಾವಿರ ಎಕರೆ ಭೂಮಿ ಒತ್ತುವರಿ ಯಾಗಿದೆ. ಒತ್ತುವರಿಯಾದ ಭೂಮಿಯಲ್ಲಿ ಕಾಫಿ, ಏಲಕ್ಕಿ ಸಹಿತ ಹಲವು ಬೆಳೆಗಳನ್ನು ಬೆಳೆಯ ಲಾಗುತ್ತಿದೆ. ಈ ಪೈಕಿ ಐದು ಎಕರೆಗಿಂತ ಕಡಿಮೆ ಪ್ರಮಾಣದ ಒತ್ತುವರಿ ಮಾಡಿಕೊಂಡವರ ಸಂಖ್ಯೆ ಶೇ. 90ರಷ್ಟಿದೆ ಎಂದು ಸಚಿವರು ವಿವರಿಸಿದರು.
ಗುತ್ತಿಗೆಗೆ ದರ ನಿಗದಿ
ಒಂದರಿಂದ ಎರಡು ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡವರಿಗೆ ಎಕರೆಗೆ ವಾರ್ಷಿಕ ಒಂದೂವರೆ ಸಾವಿರ ರೂ.ನಿಂದ ಎರಡು ಸಾವಿರ ರೂ. ಗುತ್ತಿಗೆ ಮೊತ್ತ ನಿಗದಿ ಪಡಿಸಲಾಗುವುದು. 3ರಿಂದ 5 ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡವ ರಿಗೆ 2ರಿಂದ ಎರಡೂವರೆ ಸಾವಿರ ರೂ., 5ರಿಂದ 10 ಎಕರೆ ಮೇಲ್ಪಟ್ಟ ಭೂಮಿಯನ್ನು ಒತ್ತುವರಿ ಮಾಡಿಕೊಂಡವರಿಗೆ ಎರಡೂವರೆ ಯಿಂದ 3 ಸಾವಿರ ರೂ. ಗುತ್ತಿಗೆ ದರ ನಿಗದಿ ಪಡಿಸಲಾಗುವುದು ಎಂದರು.
ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒತ್ತುವರಿ ಭೂಮಿ ವಿಚಾರದಲ್ಲಿ ಇದೇ ನಿಯಮವನ್ನು ಅನ್ವಯಿಸಲಾಗುವುದು. ಕೆಲವು ಕಡೆ ಒತ್ತುವರಿದಾರರಿಗೆ ಖರೀದಿಗೆ ಅವಕಾಶ ನೀಡಬೇಕು ಎಂಬ ಬೇಡಿಕೆಯೂ ಇದೆ ಎಂದು ಹೇಳಿದರು.