ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಸಂಬಂಧ ಮಂಗಳವಾರ (ಜ. 24ಕ್ಕೆ) ನಿಗದಿಯಾಗಿದ್ದ ಹೆಚ್ಚುವರಿ ಶಿಕ್ಷಕರ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಕೊನೆಯ ಕ್ಷಣದಲ್ಲಿ ಶಿಕ್ಷಣ ಇಲಾಖೆಯು ತಾತ್ಕಾಲಿಕವಾಗಿ ರದ್ದುಗೊಳಿಸಿದೆ.
ಮಂಗಳವಾರ ಕೌನ್ಸೆಲಿಂಗ್ ಮೂಲಕ ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರು ಹೊಂದಾಣಿಕೆ ಪ್ರಕ್ರಿಯೆ ನಡೆಯುತ್ತಿತ್ತು. ಆದರೆ ಹೆಚ್ಚುವರಿ ಶಿಕ್ಷಕರಿಗೆ ಸ್ಥಳ ನಿಯುಕ್ತಿಗೊಳಿಸುವ ಪ್ರಕ್ರಿಯೆಯಲ್ಲಿ ತಾಂತ್ರಿಕ ದೋಷದಿಂದಾಗಿ ಪಟ್ಟಿಯಲ್ಲಿ ನ್ಯೂನತೆಗಳಿದ್ದರೂ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಕೂಡಲೇ ತಡೆಹಿಡಿಯಬೇಕು. ಮಂಗಳವಾರ ಜರುಗಿರುವ ಎಲ್ಲ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಶಾಲಾ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮಂಗಳವಾರ ಯಾವುದಾದರೂ ಶಿಕ್ಷಕರಿಗೆ ಕೌನ್ಸೆಲಿಂಗ್ನಲ್ಲಿ ಸ್ಥಳ ನಿಯುಕ್ತಿ ಆದೇಶ ನೀಡಿದ್ದಲ್ಲಿ ಈ ಆದೇಶಗಳನ್ನು ಸಂಬಂಧಿಸಿದ ಉಪ ನಿರ್ದೇಶಕರು (ಡಿಡಿಪಿಐ) ರದ್ದುಗೊಳಿಸಿ ಹಿಂಪಡೆಯಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ನಿರ್ದೇಶಕರು ಸೂಚಿಸಿದ್ದಾರೆ. ಆದ್ದರಿಂದ ತಾತ್ಕಾಲಿಕವಾಗಿ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ರದ್ದುಗೊಂಡಂತಾಗಿದೆ.
ಹೆಚ್ಚುವರಿ ಶಿಕ್ಷಕರ ವರ್ಗಾವಣೆಯು ಇದೇ ವರ್ಷ ಸತತ 2ನೇ ಬಾರಿ ರದ್ದುಗೊಂಡಿದೆ. ಜ.11ರಂದು ನಡೆಯಬೇಕಿದ್ದ ಕೌನ್ಸೆಲಿಂಗ್ ಅನ್ನು ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿ ಮುಂದುವರಿಸಲಾಗಿತ್ತು. ಇದೀಗ 2ನೇ ಬಾರಿ ಮುಂದೂಡಿದೆ.