Advertisement

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

07:39 PM Mar 28, 2024 | Team Udayavani |

ಪುಂಜಾಲಕಟ್ಟೆ: ಸರಕಾರಿ ಉದ್ಯೋಗ ದೊರಕಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ವಾಮಪದವು ನಿವಾಸಿ ಪದ್ಮನಾಭ ಸಾಮಂತ್‌ ವಿರುದ್ಧ ಕುಕ್ಕಿಪಾಡಿ ನಿವಾಸಿ ಕಾರ್ತಿಕ್‌ ಪುಂಜಾಲಕಟ್ಟೆ ಠಾಣೆಗೆ ದೂರು ನೀಡಿದ್ದಾರೆ.

Advertisement

ಕಾರ್ತಿಕ್‌ ಬಡ ಕುಟುಂಬದ ಯುವಕನಾಗಿದ್ದು, ಮಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದರು. ಅನೇಕ ವರ್ಷಗಳಿಂದ ಪರಿಚಿತನಾಗಿರುವ ಪದ್ಮನಾಭ ಬೆಂಗಳೂರಿನ ಕಾವೇರಿ ಭವನದಲ್ಲಿರುವ ನೀರಾವರಿ ನಿಗಮದಲ್ಲಿ ಗುಮಾಸ್ತ ಹುದ್ದೆ ತೆಗಿಸಿಕೊಡುವ ಭರವಸೆ ನೀಡಿ 2 ಲಕ್ಷ ರೂ. ನೀಡುವಂತೆ ತಿಳಿಸಿದ್ದ. ನಂಬಿಕೆ ಮೂಡಿಸಲು ನೀರಾವರಿ ನಿಗಮದ ಹೆಸರಿನಲ್ಲಿ ಛಾಪಾ ಕಾಗದವನ್ನು ತೆಗೆದ ಈತ ಉದ್ಯೋಗ ಸಿಕ್ಕಿದ ಮೇಲೆ ತಂದೆ ತಾಯಿಗೆ ಇಎಸ್‌ಐ ಸೌಲಭ್ಯಕ್ಕಾಗಿ ಅವರಿಬ್ಬರ ಬ್ಯಾಂಕ್‌ ಪಾಸ್‌ ಪುಸ್ತಕ ಜೆರಾಕ್ಸ್‌ ಪ್ರತಿಯನ್ನು ಹಾಗೂ ಕಾರ್ತಿಕ್‌ನ ಬ್ಯಾಂಕ್‌ ಜೆರಾಕ್ಸ್‌ ಪಾಸ್‌ ಪುಸ್ತಕವನ್ನು ಪಡೆದುಕೊಂಡಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನಿಗಮದ ಎಂಡಿಗೆ ಹಣ ನೀಡುವ ನೆಪದಲ್ಲಿ ಹಂತ ಹಂತವಾಗಿ 1,51,750 ರೂ. ಪಡೆದುಕೊಂಡಿದ್ದ. ಆದರೆ ಕೆಲಸ ಸಿಗುವ ಲಕ್ಷಣ ಕಂಡುಬರದ ಹಿನ್ನೆಲೆಯಲ್ಲಿ ವಿಚಾರಿಸಿದಾಗ ಇನ್ನೂ 1 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದ. ಸಂಶಯಗೊಂಡ ಕಾರ್ತಿಕ್‌ ಬೆಂಗಳೂರಿನ ಕಾವೇರಿ ನಿಗಮದಲ್ಲಿರುವ ನೀರಾವರಿ ಇಲಾಖೆಯನ್ನು ವಿಚಾರಿಸಿದಾಗ ಅಲ್ಲಿ ಯಾವುದೇ ಉದ್ಯೋಗದ ಅವಕಾಶ ಇಲ್ಲದಿರುವುದು ಮತ್ತು ತನ್ನ ಅರ್ಜಿಗಳು ಹೋಗದಿರುವುದು ಖಾತ್ರಿಯಾಗಿದೆ. ತಾನು ವಂಚನೆಗೊಳಗಾದ ವಿಚಾರ ಅರಿವಾದಾಗ ಪುಂಜಾಲಕಟ್ಟೆ ಪೊಲೀಸ್‌ ಠಾಣೆ ದೂರು ನೀಡಿದ್ದಾರೆ. ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next