ನವದೆಹಲಿ: ದೇಶಾದ್ಯಂತ ನೋಟರಿ ಹುದ್ದೆಗೆ ಆಕಾಂಕ್ಷಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕರ್ನಾಟಕ ಸೇರಿದಂತೆ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನೋಟರಿಗಳ ಒಟ್ಟು ಸಂಖ್ಯೆಯನ್ನು ಏರಿಸಿದೆ.
ಕೇಂದ್ರ ಸಚಿವ ಎಸ್.ಪಿ.ಸಿಂಗ್ ಬಘೇಲ್ ಶನಿವಾರ ಈ ಮಾಹಿತಿ ನೀಡಿದ್ದಾರೆ. ಅದರಂತೆ, ಇನ್ನು ಮುಂದೆ ಆಂಧ್ರಪ್ರದೇಶದಲ್ಲಿ 1,700, ಗುಜರಾತ್‌ನಲ್ಲಿ 8 ಸಾವಿರ ಸೆಂಟ್ರಲ್ ನೋಟರಿಗಳು ಇರಲಿದ್ದಾರೆ.
ಅದೇ ರೀತಿ, ಕೇರಳ, ಮಧ್ಯಪ್ರದೇಶ, ತಮಿಳುನಾಡು, ಮೇಘಾಲಯ, ಕರ್ನಾಟಕ, ಪಂಜಾಬ್, ರಾಜಸ್ಥಾನ, ಪಶ್ಚಿಮ ಬಂಗಾಳ, ಹರ್ಯಾಣ, ಹಿಮಾಚಲ ಪ್ರದೇಶ, ಗೋವಾ, ಛತ್ತೀಸ್‌ಗಡ, ತೆಲಂಗಾಣ ಮತ್ತು ಪುದುಚೇರಿಗಳಲ್ಲೂ ನೋಟರಿಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ.
ಲಡಾಖ್‌ನಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ 50 ಹೊಸ ಹುದ್ದೆಗಳನ್ನು ಸೃಷ್ಟಿಸಲಾಗಿದೆ ಎಂದೂ ಬಘೇಲ್ ತಿಳಿಸಿದ್ದಾರೆ.