ಹೊಸದಿಲ್ಲಿ: ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ)ಯನ್ನು ಮತ್ತಷ್ಟು ಪರಿಣಾಮಕಾರಿ ಹಾಗೂ ಪಾರದರ್ಶಕವಾಗಿಸುವ ಉದ್ದೇಶದಿಂದ ಸಮಿತಿ ರಚಿಸುವ ಪ್ರಕ್ರಿಯೆಯನ್ನು ಸರಕಾರ ಆರಂಭಿಸಿದೆ.
ಹೀಗೆಂದು ಲೋಕಸಭೆಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ಸಮಿತಿಯಲ್ಲಿ ಕೇಂದ್ರ ಸರಕಾರ, ರಾಜ್ಯ ಸರಕಾರದ ಪ್ರತಿನಿಧಿಗಳು, ರೈತರು, ಕೃಷಿ ವಿಜ್ಞಾನಿಗಳು ಮತ್ತು ಕೃಷಿ ಅರ್ಥಶಾಸ್ತ್ರಜ್ಞರು ಇರಲಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
ಸಿಎ ತಿದ್ದುಪಡಿ ಮಸೂದೆಗೆ ವಿರೋಧ: ಲೋಕಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಚಾರ್ಟರ್ಡ್ ಅಕೌಂಟೆಂಟ್ಸ್, ಕಾಸ್ಟ್ ಆ್ಯಂಡ್ ವರ್ಕ್ ಅಕೌಂಟೆಂಟ್ಸ್ ಮತ್ತು ಕಂಪನಿ ಸೆಕ್ರೆಟರೀಸ್ ತಿದ್ದುಪಡಿ ಮಸೂದೆ ಮಂಡಿಸಿದ್ದು, ಈ ಮಸೂದೆ ಕುರಿತು ಭಾರೀ ಚರ್ಚೆ ನಡೆದಿದೆ. ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಎನ್‌ಸಿಪಿ ಸೇರಿದಂತೆ ವಿಪಕ್ಷಗಳ ಹಲವು ನಾಯಕರು ಈ ಮಸೂದೆಯನ್ನು ಖಂಡಿಸಿದ್ದು, ವೃತ್ತಿಪರ ಮತ್ತು ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಗಳ ಸ್ವಾಯತ್ತೆಯನ್ನು ಕಿತ್ತುಕೊಳ್ಳುವ ಅಜೆಂಡಾ ಇದರ ಹಿಂದಿದೆ ಎಂದು ಆರೋಪಿಸಿವೆ. ಮಸೂದೆಯನ್ನು ಸಂಸದೀಯ ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಪ್ಪಿಸಬೇಕು ಎಂದೂ ಕೋರಿವೆ.
ಕಾಶ್ಮೀರಿ ಪಂಡಿತರಿಗೆ ಅನುದಾನ ನೀಡಿ: ಕಾಶ್ಮೀರಿ ಪಂಡಿತರ ಪುನರ್ವಸತಿಗೆ 20 ಸಾವಿರ ಕೋಟಿ ರೂ. ಅನುದಾನ ನೀಡುವಂತೆ ಆಮ್ ಆದ್ಮಿ ಪಾರ್ಟಿ ಸಂಸದ ಸಂಜಯ್ ಸಿಂಗ್ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ. ಜತೆಗೆ, ಎಲ್ಲ ಸಂಸದರೂ ತಮ್ಮ ಒಂದು ವರ್ಷದ ಅವಧಿಯ ಕ್ಷೇತ್ರಾಭಿವೃದ್ಧಿ ನಿಧಿಯನ್ನು ಪಂಡಿತರ ಪುನರ್ವಸತಿಗೆ ವಿನಿಯೋಗಿಸಬೇಕು ಎಂದೂ ಕೋರಿದ್ದಾರೆ.
ಇದನ್ನೂ ಓದಿ:ಸ್ಯಾಮ್ ಸಂಗ್‍ನಿಂದ ಎ ಸರಣಿಯ 5 ಫೋನ್‍ಗಳು ಒಟ್ಟಿಗೇ ಬಿಡುಗಡೆ!
ಶೇ.65ರಷ್ಟು ಹೆಚ್ಚು ಎಫ್ ಡಿಐ
ಪ್ರಧಾನಿ ಮೋದಿ ನೇತೃತ್ವದ ಸರಕಾರದ ಅವಧಿಯಲ್ಲಿ ದೇಶಕ್ಕೆ 500.5 ಶತಕೋಟಿ ಡಾಲರ್ ವಿದೇಶಿ ನೇರ ಬಂಡವಾಳ (ಎಫ್ ಡಿಐ) ಹರಿದುಬಂದಿದೆ. ಯುಪಿಎ ಸರಕಾರದ 10 ವರ್ಷಕ್ಕೆ ಹೋಲಿಸಿದರೆ ಇದು ಶೇ.65ರಷ್ಟು ಹೆಚ್ಚು. ಬಿಜೆಪಿ ಆಡಳಿತದ ಆರ್ಥಿಕ ನಿರ್ವಹಣೆಯ ಮೇಲೆ ಹೂಡಿಕೆದಾರರು ವಿಶ್ವಾಸವಿಟ್ಟಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ರಾಜ್ಯಸಭೆಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಹಣಕಾಸು ಮಸೂದೆ 2022 ಮತ್ತು ಧನವಿನಿಯೋಗ ಮಸೂದೆ 2022ರ ಕುರಿತ ಚರ್ಚೆಯ ಬಳಿಕ ಪ್ರತಿಕ್ರಿಯಿಸಿದ ಅವರು, ಕೊರೊನಾ ಮಾದರಿಯಲ್ಲೇ ಉಕ್ರೇನ್ ಯುದ್ಧ ದಿಂದಲೂ ಭಾರತ ಸೇರಿ ಹಲವು ರಾಷ್ಟ್ರಗಳು ಸಂಕಷ್ಟಕ್ಕೆ ಸಿಲುಕಿವೆ. ನಮ್ಮ ದೇಶದಲ್ಲೂ ಪೂರೈಕೆ ಸರಪಳಿಗೆ ಸಮಸ್ಯೆಯಾಗಿದೆ. ತೈಲ ಬೆಲೆ ಏರಿಕೆಯು ಸವಾಲಾಗಿ ಪರಿಣಮಿಸಿದೆ ಎಂದಿದ್ದಾರೆ.