Advertisement

ಅಕ್ರಮಗಳ ಬಗ್ಗೆ ಉತ್ತರ ನೀಡದೆ ಸರ್ಕಾರ ಪಲಾಯನ: ಸಿದ್ದರಾಮಯ್ಯ

08:53 PM Sep 23, 2022 | Team Udayavani |

ಬೆಂಗಳೂರು: ಪ್ರತಿಪಕ್ಷಗಳು ಪ್ರಸ್ತಾಪಿಸಿದ ಹಗರಣ-ಅಕ್ರಮಗಳ ಬಗ್ಗೆ ಉತ್ತರ ನೀಡದೆ ರಾಜ್ಯ ಸರ್ಕಾರ ಪಲಾಯನ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿ, ಪ್ರವಾಹ ಸಂಕಷ್ಟದ ಬಗ್ಗೆ ಸರ್ಕಾರ ಸಮಂಜಸ ಉತ್ತರ ನೀಡಿಲ್ಲ. ಪಿಎಸ್‌ಐ ಹಗರಣ ಕುರಿತು ಎಡಿಜಿಪಿ ಮಂಪರು ಪರೀಕ್ಷೆ, ನ್ಯಾಯಾಂಗ ತನಿಖೆಗೆ ಒಪ್ಪಲಿಲ್ಲ. ಬಸವರಾಜ ದಡೆಸಗೂರು ಆಡಿಯೋ ಲೀಕ್‌ ಆಗಿ ನನ್ನದೇ ಧ್ವನಿ ಎಂದು ಒಪ್ಪಿಕೊಂಡರೂ ಸರ್ಕಾರ ಮೌನ ವಹಿಸಿತು ಎಂದು ದೂರಿದರು.

ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಈ ಹಗರಣದಲ್ಲಿ ಒಬ್ಬ ಮಾಜಿ ಮುಖ್ಯಮಂತ್ರಿಗಳ ಮಗನ ಕೈವಾಡವಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ತನಿಖೆಯಾಗಿಲ್ಲ. ಇದರಲ್ಲಿ ಕೈವಾಡವಿರುವುದು ಯಡಿಯೂರಪ್ಪ ಅವರ ಮಗನಾ, ದೇವೇಗೌಡರ ಮಗನಾ, ಸಿದ್ದರಾಮಯ್ಯನ ಮಗನಾ ಎಂಬುದು ವಿಚಾರಣೆ ಆಗಲಿ ಎಂದು ಸವಾಲು ಹಾಕಿದರು.

ದಡೆಸಗೂರು ಲಂಚದ ಹಣ ಸರ್ಕಾರಕ್ಕೆ ನೀಡಿದ್ದೇನೆಂದು ಆಡಿಯೋದಲ್ಲಿ ಹೇಳಿದ್ದಾರೆ. ಈಗ ಯಾವ ಸರ್ಕಾರ ಇದೆ. ಬಿಜೆಪಿ ಸರ್ಕಾರ ಅಲ್ವಾ? ಈ ಹಣವನ್ನು ಮುಖ್ಯಮಂತ್ರಿಗಳಿಗೆ ಅಥವಾ ಗೃಹ ಸಚಿವರಿಗೆ ಕೊಟ್ಟಿರಬೇಕು ಎಂದು ದೂರಿದರು.

Advertisement

ನಾನು ಅಧಿವೇಶನವನ್ನು ಒಂದು ದಿನ ವಿಸ್ತರಣೆ ಮಾಡಿ, ಸೋಮವಾರ ಅಥವಾ ನಾಳೆ ಈ ವಿಚಾರ ಚರ್ಚೆ ಮಾಡೋಣ ಎಂದು ಹೇಳಿದೆ. ಆದರೆ ಸರ್ಕಾರ ಈ ಯಾವುದಕ್ಕೂ ಸಿದ್ಧವಿಲ್ಲ. ಬಿಜೆಪಿಯವರು ಸಿದ್ದರಾಮಯ್ಯ ಸ್ಕ್ಯಾಮ್‌ ರಾಮಯ್ಯ ಎಂಬ ಪುಸ್ತಕ ಹೊರತಂದಿದ್ದಾರೆ. ಈ ಪುಸ್ತಕದಲ್ಲಿರುವ ಯಾವುದಾದರೂ ಒಂದು ಆರೋಪವನ್ನು ಅವರು ಹಿಂದಿನ 3 ವರ್ಷಗಳ ಕಾಲ ಸದನದ ಒಳಗೆ ಅಥವಾ ಸದನದ ಹೊರಗೆ ಪ್ರಸ್ತಾಪ ಮಾಡಿದ್ದಾರಾ ಎಂದು ಪ್ರಶ್ನಿಸಿದರು.

ಇದೇ ಕಾರಣಕ್ಕೆ ನಾನು ಬಸವರಾಜ ಬೊಮ್ಮಾಯಿ ಅವರಿಗೆ 2006ರಿಂದ ಈ ವರೆಗಿನ ಸರ್ಕಾರದ ಎಲ್ಲವನ್ನೂ ನ್ಯಾಯಾಂಗ ತನಿಖೆ ಮಾಡಿಸಿ ಎಂದೆ. ಧಮ್‌ ಇದ್ರೆ ನ್ಯಾಯಾಂಗ ತನಿಖೆ ಮಾಡಿಸಲಿ ನೋಡೋಣ ಎಂದರು.

ಸರ್ಕಾರದ ಹಗರಣ, ಭ್ರಷ್ಟಾಚಾರವನ್ನು ಇಲ್ಲಿಗೇ ಬಿಡಲ್ಲ. ಮತ್ತೆ ಸದನ ಕರೆದರೆ ಶುರು ಮಾಡುತ್ತೇವೆ. ಈಗಾಗಲೇ 40 ಪರ್ಸೆಂಟ್‌ ಕಮಿಷನ್‌ ಕುರಿತು ಅಭಿಯಾನ ಆರಂಭ ಮಾಡಿದ್ದೇವೆ. ಜನರ ಬಳಿಗೆ ಹೋಗಿ ಸತ್ಯ ಹೇಳುತ್ತೇವೆ. ಇಂಥಾ ಭ್ರಷ್ಟ ಸರ್ಕಾರ ಇಡೀ ದೇಶದಲ್ಲಿ ಇಲ್ಲ, ನನ್ನ ರಾಜಕೀಯ ಜೀವನದಲ್ಲೂ ನೋಡಿಲ್ಲ.
– ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next