Advertisement

ಸಾಗರ: 15 ನಿಮಿಷದಲ್ಲಿ ಡೆತ್ ಸರ್ಟಿಫಿಕೇಟ್!

01:32 PM Jan 11, 2022 | Team Udayavani |

ಸಾಗರ: ಸಾಗರ ನಗರಸಭೆ ಪ್ರತಿ ಮಂಗಳವಾರ ಹಮ್ಮಿಕೊಂಡಿರುವ ಏಕಗವಾಕ್ಷ ಯೋಜನೆಯ ಆಂದೋಲನದಲ್ಲಿ ಅರ್ಜಿ ಸಲ್ಲಿಸಿದ 15 ನಿಮಿಷಗಳೊಳಗೆ ತನ್ನ ತಾಯಿಯ ಮರಣ ಪತ್ರವನ್ನು ಇಲ್ಲಿನ ನಾಗರಿಕ ಗುರುಮೂರ್ತಿ ಪಡೆದ ಘಟನೆ ಮಂಗಳವಾರ ನಡೆದಿದೆ. ನಗರಸಭಾ ಸದಸ್ಯರಾದ ರಾಜೇಂದ್ರ ಪೈ ಅವರು ಗುರುಮೂರ್ತಿ ಅವರಿಗೆ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು.

Advertisement

ಏಕಗವಾಕ್ಷಿ ಯೋಜನೆಯಡಿ ಒಂದೇ ಚಾವಣಿಯಡಿ ಜನರಿಗೆ ಫಾರಂ ನಂ. 3, ಈ ಸ್ವತ್ತು, ಖಾತೆ ಬದಲಾವಣೆ, ಉದ್ಯಮ ಪರವಾನಿಗೆ ಸೇರಿದಂತೆ ಹಲವು ದಾಖಲೆಗಳನ್ನು ನೀಡುವ ಮೂಲಕ ನಗರಸಭೆ ಜನಸ್ನೇಹಿ ಆಡಳಿತಕ್ಕೆ ಚಾಲನೆ ನೀಡಿದ್ದನ್ನು ಇಲ್ಲಿ ನೆನಪಿಸಬಹುದು. ಪ್ರತಿ ಮಂಗಳವಾರ ಸಾರ್ವಜನಿಕರು ನೀಡಿದ ಅರ್ಜಿಯನ್ನು ಪರಿಶೀಲಿಸಿ ಅದಕ್ಕೆ ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಕೆಲಸ ಮಾಡಲಾಗುತ್ತಿದೆ. ಜನರು ಬೇರೆಬೇರೆ ದಾಖಲೆಗಳನ್ನು ಪಡೆಯಲು ನಗರಸಭೆಗೆ ಅಲೆಯುವುದನ್ನು ತಪ್ಪಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇನ್ನಷ್ಟು ಜನರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಮಾಹಿತಿಯನ್ನು ಈ ಹಿಂದೆಯೇ ನೀಡಿದ್ದರು.

ಮಾರ್ಚ್ ತಿಂಗಳವರೆಗೆ ಈ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರು ತಮ್ಮ ದಾಖಲೆಗಳನ್ನು ಸರಿಪಡಿಸಿಕೊಳ್ಳಬೇಕು. ಕಳೆದ ಎರಡು ವಾರದಲ್ಲಿ 908 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 45 ಉದ್ಯಮ ಪರವಾನಿಗೆ ನೀಡಲಾಗಿದ್ದು, 78 ಜನನ ಮರಣ ಪತ್ರ ಒದಗಿಸಲಾಗಿದೆ. ಇದರಿಂದ ನಗರಸಭೆ ಆದಾಯ ಸಹ ಹೆಚ್ಚುತ್ತಿದೆ. ನಗರಸಭೆಯಿಂದ ಆಸ್ತಿ ತಂತ್ರಾಂಶದಲ್ಲಿ ದಾಖಲಾತಿ ಮಾಡಿಸಿದರೆ ಮುಂದೆ ಅವರಿಗೆ ತೆರಿಗೆ ಪಾವತಿ ಸುಲಭವಾಗುತ್ತದೆ. ಕಂದಾಯ ಪಾವತಿ ಮಾಡಲು ನಗರಸಭೆಯಲ್ಲೆ ಬ್ಯಾಂಕ್ ಕೌಂಟರ್ ತೆರೆಯಲಾಗಿದೆ ಎಂದು ಪೌರಾಯುಕ್ತ ರಾಜು ಡಿ. ಬಣಕಾರ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next