ಹುಬ್ಬಳ್ಳಿ: ಮುಷ್ಕರ ಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು ಎನ್ನುವ ಹೈಕೋರ್ಟ್ ಸೂಚನೆ ಹಾಗೂ ಸಾರಿಗೆ ನೌಕರರು ಮುಷ್ಕರ ಹಿಂಪಡೆದ ಬೆನ್ನಲ್ಲೆ ವಾಯವ್ಯ ಸಾರಿಗೆ ಸಂಸ್ಥೆಯ ಬಸ್ಸುಗಳ ಕಾರ್ಯಾಚರಣೆ ಸಹಜ ಸ್ಥಿತಿಗೆ ಬಂದಿದ್ದು, ಸಂಸ್ಥೆ ವ್ಯಾಪ್ತಿಯಲ್ಲಿ ಬುಧವಾರ 2,847 (ಶೇ.87.36) ಬಸ್‌ಗಳು ಸಂಚಾರ ಮಾಡಿವೆ.
ವಾಯವ್ಯ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಹದಿನಾಲ್ಕು ದಿನಗಳ ನಂತರ ಮೊದಲ ಬಾರಿಗೆ ರಾತ್ರಿ 8ಗಂಟೆ ಹೊತ್ತಿಗೆ 3259 ಬಸ್‌ಗಳ ಪೈಕಿ 2847 ಬಸ್‌ಗಳ ಕಾರ್ಯಾಚರಣೆ ಮಾಡಿದ್ದು, 412 ಅನುಸೂಚಿಗಳು ರದ್ದಾಗಿವೆ. ಕಳೆದ 15 ದಿನಗಳ ಮುಷ್ಕರದಿಂದ ವಾಯವ್ಯ ಸಾರಿಗೆ ಸಂಸ್ಥೆಯ 9 ವಿಭಾಗಗಳಿಗೆ 65.30 ಕೋಟಿ ರೂ. ಸಾರಿಗೆ ಆದಾಯ ನಷ್ಟವಾಗಿದೆ.
ಯಾವ ವಿಭಾಗದಲ್ಲಿ ಎಷ್ಟು?: ಹುಬ್ಬಳ್ಳಿ ಗ್ರಾ 310 (305), ಧಾರವಾಡ 299 (345) ಬೆಳಗಾವಿ 421 (510), ಚಿಕ್ಕೋಡಿ 269 (373), ಬಾಗಲಕೋಟೆ 421 (414), ಗದಗ 390 (385), ಹಾವೇರಿ 283 (356), ಉತ್ತರ ಕನ್ನಡ 238 (299), ಹು-ಧಾ ನಗರ 216 (272) ಬಸ್‌ಗಳು ಸಂಚಾರ ಮಾಡಿವೆ. ಹುಬ್ಬಳ್ಳಿ, ಬಾಗಲಕೋಟೆ ಹಾಗೂ ಗದಗ ವಿಭಾಗಗಳಲ್ಲಿ ಅನುಸೂಚಿಗಳಿಗೆ ಹೆಚ್ಚುವರಿಯಾಗಿ ಕಾರ್ಯಾಚರಣೆ ಮಾಡಲಾಗಿದೆ. ಸಾರಿಗೆ ಸಂಸ್ಥೆಗಳ ಪಾರಮ್ಯ: ಕಳೆದ ಹದಿನಾಲ್ಕು ದಿನಗಳಿಂದ ಇಲ್ಲಿನ ಹಳೇ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ತುಂಬಿದ್ದವು.
ಖಾಸಗಿ ವಾಹನಗಳ ಸಾರಿಗೆ ಸೌಲಭ್ಯ ಕೆಲ ಮಾರ್ಗಗಳಿಗೆ ಮಾತ್ರ ಸೀಮಿತವಾಗಿತ್ತು. ಬುಧವಾರ ಮಾತ್ರ ಇಡೀ ಬಸ್ ನಿಲ್ದಾಣ ತುಂಬೆಲ್ಲಾ ಸಾರಿಗೆ ಸಂಸ್ಥೆ ಬಸ್‌ಗಳು ಪಾರಮ್ಯ ಕಂಡು ಬಂದಿತು. ಸಾರಿಗೆ ಸಂಸ್ಥೆಯ ನೂರಾರು ಬಸ್‌ಗಳ ಕಾರ್ಯಚರಣೆ ಹೆಚ್ಚಾದಂತೆಲ್ಲ ಬಹುತೇಕ ಖಾಸಗಿ ವಾಹನಗಳು ನಿಲ್ದಾಣದಿಂದ ಹೊರ ನಡೆದವು. ಕೆಲ ಖಾಸಗಿ ವಾಹನಗಳ ಏಜೆಂಟ್‌ರಗಳು, ನಿಮ್ಮ ಸಂಸ್ಥೆಯ 2 ಬಸ್‌ಗಳು ಹೋದ ನಂತರ ನಮ್ಮದೊಂದು ವಾಹನ ಬಿಡಿ. ನಾಳೆಯಿಂದ ಇತ್ತ ಕಡೆ ಬರುವುದಿಲ್ಲ ಎಂದು ಸಾರಿಗೆ ಸಂಸ್ಥೆ ಅಧಿ ಕಾರಿಗಳು, ಸಿಬ್ಬಂದಿಯನ್ನು ಕೇಳುತ್ತಿರುವುದು ಕಂಡು ಬಂದಿತು. ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆಯೂ ಏರುಮುಖವಾಗುತ್ತಿರುವುದು ಕಂಡು ಬಂದಿತು.