ಚಿತ್ರರಂಗಕ್ಕೂ, ಗೋವಿಂದನಿಗೂ ಮೊದಲಿನಿಂದಲೂ ಒಂಥರಾ ಬಿಡಿಸಲಾಗದ ನಂಟು. ಅದೆಷ್ಟೋ ನಿರ್ಮಾಪಕರು, ನಿರ್ದೇಶಕರು, ಸ್ಟಾರ್ಗೆ ಗೋವಿಂದನೇ ಫೇವರೆಟ್ ಗಾಡ್. ಇನ್ನು ಅದೆಷ್ಟೋ ಚಿತ್ರಗಳಿಗೆ ಗೋವಿಂದನ ನಾಮ ಬಲವೇ ಒಂಥರಾ ರಕ್ಷಾ ಕವಚವಿದ್ದಂತೆ. ಈಗ ಚಂದನವನದಲ್ಲಿ ಅದೇ “ಗೋವಿಂದ’ನ ನಾಮ ಸ್ಮರಣೆಯಲ್ಲಿ ಮತ್ತೂಂದು ಚಿತ್ರ ತೆರೆಗೆ ಬರೋದಕ್ಕೆ ಸಿದ್ಧವಾಗುತ್ತಿದೆ. ಅಂದಹಾಗೆ, ಆ ಚಿತ್ರದ ಹೆಸರೇ “ಗೋವಿಂದ… ಗೋವಿಂದ’
ಚಿತ್ರದ ಹೆಸರೇನೋ “ಗೋವಿಂದ… ಗೋವಿಂದ’ ಅಂತಿದ್ದರೂ, ಇದೇನೂ ಪೌರಾಣಿಕ ಚಿತ್ರವಲ್ಲ. ಗಾಡ್ ಗೋವಿಂದನಿಗೂ ಚಿತ್ರಕ್ಕೂ ನೇರಾನೇರಾ ಸಂಬಂಧವಂತೂ ಇಲ್ಲವೇ ಇಲ್ಲ. ಆದ್ರೆ ಚಿತ್ರದಲ್ಲಿ ಬರುವ ಪ್ರತಿ ಪಾತ್ರಗಳು ಗೋವಿಂದನ ಹೆಸರನ್ನು, ಗೋವಿಂದನಿಗೆ ಸಂಬಂಧಿಸಿದ ಹೆಸರುಗಳನ್ನೇ ಹೊಂದಿವೆಯಂತೆ. ಹಾಗಾಗಿ ಚಿತ್ರಕ್ಕೆ ಇಂಥದ್ದೊಂದು ಟೈಟಲ್ ಇಟ್ಟಿದ್ದೇವೆ ಎನ್ನುತ್ತದೆ ಚಿತ್ರತಂಡ. ಇನ್ನು “ಗೋವಿಂದ… ಗೋವಿಂದ’ ಚಿತ್ರದ ಟೈಟಲ್‌ಗೆ “ಹುಂಡಿ ನಮುª ಕಾಸ್ ನಿಮುª’ ಎಂಬ ಟ್ಯಾಗ್‌ಲೈನ್ ಇದ್ದು, ಕಾಮಿಡಿ ಕಂ ಸಸ್ಪೆನ್ಸ್- ಥ್ರಿಲ್ಲರ್ ಶೈಲಿಯಲ್ಲಿ ಚಿತ್ರ ಮೂಡಿಬರುತ್ತಿದೆ. ಸದ್ಯ ಸದ್ದಿಲ್ಲದೆ ಮುಕ್ಕಾಲು ಭಾಗ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ತಮ್ಮ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ನೀಡಲು ಮಾಧ್ಯಮಗಳ ಮುಂದೆ ಬಂದಿತ್ತು.
ಹಿರಿಯ ನಿರ್ಮಾಪಕ ಎಸ್. ಶೈಲೇಂದ್ರ ಬಾಬು, ಕಿಶೋರ್ ಎಂ.ಕೆ ಮಧುಗಿರಿ ಮತ್ತು ರವಿ ಆರ್ ಗರಣಿ ಜಂಟಿಯಾಗಿ ನಿರ್ಮಿಸುತ್ತಿರುವ “ಗೋವಿಂದ… ಗೋವಿಂದ’ ಚಿತ್ರಕ್ಕೆ ನವ ನಿರ್ದೇಶಕ ತಿಲಕ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಹಿರಿಯ ನಿರ್ಮಾಪಕ ಎಸ್. ಶೈಲೇಂದ್ರ ಬಾಬು ಪುತ್ರ ಸುಮಂತ್ ಶೈಲೇಂದ್ರ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದು ಕವಿತಾ ಗೌಡ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜಾಕಿ ಭಾವನಾ ಕೂಡ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ರೂಪೇಶ್ ಶೆಟ್ಟಿ, ಬೆನಕ ಪವನ್, ಅಚ್ಯುತ ಕುಮಾರ್, ವಿಜಯ್ ಚಂಡೂರ್, ಶೋಭರಾಜ್, ಸುನೇತ್ರಾ ಪಂಡಿತ್, ಪದ್ಮಾ ವಸಂತಿ, ಗೋವಿಂದೇ ಗೌಡ, ಶ್ರೀನಿವಾಸ ಪ್ರಭು ಮೊದಲಾದ ಕಲಾವಿದರ ದಂಡೇ ಚಿತ್ರದಲ್ಲಿದೆ.
ಚಿತ್ರದ ಬಗ್ಗೆ ಮೊದಲು ಮಾತಿಗಿಳಿದ ನಿರ್ದೇಶಕ ತಿಲಕ್, “ಜೀವನದಲ್ಲಿ ಗೋಲ್ ಇಲ್ಲದ ಮೂವರು ಹುಡುಗರು ಹಣ ಮಾಡಲು ಹುಡುಗಿಯ ಅಪಹರಣಕ್ಕೆ ಪ್ಲ್ರಾನ್ ಮಾಡುತ್ತಾರೆ. ನಂತರ ಅಲ್ಲಿ ಏನೇನು ನಡೆಯುತ್ತದೆ ಅನ್ನೋದು ಚಿತ್ರದ ಕಥೆಯ ಒಂದು ಎಳೆ. ಹಣದ ಹಿಂದೆ ಓಡುವ ಪಾತ್ರಗಳು ನಂತರ ಸ್ನೇಹವನ್ನು, ಜೀವವನ್ನು ಉಳಿಸಿಕೊಳ್ಳಲು ಏನೆಲ್ಲ ಸರ್ಕಸ್ ಮಾಡುತ್ತವೆ ಅನ್ನೋದೆ ಚಿತ್ರ. ಇಡೀ ಚಿತ್ರದಲ್ಲಿ ಕಾಮಿಡಿ, ಸೆಂಟಿಮೆಂಟ್, ಥ್ರಿಲ್ಲರ್ ಎಲ್ಲವೂ ಇದ್ದು ಕುತೂಹಲ ಮೂಡಿಸುತ್ತ ಚಿತ್ರಕಥೆ ಸಾಗುತ್ತದೆ. ಈಗಾಗಲೇ ಸುಮಾರು 45 ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ನಡೆಸಲಾಗಿದ್ದು, ಎರಡನೇ ಹಂತದಲ್ಲಿ ಎಂಟು-ಹತ್ತು ದಿನ ಚಿತ್ರೀಕರಣ ಬಾಕಿಯಿದೆ’ ಎಂದು ವಿವರಣೆ ನೀಡಿದರು.
ಸುಮಾರು ಮೂರು ವರ್ಷಗಳ ನಂತರ ನಟ ಸುಮಂತ್ ಶೈಲೇಂದ್ರ ಮತ್ತೆ ಕನ್ನಡ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದು ತಮ್ಮ ಪಾತ್ರದ ಬಗ್ಗೆ ಸುಮಂತ್ ಸಾಕಷ್ಟು ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಸುಮಂತ್, “ಸುಮಾರು ಎರಡೂವರೆ-ಮೂರು ವರ್ಷಗಳ ಕಾಲ ಸಿನಿಮಾಗಳಿಂದ ಸ್ವಲ್ಪ ಗ್ಯಾಪ್ ಆಗಿತ್ತು. ಇದರ ನಡುವೆ ಕನ್ನಡದಲ್ಲಿ ಕೆಲವು ಆಫರ್ ಬಂದರೂ, ಸಬೆjಕ್ಟ್ ಇಷ್ಟವಾಗದಿದ್ದರಿಂದ ಯಾವುದನ್ನೂ ಒಪ್ಪಿಕೊಂಡಿರಲಿಲ್ಲ. ಒಂದೊಳ್ಳೆ ಸಿನಿಮಾದ ಮೂಲಕ ಆಡಿಯನ್ಸ್ ಮುಂದೆ ಬರಬೇಕು ಅಂಥ ಕಾಯುತ್ತಿದೆ. ಅದೇ ವೇಳೆ “ಗೋವಿಂದ ಗೋವಿಂದ’ ಸಿನಿಮಾ ಸಿಕ್ಕಿತು. ನಾನು ಇಲ್ಲಿಯವರೆಗೆ ಮಾಡಿದ ಸಿನಿಮಾಗಳಿಗಿಂತ ಇದರ ಕಥೆ ತುಂಬಾ ವಿಭಿನ್ನವಾಗಿದ್ದರಿಂದ, ಮೊದಲು ಸ್ವಲ್ಪ ಸಮಯ ತೆಗೆದುಕೊಂಡೆ. ನಂತರ ನಿರ್ದೇಶಕರು, ನಿರ್ಮಾಪಕರು, ಚಿತ್ರತಂಡ ಭರವಸೆ ತುಂಬಿದ ಮೇಲೆ ಸಿನಿಮಾ ಒಪ್ಪಿಕೊಂಡೆ. ಅನೇಕ ವರ್ಷಗಳಿಂದ ಪಿಯುಸಿ ಫೇಲ್ ಆಗುತ್ತಲೇ ಬರುತ್ತಿರುವ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದರು.
ಚಿತ್ರದಲ್ಲಿ ಸುಮಂತ್ ಶೈಲೇಂದ್ರಗೆ ನಾಯಕಿಯಾಗಿ ಅಭಿನಯಿಸುತ್ತಿರುವ ಕವಿತಾ ಗೌಡ, “ಅಲಮೇಲು’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. “ಮಾತು ಕಡಿಮೆಯಿರುವ ಆದ್ರೆ ಭಾವಾಭಿನಯಕ್ಕೆ ಹೆಚ್ಚು ಒತ್ತು ಇರುವ ಪಾತ್ರ ನನ್ನದು. ಇಡೀ ಟೀಮ್ ಜೊತೆ ಕೆಲಸ ಮಾಡುತ್ತಿರುವುದು ಖುಷಿ ನೀಡಿದೆ’ ಎಂದು ಸಂಕ್ಷಿಪ್ತ ವಿವರಣೆ ಕೊಟ್ಟು ಮಾತಿಗೆ ಬ್ರೇಕ್ ಹಾಕಿದರು ಕವಿತಾ. ಉಳಿದಂತೆ ವೇದಿಕೆಯಲ್ಲಿ ಹಾಜರಿದ್ದ ಚಿತ್ರದ ಕಲಾವಿದರು, ನಿರ್ಮಾಪಕರು ತಂತ್ರಜ್ಞರು “ಗೋವಿಂದ ಗೋವಿಂದ’ ಚಿತ್ರದ ಇಲ್ಲಿಯವರೆಗಿನ ಚಿತ್ರೀಕರಣದ ಅನುಭವ ಹಂಚಿಕೊಂಡರು.