Advertisement

ಕರ್ತವ್ಯ ಲೋಪ ಎಸಗುವ ವೈದ್ಯರ ಬಿಡುಗಡೆಗೊಳಿಸಿ ­

08:05 PM Jun 01, 2021 | Team Udayavani |

ಬೆಳಗಾವಿ: ಕರ್ತವ್ಯ ನಿರ್ಲಕ್ಷ್ಯ ತೋರುವ ವೈದ್ಯರು ಹಾಗೂ ಇತರೆ ವೈದ್ಯಕೀಯ ಸಿಬ್ಬಂದಿಯನ್ನು ಮುಲಾಜಿಲ್ಲದೇ ಸೇವೆಯಿಂದ ಬಿಡುಗಡೆಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಹಾಗೂ ಬಿಮ್ಸ್‌ ನಿರ್ದೇಶಕರಿಗೆ ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಜಿಲ್ಲೆಯಲ್ಲಿ ಕೋವಿಡ್‌ ಹಾಗೂ ಪ್ರವಾಹ ನಿರ್ವಹಣೆಗೆ ಸಂಬಂ ಧಿಸಿದಂತೆ ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಹಿರಿಯ ಅ ಧಿಕಾರಿಗಳ ಜತೆ ನಡೆದ ಆನ್‌ಲೈನ್‌ ಸಭೆಯಲ್ಲಿ ಅವರು ಮಾತನಾಡಿದರು.

ಬಿಮ್ಸ್‌ ಬಗ್ಗೆ ಅನೇಕ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು. ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಲು ಜಿಲ್ಲಾ ಧಿಕಾರಿಗಳಿಗೆ ಅ ಧಿಕಾರವಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಕರ್ತವ್ಯಲೋಪ ಎಸಗುವ ವೈದ್ಯರು ಮತ್ತು ಇತರೆ ಸಿಬ್ಬಂದಿಯನ್ನು ಸೇವೆಯಿಂದ ಬಿಡುಗಡೆಗೊಳಿಸಬೇಕು. ಬಿಮ್ಸ್‌ ನಿರ್ದೇಶಕರಿಗೆ ಇದು ಸಾಧ್ಯವಾಗದಿದ್ದಲ್ಲಿ ಜಿಲ್ಲಾ ಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಅಂಥವರ ವಿರುದ್ಧ ಜಿಲ್ಲಾ ಧಿಕಾರಿಗಳು ಕ್ರಮ ತೆಗೆದುಕೊಳ್ಳಲಿದ್ದಾರೆ. ಬಿಮ್ಸ್‌ನಲ್ಲಿ ಬಿಪಿಎಲ್‌ ಕಾರ್ಡುದಾರರಿಗೆ ಚಿಕಿತ್ಸೆ ನೀಡಲು ಆದ್ಯತೆ ನೀಡಬೇಕು ಎಂದು ಸಚಿವರು ತಿಳಿಸಿದರು.

ಕೋವಿಡ್‌ ಚಿಕಿತ್ಸೆಗೆ ಸಂಬಂಧಿ ಸಿದಂತೆ ಆಕ್ಸಿಜನ್‌, ಔಷಧ ಸೇರಿದಂತೆ ಎಲ್ಲ ಅಗತ್ಯ ವ್ಯವಸ್ಥೆಯನ್ನು ಸರ್ಕಾರದಿಂದ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಸೋಂಕಿತರ ಚಿಕಿತ್ಸೆ ಹಾಗೂ ಆರೈಕೆಯಲ್ಲಿ ಸಮಸ್ಯೆಯಾಗಬಾರದು ಎಂದರು. ಬ್ಲಾ ಬ್ಲ್ಯಾಕ್ ಫಂಗಸ್‌ ಸೇರಿದಂತೆ ಸೋಂಕಿತರಿಗೆ ಎಲ್ಲ ರೀತಿಯ ಚಿಕಿತ್ಸೆ ನೀಡಬೇಕು. ಆಸ್ಪತ್ರೆಗಳಲ್ಲಿ ರೋಗಿಗಳು ಮೃತಪಟ್ಟರೆ ಒಂದು ತಾಸಿನೊಳಗೆ ಅವರ ಕುಟುಂಬದವರಿಗೆ ಮೃತದೇಹವನ್ನು ಹಸ್ತಾಂತರಿಸಬೇಕು. ಬ್ಲ್ಯಾಕ್‌ ಫಂಗಸ್‌ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿವೆ. ಈ ಪ್ರಕರಣಗಳ ಚಿಕಿತ್ಸೆಗೆ ಸಂಬಂ ಧಿಸಿದಂತೆ ಬಿಮ್ಸ್‌ ವೈದ್ಯರ ಮೇಲಿನ ಹೊರೆ ಕಡಿಮೆಗೊಳಿಸಲು ಕೇಸ್‌ ಗಳ ಆಧಾರದ ಮೇಲೆ ಖಾಸಗಿ ವೈದ್ಯರ ಸೇವೆಯನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಲಸಿಕಾಕರಣ ಬಗ್ಗೆ ಮಾಹಿತಿಯನ್ನು ಪಡೆದುಕೊಂಡ ಸಚಿವರು, ಈಗಾಗಲೇ ಮೊದಲ ಡೋಸ್‌ ಪಡೆದುಕೊಂಡಿರುವವರಿಗೆ ಆದ್ಯತೆ ಮೇರೆಗೆ ಎರಡನೇ ಡೋಸ್‌ ಲಸಿಕೆಯನ್ನು ನೀಡಬೇಕು ಎಂದು ತಿಳಿಸಿದರು. ಪ್ರವಾಹ-ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ: ಮಳೆಗಾಲ ಆರಂಭಗೊಳ್ಳಲಿದ್ದು, ನದಿತೀರದ 377 ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಬಹುದು ಎಂದು ಅಂದಾಜಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಈ ಗ್ರಾಮದ ಜನರ ರಕ್ಷಣೆ ಹಾಗೂ ಪುನರ್ವಸತಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಚಿವ ಕಾರಜೋಳ ಅ ಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಈ ಬಾರಿ ಕೋವಿಡ್‌ ಇರುವುದರಿಂದ ಹಿಂದಿಗಿಂತಲೂ ಹೆಚ್ಚಿನ ಸಂಖ್ಯೆಯ ಕಾಳಜಿ(ಪರಿಹಾರ) ಕೇಂದ್ರಗಳನ್ನು ಆರಂಭಿಸಬೇಕು. ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುವ ಜನರಿಗೆ ಊಟೋಪಹಾರ, ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅದೇ ರೀತಿ ಜಾನುವಾರುಗಳಿಗೂ ರಕ್ಷಣೆ ನೀಡಬೇಕು. ಮೇವು ಮತ್ತು ಲಸಿಕೆ ದಾಸ್ತಾನು ಇಟ್ಟುಕೊಳ್ಳಬೇಕು ಎಂದು ಹೇಳಿದರು. ಪ್ರವಾಹ ಸಂದರ್ಭದಲ್ಲಿ ವಿದ್ಯುತ್‌ ಸಮಸ್ಯೆ ಉಂಟಾಗಲಿದೆ. ಹೀಗಾಗಿ ಮುಂಚಿತವಾಗಿಯೇ ಟಿಸಿ, ಕಂಡಕ್ಟರ್‌ (ವಿದ್ಯುತ್‌ ವಾಹಕ), ವಿದ್ಯುತ್‌ ಕಂಬಗಳು, ತಂತಿ ಮತ್ತಿತರ ಪರಿಕರಗಳ ದಾಸ್ತಾನು ಇಟ್ಟುಕೊಳ್ಳಬೇಕು ಎಂದು ಅ ಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪ್ರವಾಹ ನಿರ್ವಹಣೆಗೆ ಸಂಬಂ ಧಿಸಿದಂತೆ ಮಾಡಿಕೊಳ್ಳಲಾಗಿರುವ ಪೂರ್ವಸಿದ್ಧತೆಗಳ ಮಾಹಿತಿಯನ್ನು ನೀಡಿದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು, ಪ್ರವಾಹದಿಂದ ಬಾ ಧಿತಗೊಳ್ಳಬಹುದಾದ 377 ಗ್ರಾಮಗಳ ಜನರ ರಕ್ಷಣೆ ಮತ್ತು ತಾತ್ಕಾಲಿಕ ಪುನರ್ವಸತಿಗೆ 500 ಕಾಳಜಿ ಕೇಂದ್ರಗಳನ್ನು ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಸ್ಮಾರ್ಟ್‌ ಸಿಟಿ ಕಾಮಗಾರಿ ಚುರುಕುಗೊಳಿಸಿ: ಸ್ಮಾರ್ಟ್‌ ಸಿಟಿ ಯೋಜನೆಯಡಿ ಬೆಳಗಾವಿ ನಗರದಲ್ಲಿ ನಡೆದಿರುವ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದ ಸಚಿವರು, ಲಾಕ್‌ಡೌನ್‌ ಸಂದರ್ಭವನ್ನು ಬಳಸಿಕೊಂಡು ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಸ್ಮಾರ್ಟ್‌ಸಿಟಿ ಯೋಜನೆಯಡಿ ಇದುವರೆಗೆ ಪೂರ್ಣಗೊಂಡಿರುವ ಕಾಮಗಾರಿಗಳ ನಿರ್ವಹಣೆ ಕೂಡ ಮುಖ್ಯವಾಗಿದ್ದು, ಇದರ ಬಗ್ಗೆ ಗಮನಹರಿಸುವಂತೆ ಹೇಳಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಸಂಸದೆ ಮಂಗಲಾ ಅಂಗಡಿ ಅವರು, ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೊಳ್ಳಲಾಗಿರುವ ಪ್ರಮುಖ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಹೇಳಿದರು. ಸುವರ್ಣಸೌಧಕ್ಕೆ ಸೋಲಾರ್‌ ಪ್ಯಾನೆಲ್‌: ಸ್ಮಾರ್ಟ್‌ ಸಿಟಿ ಯೋಜನೆಯಡಿ ಬಿಡಿ ಬಿಡಿಯಾಗಿ ಸರ್ಕಾರಿ ಕಚೇರಿಗಳ ಮೇಲೆ ಸೋಲಾರ್‌ ಫಲಕಗಳನ್ನು ಅಳವಡಿಸುವ ಬದಲು ಸುವರ್ಣ ವಿಧಾನಸೌಧದ ಮೇಲೆ ಸೋಲಾರ್‌ ವಿದ್ಯುತ್‌ ಫಲಕಗಳನ್ನು ಅಳವಡಿಸುವುದು ಸೂಕ್ತ. ಈ ಬಗ್ಗೆ ಪ್ರಸ್ತಾವ ಸಲ್ಲಿಸುವಂತೆ ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ಅವರಿಗೆ ಸಚಿವ ಗೋವಿಂದ ಕಾರಜೋಳ ಸೂಚನೆ ನೀಡಿದರು.

ಸುವರ್ಣ ವಿಧಾನಸೌಧದ ಮೇಲೆ ಸೋಲಾರ್‌ ವಿದ್ಯುತ್‌ ಪ್ಯಾನೆಲ್‌ ಅಳವಡಿಕೆಗೆ ಸರಕಾರದಿಂದ ಅಗತ್ಯ ಅನುಮತಿಯನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಗರದ ಕೋಟೆ ಕೆರೆಗೆ ಸುತ್ತಮುತ್ತಲ ಬಡಾವಣೆಗಳ ಚರಂಡಿ ನೀರು ಸೇರದಂತೆ ಸೂಕ್ತ ಕ್ರಮಕೈಗೊಳ್ಳಬೇಕು. ಕೆರೆ ಆವರಣದಲ್ಲಿ ಮಕ್ಕಳ ಪಾರ್ಕ್‌ ಸ್ಥಾಪಿಸಬೇಕು ಎಂದು ಸಲಹೆ ನೀಡಿದರು.

ಸಣ್ಣ ನೀರಾವರಿ ಇಲಾಖೆಯಿಂದ ಕೈಗೊಳ್ಳಲಾಗುವ ಕಾಮಗಾರಿಗಳನ್ನು ಆಯಾ ವರ್ಷವೇ ಪೂರ್ಣಗೊಳಿಸಬೇಕು. ಯಾವುದೇ ಯೋಜನೆ ಜಾರಿಗೊಳಿಸುವ ಮುಂಚೆ ಕಡ್ಡಾಯವಾಗಿ ಭೂಸ್ವಾ  ಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಸಚಿವ ಕಾರಜೋಳ ತಿಳಿಸಿದರು. ಕೃಷಿ, ತೋಟಗಾರಿಕೆ, ಪಶುಪಾಲನೆ, ಸಣ್ಣ ನೀರಾವರಿ, ಆರೋಗ್ಯ ಇಲಾಖೆಗಳ ಮಾಹಿತಿ ಪಡೆದುಕೊಂಡರು.

ಜಿಲ್ಲಾ ಧಿಕಾರಿ ಎಂ.ಜಿ. ಹಿರೇಮಠ, ಜಿಪಂ ಸಿಇಒ ದರ್ಶನ್‌, ಪೊಲೀಸ್‌ ಆಯುಕ್ತ ಡಾ. ಕೆ. ತ್ಯಾಗರಾಜನ್‌, ಎಸ್‌ಪಿ ಲಕ್ಷ್ಮಣ ನಿಂಬರಗಿ, ಬಿಮ್ಸ್‌ ನಿರ್ದೇಶಕ ಡಾ. ವಿನಯ ದಾಸ್ತಿಕೊಪ್ಪ, ಪಾಲಿಕೆಯ ಆಯುಕ್ತ ಜಗದೀಶ್‌, ಅಪರ ಜಿಲ್ಲಾ ಧಿಕಾರಿ ಅಶೋಕ ದುಡಗುಂಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ. ಎಸ್‌.ವಿ. ಮುನ್ಯಾಳ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಸೇರಿದಂತೆ ವಿವಿಧ ಇಲಾಖೆಯ ಹಿರಿಯ ಅಧಿ  ಕಾರಿಗಳು ಆನ್‌ಲೆ„ನ್‌ ಸಭೆಯಲ್ಲಿ ಭಾಗವಹಿಸಿದ್ದರು.

ಸುವರ್ಣ ವಿಧಾನಸೌಧ, ಜಿಲ್ಲಾ ಉಸ್ತುವಾರಿ ಸಚಿವ, ಗೋವಿಂದ ಕಾರಜೋಳ,

Advertisement

Udayavani is now on Telegram. Click here to join our channel and stay updated with the latest news.

Next