Advertisement

“ಮೋದಿ ಅಟ್‌-20: ಡ್ರೀಮ್ಸ್‌ ಮೀಟ್‌ ಡೆಲಿವರಿ’ಕೃತಿ ಅನಾವರಣಗೊಳಿಸಿ ಸಿಎಂ ಬೊಮ್ಮಾಯಿ

12:36 AM Jun 28, 2022 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರದ ರಾಜಕಾರಣ ಮಾಡದೆ ಜನರ ರಾಜಕಾರಣ ಮಾಡಿದ್ದರಿಂದ ದೇಶದ ಇತಿಹಾಸ, ಚರಿತ್ರೆ ಮತ್ತು ಭವಿಷ್ಯದಲ್ಲಿ ಚಿರಸ್ಮರಣೀಯರಾಗಿ ಇರಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು.

Advertisement

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ “ಮೋದಿ ಅಟ್‌-20: ಡ್ರೀಮ್ಸ್‌ ಮೀಟ್‌ ಡೆಲಿವರಿ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮೋದಿ ಬರುವ ಮೊದಲು ಹಲವಾರು ಸ್ಪಷ್ಟ ನೀತಿ ಇಲ್ಲದ ಕಾರಣ ಹಗರಣಗಳ ದೇಶ, ಕಠಿನ ನಿಲುವು ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಅರಾಜಕತೆ ಮೂಡಿತ್ತು, ಆದರೆ ಮೋದಿ ಆರ್ಥಿಕತೆ, ಸಾಮಾಜಿಕ ಬದಲಾವಣೆ ತಂದಿದ್ದಾರೆ. ಜನರ ಜೀವನ ಗುಣಮಟ್ಟ ಸುಧಾರಣೆ, ಕಾನೂನು ವ್ಯವಸ್ಥೆ, ಬಂದರು ಅಭಿವೃದ್ಧಿ, ಜನಸಾಮಾನ್ಯರಿಗೆ ಬೇಕಾದ ವ್ಯವಸ್ಥೆಯನ್ನು ಬದಲಾಯಿಸಿದ್ದಾರೆ ಎಂದು ಹೇಳಿದರು.

ಗಾಂಧಿ ಕಂಡ ಸ್ವಚ್ಛ  ಭಾರತದ ಬಗ್ಗೆ ಎಲ್ಲ ಪ್ರಧಾನಿಗಳು ಕಡೆಗಣಿಸಿದ್ದರು. ಆದರೆ ಮೋದಿ ಅವರು “ಸ್ವಚ್ಛ  ಭಾರತ್‌’ ಪರಿಕಲ್ಪನೆ ಕಂಡವರು. ಪ್ರತಿ ಮನೆ ಮನೆಗೆ ನೀರು ನೀಡುವುದಾಗಿ ಘೋಷಿಸಿದ್ದಾರೆ. ಅಸಾಧ್ಯವಾದುದನ್ನು ಸಾಧ್ಯವಾಗಿಸಿದ್ದಾರೆ. ತಂತ್ರಜ್ಞಾನ ಬಳಸಿ ನೇರವಾಗಿ ಫ‌ಲಾನುಭವಿಗಳಿಗೆ ಅನುದಾನ ಬಿಡುಗಡೆ, 66 ಸಾವಿರ ಕೋಟಿ ರೂ. ವೆಚ್ಚದಲ್ಲಿ ಸೆಮಿಕಂಡಕ್ಟರ್‌ ಉತ್ಪಾದನ ಘಟಕ ನಿರ್ಮಾಣ, ಖೇಲೋ ಇಂಡಿಯಾ ಮೂಲಕ ದೇಶದ ಇತಿಹಾಸದಲ್ಲಿ ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಹೆಚ್ಚು ಪದಕ ಗೆಲ್ಲುವಂತೆ ಮಾಡಿದ್ದು ಮೋದಿಯವರ ಪರಿವರ್ತನೆಗೆ ಸಾಕ್ಷಿಯಾಗಿದೆ ಎಂದರು.

ಪುಸ್ತಕದಲ್ಲಿ ಕನ್ನಡಿಗರಾದ ಸುಧಾಮೂರ್ತಿ, ಡಾ| ದೇವಿ ಶೆಟ್ಟಿ ಅವರಂಥ ಸಾಧಕರ ಬರಹಗಳಿವೆ. ರಾಜ್ಯದ ನೆಲ ಜಲ, ಕೃಷಿ, ಉದ್ಯಮ, ಹೊಸ ತಂತ್ರಜ್ಞಾನದ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಒಲವಿದೆ. ಆದ್ದರಿಂದ ಅವರ ಸಾಧನೆಯ “ಮೋದಿ 20′ ಕೃತಿಯನ್ನು ಕನ್ನಡಕ್ಕೆ ಅನುವಾದ ಮಾಡಿಸಿ ರಾಜ್ಯದ ಜನರಿಗೆ ನೀಡಲಾಗುತ್ತದೆ ಎಂದರು.
ಕೇಂದ್ರ ವಾರ್ತಾ ಮತ್ತು ಪ್ರಸಾರ ರಾಜ್ಯ ಖಾತೆ ಸಚಿವ ಎಲ್‌. ಮುರುಗನ್‌ ಮಾತನಾಡಿ, ಮೋದಿಯವರು ಪ್ರತಿ ಕ್ಷೇತ್ರದಲ್ಲಿಯೂ ಉತ್ತಮ ಆಡಳಿತ ನೀಡಿದ್ದಾರೆ. ದಲಿತರು, ಬುಡಕಟ್ಟು ಜನಾಂಗ, ಯುವಕರು, ಹೆಣ್ಣು ಮಕ್ಕಳ ಸಬಲೀಕರಣಗೊಳಿಸುವ ಯೋಜನೆಗಳನ್ನು ರೂಪಿಸಿದ್ದಾರೆ ಎಂದು ತಿಳಿಸಿದರು.

ಕಿಸಾನ್‌ ಸಮ್ಮಾನ್‌ ಯೋಜನೆ ಮೂಲಕ ರೈತರಿಗೆ ನೇರವಾಗಿ ಅನುದಾನ ತಲುಪುವಂತೆ ಮಾಡಿರುವುದು ಮಾದರಿ ಕಾರ್ಯಕ್ರಮವಾಗಿದೆ. ಆತ್ಮನಿರ್ಭರ ಭಾರತ ಮೂಲಕ ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡುವ ಮೂಲಕ ಹೊಸ ಭಾರತ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದರು.

Advertisement

ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಮಾತನಾಡಿ, ಮೋದಿ ಅಟ್‌ 20- ಪುಸ್ತಕದಲ್ಲಿ “ದೆ ಆರ್‌ ಕಮ್‌ ವಿಂಡ್ಸ್‌ ಆಫ್ ಚೇಂಜ್‌’ ಎಂಬ ಅಂಕಣವಿದೆ. ಈ ಅಂಕಣವನ್ನು ಮೋದಿ ಕೂಡ ಇಷ್ಟಪಟ್ಟಿದ್ದಾರಂತೆ. ಸಾಮಾನ್ಯ ಜನರೊಂದಿಗೆ ಅವರು ಬೆರೆಯುವುದರಿಂದ ನನ್ನ ಅಂಕಣ ಇಷ್ಟವಾಗಿರಬಹುದು ಎಂದು ಹೇಳಿದರು.

ಸಚಿವರಾದ ಡಾ. ಸಿ.ಎನ್‌. ಅಶ್ವತ್ಥ ನಾರಾಯಣ, ಬಿ.ಸಿ. ಪಾಟೀಲ್‌, ವಿ. ಸೋಮಣ್ಣ, ವಿ. ಸುನೀಲ್‌ಕುಮಾರ್‌, ಶಾಸಕ ಉದಯ್‌ ಗರುಡಾಚಾರ್‌, ನಟಿ ತಾರಾ ಅನುರಾಧಾ ಹಾಗೂ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ ಪ್ರಸಾದ್‌ ಉಪಸ್ಥಿತರಿದ್ದರು.

ಕಠಿನ ದಾರಿ ಸವೆಸಿದ ಮೋದಿ: ಗೆಹ್ಲೋಟ್
ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹ್ಲೋಟ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಬಾಲ್ಯದಿಂದ ದೇಶದ ಪ್ರಧಾನಿಯಾಗುವರೆಗಿನ ಪ್ರಯಾಣವು ಕಷ್ಟಗಳುಮತ್ತು ಕಠಿನ ಪರಿಶ್ರಮದಿಂದ ಕೂಡಿದೆ. ಪ್ರತಿಯೊಬ್ಬ ವ್ಯಕ್ತಿಗೂ ಅವರ ವ್ಯಕ್ತಿತ್ವ ಮತ್ತು ಜೀವನ ಸ್ಫೂರ್ತಿದಾಯಕ ವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಪುಸ್ತಕದ ಮೂಲಕ ಮೋದಿ ಅವರು ರಾಷ್ಟ್ರದ ಏಕತೆ-ಸಮಗ್ರತೆ, ಸಾಮಾಜಿಕ ಸಾಮರಸ್ಯ ಮತ್ತು ರಾಷ್ಟ್ರೀಯವಾದಿ ಚಿಂತನೆ ಯೊಂದಿಗೆ ಮಾಡಿದ ಕಾರ್ಯಗಳ ಮಾಹಿತಿ ದೊರೆಯಲಿದೆ. ದೇಶದ ಹಿತಾಸಕ್ತಿ, ಸಾರ್ವಜನಿಕ ಹಿತಾಸಕ್ತಿ ಜನರ ಚಿಂತನೆಯಲ್ಲಿ ಬದಲಾವಣೆ ಆಗಲಿದೆ ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next