Advertisement

ಉದ್ಯೋಗಾಧಾರಿತ ಶಿಕ್ಷಣದಲ್ಲಿ ಕರ್ನಾಟಕವೇ ಮುಂದು: ರಾಜ್ಯಪಾಲ ಗೆಹ್ಲೋಟ್‌

09:35 PM Jul 24, 2022 | Team Udayavani |

ಬೆಂಗಳೂರು: ಗುಣಮಟ್ಟದ, ತಾಂತ್ರಿಕ, ಉದ್ಯೋಗ ಆಧಾರಿತ ಶಿಕ್ಷಣವನ್ನು ನೀಡುವಲ್ಲಿ ಕರ್ನಾಟಕವು ದೇಶದಲ್ಲೇ ಮುಂಚೂಣಿ ರಾಜ್ಯವಾಗಿದ್ದು, ಬೆಂಗಳೂರು ಎಜುಕೇಷನ್‌ ಹಬ್‌ ಆಗಿದೆ ಎಂದು ರಾಜ್ಯಪಾಲ  ಥಾವರ್‌ಚಂದ್‌ ಗೆಹ್ಲೋಟ್ ಹೇಳಿದರು.

Advertisement

ಮಾಗಡಿ ರಸ್ತೆಯಲ್ಲಿರುವ ತಾವರೆಕೆರೆ ಯಲಚಗುಪ್ಪೆ ಗ್ರಾಮದಲ್ಲಿ ಬಂಟರ ಸಂಘ ನಿರ್ಮಿಸಿರುವ ಆರ್‌ಎನ್‌ಎಸ್‌ ವಿದ್ಯಾನಿಕೇತನ ಕ್ಯಾಂಪಸ್‌-2 ಹಾಗೂ ಲಾಂಛನ ಅನಾವರಣಗೊಳಿಸಿ ಅವರು ಮಾತನಾಡಿದರು.

ರಾಷ್ಟ್ರದ ಹೊಸ ಶಿಕ್ಷಣ ನೀತಿಯು ಜಗತ್ತಿಗೆ ಹೊಸ ದಿಕ್ಕನ್ನು ನೀಡುವುದು ಮಾತ್ರವಲ್ಲ, ಇಡೀ ಮಾನವಕುಲಕ್ಕೆ ಅನುಕೂಲವಾಗಲಿದೆ. ಹೊಸ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆ ಮತ್ತು ಕ್ರೀಡೆಗೆ ಆದ್ಯತೆ ನೀಡಲು ಅವಕಾಶವಿದೆ. ಈ ನಿಟ್ಟಿನಲ್ಲಿ ಸಕ್ರಿಯ ಪ್ರಯತ್ನಗಳನ್ನು ನಡೆಸುವಂತೆ ಸಲಹೆ ನೀಡಿದರು.

ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿರುವ ಆರ್‌ಎನ್‌ಎಸ್‌ ಶಿಕ್ಷಣ ಸಂಸ್ಥೆಯು ಸುಮಾರು 9 ಎಕರೆ ಪ್ರದೇಶದಲ್ಲಿ ಮಾಲಿನ್ಯಮುಕ್ತ ಪರಿಸರದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಕಟ್ಟಡ ಸಂಕೀರ್ಣವನ್ನು ನಿರ್ಮಿಸಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸ, ಕ್ರೀಡೆಗಳ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ಇದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿಯೂ ಸದೃಢರಾಗುವಂತೆ ಕರೆ ನೀಡಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಮಕ್ಕಳಲ್ಲಿ ಚಾರಿತ್ರ್ಯವಂತ, ಶೀಲ, ತ್ಯಾಗ ಮತ್ತು ಸೇವಾ ಮನೋಭಾವ ಜೀವನ ರೂಢಿಸಿಕೊಳ್ಳುವಂತಹ ಶಿಕ್ಷಣವನ್ನು ನೀಡಬೇಕಿದೆ ಎಂದು ಹೇಳಿದರು.

Advertisement

2ನೇ ಮಹಾಯುದ್ಧದ ನಂತರ ಜಪಾನ್‌ ಕೇವಲ 2 ದಶಕಗಳಲ್ಲಿ ಶಿಕ್ಷಣದ ಮೂಲಕ ರಾಷ್ಟ್ರ ನಿರ್ಮಾಣ ಮಾಡಿತು. ಆದರೆ, ನಮ್ಮ ದೇಶದಲ್ಲಿ ಸ್ವಾತಂತ್ರ್ಯ ನಂತರವೂ ಶಿಕ್ಷಣಕ್ಕೆ ಆದ್ಯತೆ ನೀಡದೆ, ಮೇಕಾಲೆ ಇಂಗ್ಲಿಷ್‌ ಶಿಕ್ಷಣ ಪದ್ಧತಿಗೆ ಅಂಟಿಕೊಂಡಿತ್ತು. ಭಾರತದವರಿಗೆ ಸೋಲಿನ ಇತಿಹಾಸ, ಆಳುವ ಸಾಮರ್ಥ್ಯವಿಲ್ಲವೆಂದು ಮಕ್ಕಳಲ್ಲಿ ತುಂಬಿದ್ದರು. ಇದರ ಜತೆಗೆ ದೇಶದ ಬಗ್ಗೆ ಅರ್ಧ ಸತ್ಯವನ್ನು ತಿಳಿಸುವ ಕೆಲಸ ಮಾಡಿದ್ದರು.

ಇದೀಗ ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ನವ ಭಾರತ ನಿರ್ಮಾಣ ಮಾಡಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳು ಚಾರಿತ್ರ್ಯವಂತ ಶಿಕ್ಷಣ ನೀಡಿದಾಗ ಮಾತ್ರ ಜಗತ್ತು ನಮ್ಮನ್ನು ಗುರುವಾಗಿ ಸ್ವೀಕರಿಸುತ್ತದೆ ಎಂದು ಹೇಳಿದರು.

ಮಂತ್ರಾಲಯದ ರಾಘವೇಂದ್ರಸ್ವಾಮಿ ಮಠದ ಶ್ರೀ ಸುಬುದೇಂದ್ರ ತೀರ್ಥ ಸ್ವಾಮೀಜಿ ಮಾತ ನಾ ಡಿ, ಸ್ವದೇಶಿ ಅಭಿಯಾನ ಮಾಡುವುದಾಗಿ ಆರ್‌ಎನ್‌ಎಸ್‌ ಶಿಕ್ಷಣ ಸಂಸ್ಥೆಯು ಆಶ್ವಾಸನೆ ನೀಡಿದ್ದು, ಇದನ್ನು ಅನುಷ್ಠಾನ ಮಾಡುವತ್ತ ಗಮನ ಹರಿಸಬೇಕು. ಈ ಮೂಲಕ ರಾಜ್ಯ, ರಾಷ್ಟ್ರವಲ್ಲ, ವಿಶ್ವಕ್ಕೇ ಮಾದರಿ ಸಂಸ್ಥೆಯಾಗಿ ಬೆಳೆಯಲಿ ಎಂದು ಆಶೀರ್ವದಿಸಿದರು.

ಯಾವುದೇ ದೇಶದಲ್ಲಿ ಆಸ್ಪತ್ರೆಗಳು ಹೆಚ್ಚಾದರೆ ರೋಗಿಗಳ ಸಂಖ್ಯೆ ಹೆಚ್ಚಾಗಿದೆ ಎಂದರ್ಥ. ಪೊಲೀಸ್‌ ಠಾಣೆಗಳು ಜಾಸ್ತಿಯಾದರೆ, ಅಪರಾಧ ಪ್ರಕರಣಗಳು ಹೆಚ್ಚಳವಾಗಿವೆ ಎನ್ನಬಹುದು. ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡರೆ ಅದು ದೇಶದ ಪ್ರಗತಿಯ ಸಂಕೇತ. ಕೃಷಿ ಕ್ಷೇತ್ರದಲ್ಲಿದ್ದ ಬಂಟರ ಸಮುದಾಯವು ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಲೋಕಾಯುಕ್ತ ನ್ಯಾ.ಪಿ.ವಿಶ್ವನಾಥಶೆಟ್ಟಿ, ಬೆಂವಿವಿ ಕುಲಪತಿ ಡಾ.ಎಸ್‌.ಎಂ. ಜಯಕರಶೆಟ್ಟಿ, ಉದ್ಯಮಿ ಶಶಿಕಿರಣ್‌ ಶೆಟ್ಟಿ, ಮಿಸ್‌ ಇಂಡಿಯಾ ಸಿನಿ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಆರ್‌.ಉಪೇಂದ್ರ ಶೆಟ್ಟಿ ಹಾಗೂ ಆರ್‌ಎನ್‌ಎಸ್‌ ಸಂಸ್ಥೆ ಕಾರ್ಯದರ್ಶಿ ಮಧುಕರಶೆಟ್ಟಿ ಉಪಸ್ಥಿತರಿದ್ದರು.

ಮಾಗಡಿ ರಸ್ತೆಯಲ್ಲಿರುವ ತಾವರೆಕೆರೆ ಯಲಚಗುಪ್ಪೆ ಗ್ರಾಮದಲ್ಲಿ ಬಂಟರ ಸಂಘ ನಿರ್ಮಿಸಿರುವ ಆರ್‌ಎನ್‌ಎಸ್‌ ವಿದ್ಯಾನಿಕೇತನ-2 ಕ್ಯಾಂಪಸ್‌ನ ಕಟ್ಟಡ ಸಂಕೀರ್ಣಕ್ಕೆ ರಾಜ್ಯಪಾಲರಾದ ಥಾವರ್‌ಚಂದ್‌ ಗೆಹಲೋತ್‌ ಚಾಲನೆ ನೀಡಿದರು. ಮಂತ್ರಾಲಯದ ರಾಘವೇಂದ್ರಸ್ವಾಮಿ ಮಠದ ಶ್ರೀ ಸುಬುದೇಂದ್ರತೀರ್ಥ ಸ್ವಾಮೀಜಿ, ಆರ್‌ಎನ್‌ಎಸ್‌ ವಿದ್ಯಾನಿಕೇತನ ಆಡಳಿತ ಮಂಡಳಿ ಅಧ್ಯಕ್ಷ  ಕೆ. ಪ್ರಕಾಶ್‌ ಶೆಟ್ಟಿ ಉಪಸ್ಥಿತರಿದ್ದರು.

ಆರ್‌ಎನ್‌ಎಸ್‌ ವಿದ್ಯಾನಿಕೇತನ-2 ಆರ್‌.ಎನ್‌. ಶೆಟ್ಟರ ಕನಸಿನ ಕೂಸಾಗಿದೆ. ಮುಂದಿನ ದಿನಗಳಲ್ಲಿ ಸಮುದಾಯವನ್ನು ಒಟ್ಟಾಗಿ ಕೊಂಡೊಯ್ಯುವ ಜತೆಗೆ ಸಂಸ್ಥೆಯನ್ನು ದೊಡ್ಡ ಮಟ್ಟದಲ್ಲಿ ಬೆಳೆಸುವ ಪ್ರಯತ್ನ ಮಾಡುತ್ತೇನೆ. ವಿದ್ಯಾಸಂಸ್ಥೆಯಿಂದ ಬರುವ ಹಣದಲ್ಲಿ ಶೇ.80ರಷ್ಟನ್ನು ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿನಿಯೋಗ ಮಾಡಲಾಗುತ್ತದೆ.ಕೆ. ಪ್ರಕಾಶ್‌ ಶೆಟ್ಟಿ, ಆರ್‌ಎನ್‌ಎಸ್‌ ವಿದ್ಯಾನಿಕೇತನ ಆಡಳಿತ ಮಂಡಳಿ ಅಧ್ಯಕ್ಷ

 

Advertisement

Udayavani is now on Telegram. Click here to join our channel and stay updated with the latest news.

Next