Advertisement

ಪ್ರವಾಸಿ ತಾಣ ವೀಕ್ಷಿಸಿದ ರಾಜ್ಯಪಾಲ ಗೆಹಲೋತ್‌

12:18 PM May 26, 2022 | Team Udayavani |

ಅಮೀನಗಡ: ದೇವಾಲಯ ವಾಸ್ತುಶೈಲಿಗಳ ತೊಟ್ಟಿಲು, ಪ್ರಯೋಗಾಲಯ ಎಂದೇ ಖ್ಯಾತಿ ಪಡೆದ ಐಹೊಳೆಯ ಐತಿಹಾಸಿಕ ಪ್ರವಾಸಿ ತಾಣಗಳಿಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಮೊದಲ ಬಾರಿಗೆ ಬೇಟಿ ನೀಡಿದರು.

Advertisement

ನಂತರ ಗ್ರಾಮದಲ್ಲಿರುವ ಪ್ರಸಿದ್ಧ ದುರ್ಗಾ ದೇವಾಲಯ, ಮ್ಯೂಸಿಯಂ, ಲಾಡಖಾನ ದೇವಾಲಯ, ಗೌಡರ ದೇವಾಲಯ ವೀಕ್ಷಿಸಿ ಪ್ರವಾಸಿ ಮಾರ್ಗದರ್ಶಿಗಳಿಂದ ಪ್ರವಾಸಿ ತಾಣಗಳ ಬಗ್ಗೆ ಸಮಗ್ರ ಮಾಹಿತಿ ಪಡೆದರು. ಐಹೊಳೆಯಲ್ಲಿ 125ಕ್ಕೂ ಹೆಚ್ಚು ದೇವಾಲಯಗಳಿವೆ ಮತ್ತು ಐಹೊಳೆ ಶಾಸನದಲ್ಲಿ ಮಹಾಭಾರತದ ಯುದ್ಧದ ದಿನಾಂಕ ಉಲ್ಲೇಖವಾಗಿರುವುದನ್ನು ಕೇಳಿ ಅಚ್ಚರಿ ವ್ಯಕ್ತಪಡಿಸಿದರು.

ರಾಜ್ಯಪಾಲರಿಗೆ ಮನವಿ: ಐತಿಹಾಸಿಕ ಪ್ರವಾಸಿ ತಾಣ ಐಹೊಳೆ ಗ್ರಾಮದಲ್ಲಿ 125ಕ್ಕೂ ಹೆಚ್ಚು ದೇವಾಲಯಗಳಿವೆ. ಇಲ್ಲಿಯ ಸ್ಮಾರಕಗಳು 9 ಸಾವಿರ ವರ್ಷಗಳ ಪ್ರಾಚೀನತೆ ಹೊಂದಿವೆ. ಈ ಸ್ಮಾರಕಗಳ ರಕ್ಷಣೆಗಾಗಿ 3 ದಶಕಗಳಿಂದ ಮಾನವ ವಸತಿ ಮನೆಗಳನ್ನು ಸ್ಥಳಾಂತರ ಮಾಡಬೇಕು ಎಂಬುದು ಗ್ರಾಮಸ್ಥರ ಒತ್ತಾಯ ಮತ್ತು 10 ವರ್ಷಗಳ ಹಿಂದೆ ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ ಸ್ಥಳಾಂತರ ಮಾಡಲು ಗ್ರಾಮಕ್ಕೆ ಬಂದು ಸ್ಥಳಾಂತರ ಸಮಾರಂಭ ಮಾಡಿ ಶಿಲಾನ್ಯಾಸ ಮಾಡಿದರು.

ಅಂದಿನಿಂದ ಇಂದಿನವರೆಗೂ ಅಧಿಕಾರಿಗಳು ಗ್ರಾಮಕ್ಕೆ ಬರುವುದು, ಸಭೆ ಮಾಡುವುದು ಮಾತ್ರ ಮಾಡುತ್ತಾರೆ. ಇದರಿಂದ ಗ್ರಾಮದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಮತ್ತು ಪುರಾತತ್ವ ಇಲಾಖೆಯ 1958ನೇ ಸಂರಕ್ಷಣೆ ಕಾಯ್ದೆಯಿಂದಾಗಿ ಗ್ರಾಮದಲ್ಲಿ ಮೂಲ ಸೌಕರ್ಯ ಪಡೆಯಲು ತೀವ್ರ ಸಮಸ್ಯೆ ಉಂಟಾಗಿದೆ.

ಆದ್ದರಿಂದ ಪ್ರಾಚೀನ ಸ್ಮಾರಕಗಳನ್ನು ಉಳಿಸಲು ಗ್ರಾಮ ಸ್ಥಳಾಂತರ ಮಾಡಲು ರಾಜ್ಯ-ಕೇಂದ್ರ ಸರ್ಕಾರಕ್ಕೆ ಆದೇಶ ನೀಡಬೇಕು. ಇದರಿಂದ 125ಕ್ಕೂ ಹೆಚ್ಚು ದೇವಾಲಯಗಳು ಒಂದೇ ಸಮೂಹದಲ್ಲಿ ವೀಕ್ಷಣೆ ಮಾಡಬಹುದು ಎಂದು ರಾಜ್ಯಪಾಲರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.

Advertisement

ಈ ವೇಳೆ ಬಾಗಲಕೋಟೆ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಪುರಾತತ್ವ ಇಲಾಖೆಯ ಎಎಸ್‌ ಎಂ ಕುಮಾರನ್‌, ಹುನಗುಂದ ತಹಶೀಲ್ದಾರ್‌ ಬಸಲಿಂಗಪ್ಪ ನೈಕೋಡಿ, ಗ್ರಾಮಸ್ಥರಾದ ಪಿ.ಎಫ್‌. ಗೋಡಿ, ಅಶೋಕ ಮಾಯಾಚಾರಿ, ಯಮನಪ್ಪ ಮಾದರ, ರಮೇಶ ಭಜಂತ್ರಿ, ಜಗದೀಶ ಹೊಸಮನಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next